ಕೃಷ್ಣರಾಜಪೇಟೆ:2 ಆಗಸ್ಟ್ 2022
ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಗುರಿಸಾಧನೆ ಮಾಡಬೇಕು ಎಂದು ರಾಜ್ಯ ಸಂಪನ್ಮೂಲ ವೃತ್ತಿ ಮಾರ್ಗದರ್ಶನ ತರಬೇತುದಾರ ವಿಠಲಾಪುರ ಜಯರಾಂ ಕರೆ ನೀಡಿದರು .
ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡೆ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಹಾಗೂ ಯುವಜನರೇ ಭವಿಷ್ಯದ ಭಾರತದ ನಾಯಕರಾದ್ದರಿಂದ ಯುವಜನರಲ್ಲಿ ಮಾನವೀಯ ಮೌಲ್ಯಗಳು, ಸೇವಾಮನೋಭಾವನೆ ಹಾಗೂ ಪರೋಪಕಾರ ಗುಣಗಳನ್ನು ತುಂಬಿ ಸಮಾಜಮುಖಿಯಾಗಿ ಮುನ್ನಡೆಸಿ ಸುಭದ್ರವಾದ ರಾಷ್ಟ್ರವನ್ನು ಕಟ್ಟಲು ಪ್ರೇರೇಪಿಸಿ ತೊಡಗಿಸಿಕೊಳ್ಳುವಂತೆ ಮಾಡಬೇಕಾಗಿದೆ. ನಾನು ನನ್ನದು ಎಂಬ ಸ್ವಾರ್ಥವೇ ತುಂಬಿರುವ ಈ ಸಮಾಜದಲ್ಲಿ ಸಮಾಜಕ್ಕಾಗಿ ನಾವು ಎಂಬ ವಿಶಾಲವಾದ ಮನೋಭಾವನೆಯನ್ನು ಹೊಂದಿರುವ ಯುವಜನರನ್ನು ಸಜ್ಜುಗೊಳಿಸಿ ಮಾರ್ಗದರ್ಶನ ಮಾಡಿ ಮುನ್ನಡೆಸಬೇಕಾಗಿದೆ. ಯುವಜನರು ಕ್ಷಣಿಕ ಸುಖದ ಆಸೆಗೆ ಒಳಗಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳದೇ ಸಮಾಜಮುಖಿಯಾಗಿ ಮುನ್ನಡೆದು ಗುರಿಸಾಧನೆ ಮಾಡಬೇಕು. ಸರ್ಕಾರದ ವಿವಿಧ ಯೋಜನೆಗಳ ಫಲವನ್ನು ಗ್ರಾಮೀಣ ಪ್ರದೇಶದ ಬಡಜನರಿಗೆ ತಲುಪಿಸಲು ಕ್ರಿಯಾಶೀಲರಾಗಿ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಜಯರಾಂ ಕರೆ ನೀಡಿದರು..
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ಉಧ್ಯಮಿಗಳಾದ ಡಾ.ಕೆ.ಎಸ್.ರಾಜೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಹಣ ಆಸ್ತಿಯನ್ನು ಸಂಪಾದಿಸಿ ಕೂಡಿಡುವ ಬದಲಿಗೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ, ಶಿಕ್ಷಣದ ಜ್ಞಾನದ ಬೆಳಕಿನ ಸಂಸ್ಕಾರದ ಶಕ್ತಿಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡುವಂತೆ ಉತ್ತೇಜಿಸಿ ನಿಮ್ಮ ಮಕ್ಕಳನ್ನೇ ಸಮಾಜಕ್ಕೆ ಆಸ್ತಿಯಾಗಿ ಕೊಡುಗೆ ನೀಡಬೇಕು ಎಂದು ರಾಜೇಶ್ ಮನವಿ ಮಾಡಿದರು..
ಕಾಲೇಜಿನ ಪ್ರಾಂಶುಪಾಲರಾದ ಕೆ.ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದ್ವಿತೀಯ ಪಿಯುಸಿ ಶಿಕ್ಷಣವು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾದ್ದರಿಂದ ವಿದ್ಯಾರ್ಥಿಗಳು ಶ್ರಧ್ಧಾಭಕ್ತಿಯಿಂದ ವ್ಯಾಸಂಗ ಮಾಡುವ ಮೂಲಕ ಗುರು ಹಿರಿಯರು ಹಾಗೂ ತಂದೆತಾಯಿಗಳಿಗೆ ಕೀರ್ತಿ ತರಬೇಕು ಎಂದು ಹೇಳಿದರು..
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಾ.ಎಸ್.ಕೃಷ್ಣಮೂರ್ತಿ, ಉಪಪ್ರಾಂಶುಪಾಲ ರವಿಕುಮಾರ್, ಉಪನ್ಯಾಸಕರಾದ ಲಿಂಗಣ್ಣಸ್ವಾಮಿ, ಅನುರಾಧ, ಚಂದ್ರಶೇಖರ್, ಡಿ.ಆರ್.ರಮೇಶ್, ರವಿ, ಎಸ್.ಬಿ.ಹರೀಶ್, ಎಂ.ಜಿ.ರೇವಣ್ಣ, ಜಗಧೀಶ್, ಶಿವರಾಮು, ಮುರುಳಿ, ದ್ವಿತೀಯ ದರ್ಜೆ ಸಹಾಯಕ ಚಂದ್ರು ಸೇರಿದಂತೆ ಕಾಲೇಜು ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪತ್ರಕರ್ತ ಸೈಯ್ಯದ್ ಖಲೀಲ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
*ವರದಿ.ಡಾ.ಕೆ.ಆರ್.ನೀಲಕಂಠ* .
*ಕೃಷ್ಣರಾಜಪೇಟೆ* , *ಮಂಡ್ಯ* .