ನಂದಿನಿ ಮನುಪ್ರಸಾದ್ ನಾಯಕ್
ಆಷಾಢ ಶುಕ್ರವಾರದ ಸಿದ್ಧತೆ: ಚಾಮುಂಡಿ ಬೆಟ್ಟದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಸುದ್ದಿಗೋಷ್ಟಿಯ ವಿವರ:

ವಿಶ್ವವಿಖ್ಯಾತ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಚರಿಸಲಾಗುವ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಪೂರ್ವಸಿದ್ಧತೆಗಳ ಕುರಿತು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಸುಗಮ ದರ್ಶನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ.
ಆಷಾಢ ಶುಕ್ರವಾರಗಳಂದು ತಾಯಿಯ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕಳೆದ ಬಾರಿ ಎದುರಾಗಿದ್ದ ಕೆಲವು ಸವಾಲು ಮತ್ತು ಸಮಸ್ಯೆಗಳನ್ನು ಮನಗಂಡು, ಈ ಬಾರಿ ಮೂಲಭೂತ ಸೌಕರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಆಷಾಢ ಮಾಸದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ವಿಶೇಷ ಟಿಕೆಟ್ ಹಾಗೂ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಲಾಗಿದ್ದು.
ವಿಶೇಷ ಟಿಕೆಟ್ ಪಡೆದ ಭಕ್ತಾದಿಗಳಿಗೆ ಬೆಟ್ಟಕ್ಕೆ ಹೋಗಲು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಮೊಬೈಲ್ ಆಪ್ (App) ಮೂಲಕವೂ ಆನ್ಲೈನ್ನಲ್ಲಿ 2,000 ರೂ. ಟಿಕೆಟ್ ಖರೀದಿಸಲು ಮುಕ್ತ ಅವಕಾಶ ನೀಡಲಾಗಿದೆ.
ಗಣ್ಯರ ದರ್ಶನದಿಂದ ಸಾಮಾನ್ಯ ಭಕ್ತರಿಗೆ ತೊಂದರೆಯಾಗದಂತೆ ತಡೆಯಲು ಈ ಬಾರಿ ಕಟ್ಟುನಿಟ್ಟಿನ ಸಮಯ ನಿಗದಿಪಡಿಸಲಾಗಿದೆ.
ಬೆಳಿಗ್ಗೆ 5:30 ರಿಂದ 9:30 ರವರೆಗೆ ಮಾತ್ರ ವಿಐಪಿಗಳಿಗೆ ದರ್ಶನದ ವ್ಯವಸ್ಥೆ ಇರಲಿದ್ದು, ಬಳಿಕ ಸಾಮಾನ್ಯ ಸಾರ್ವಜನಿಕರಿಗೆ ಆದ್ಯತೆ ನೀಡಲಾಗುತ್ತದೆ.
ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ಮೂಲಕ ನಡೆದುಕೊಂಡು ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ದಾರಿಯುದ್ದಕ್ಕೂ ಉಚಿತ ಮಜ್ಜಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಜಿಲ್ಲೆಯ ಜಲಾಶಯಗಳಲ್ಲಿ ಕುಡಿಯುವ ನೀರನ್ನು ಕಡ್ಡಾಯವಾಗಿ ಶೇಖರಿಸಿಟ್ಟುಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿಲ್ಲ. ಮುಂದಿನ ದಿನಗಳಲ್ಲಿ ಜನರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನಗರದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಅನಧಿಕೃತ ಬಾರ್ ಅಂಡ್ ರೆಸ್ಟೋರೆಂಟ್ಗಳು ಹಾಗೂ ಪಬ್ಗಳ ಮೇಲೆ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತಸ್ವೀರ್ ಆಸಿಫ್, ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾದಿಕಾರದ ಕಾರ್ಯದರ್ಶಿಗಳಾದ ರೂಪ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.