ರೋಪ್ ವೇ ಕೈಬಿಟ್ಟಿದ್ದು ಒಳ್ಳೆಯ ನಿರ್ಧಾರ: ಮಹಾರಾಜ ಯಧುವೀರ್ ರವರು

ಮೈಸೂರು:8 ಜುಲೈ 2022

ನಂದಿನಿ ಮೈಸೂರು

ಎರಡನೇ ಆಷಾಢ ಶುಕ್ರವಾರ ಮೈಸೂರು ಮಹಾರಾಜರಾದ ಯಧುವೀರ್ ರವರು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆದರು.

ಇಂದು ಮುಂಜಾನೆಯಿಂದಲೇ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದಿವೆ. ತಾಯಿ ಚಾಮುಂಡೇಶ್ವರಿ ನಾಗಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.
ದೇವಾಲಯದ ಆವರಣವನ್ನು ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿದ್ದು, ನವವಧುವಿನಂತೆ ಕಂಗೊಳಿಸುತ್ತಿದೆ.

ಇಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಿ ತಾಯಿಯ ದರ್ಶನ ಪಡೆದರು.

ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು. ರೋಪ್ ವೇ ಕೈಬಿಟ್ಟಿದ್ದು ಒಳ್ಳೆಯ ನಿರ್ಧಾರ. ಇದು ಧಾರ್ಮಿಕ ಸ್ಥಳವಾಗಿರುವುದರಿಂದ ಅದಕ್ಕೆ ಧಕ್ಕೆಯಾಗದ ರೀತಿಯಲ್ಲಿ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು. – ಮಹಾರಾಜ ಯಧುವೀರ್ ರವರು

ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಮಾತನಾಡಿ ಇಂದು ಬೆಳಿಗ್ಗೆ 3.30ರಿಂದಲೇ ದೇವಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಗಿದ್ದು, ದೇವಿಗೆ ನಾಗಲಕ್ಷ್ಮಿ ಅಲಂಕಾರ ಮಾಡಲಾಗಿದೆ. ನವಮಿ ಮೇಲೆಯೇ ದಶಮಿ ಬಂದಿರುವುದು ಬಹಳ ವಿಶೇಷ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆಂಬ ನಿರೀಕ್ಷೆ ಇದೆ. ಸೂಕ್ತವಾಗಿ ಸರ್ಕಾರ ಭಕ್ತಾದಿಗಳಿಗೆ ಎಲ್ಲ ರೀತಿಯಿಂದಲೂ ಅನುಕೂಲ ಮಾಡಿಕೊಟ್ಟಿದ್ದಾರೆ. ಸರ್ಕಾರ ಹೇಳಿದ ನಿಯಮಗಳನ್ನು ಪಾಲಿಸಿ, ಭಕ್ತರು ದರ್ಶನ ಪಡೆಯುವಂತೆ ಮನವಿ ಮಾಡಿದರು.

ಬೆಳಿಗ್ಗೆ 5.30ರಿಂದಲೇ ಭಕ್ತರಿಗೆ ತಾಯಿಯ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ರಾತ್ರಿ 9.30ರವರೆಗೂ ತಾಯಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಇಂದೂ ಕೂಡ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಭಕ್ತರು ಲಲಿತ್ ಮಹಲ್ ಹೆಲಿಪ್ಯಾಡ್ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ಜಿಲ್ಲಾಡಳಿತದಿಂದ ಉಚಿತವಾಗಿ ವ್ಯವಸ್ಥೆ ಮಾಡಿರುವ ಬಸ್ ಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ.

ನಾಡ ಅಧಿದೇವತೆಯ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಬೆಳ್ಳಂಬೆಳಿಗ್ಗೆಯೇ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದರು.

ಚಾಮುಂಡಿಬೆಟ್ಟ ಪ್ರವೇಶಿಸುವ ಮುನ್ನವೇ ಭಕ್ತರು ಎರಡೂ ಲಸಿಕೆ ಪಡೆದಿದ್ದಾರೋ ಇಲ್ಲವೋ ಎಂಬುದರ ವರದಿಯನ್ನು ನೋಡಿಯೇ ಬೆಟ್ಟಕ್ಕೆ ಕಳುಹಿಸಲಾಗುತ್ತಿದೆ.
ಏತನ್ಮಧ್ಯೆ ಮೌಂಟೆಡ್ ಪೊಲೀಸರು ಜನರ ಮಧ್ಯದಲ್ಲಿಯೇ ಪ್ರವೇಶಿಸುತ್ತಿದ್ದು ಜನರು ಕೊಂಚ ಗಾಬರಿಗೊಳಗಾಗಿದ್ದಾರೆ. ಪೊಲೀಸರು ಕುದುರೆ ಏರಿ ಬಂದು ವೀಕ್ಷಣೆ ನಡೆಸುತ್ತಿದ್ದಾರೆ. ತುಂಬಾ ಜನರನ್ನು ನೋಡಿದ ಕುದುರೆ ಗಲಿಬಿಲಿಗೊಂಡು ಕಾಲಿನಿಂದ ಸಾರ್ವಜನಿಕರಿಗೆ ಒದ್ದು ಅನಾಹುತವಾದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ –ಭಕ್ತರು

Leave a Reply

Your email address will not be published. Required fields are marked *