ಯುಪಿ ಯೋಧಾಸ್‌ ಪಡೆಗೆ ಬೃಹತ್‌ ಅಂತರದ ಜಯ

ನಂದಿನಿ ಮೈಸೂರು

ಬೆಂಗಳೂರು:

ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿವೋ ಪ್ರೋ ಕಬಡ್ಡಿ ಲೀಗ್‌ನ ಎರಡನೇ ಪಂದ್ಯದಲ್ಲಿ ಬಲಿಷ್ಠ ಯುಪಿ ಯೋಧಾಸ್‌ ತಂಡ ತಮಿಳು ತಲೈವಾಸ್‌ ವಿರುದ್ಧ 41-24 ಅಂತರದಲ್ಲಿ ಜಯ ಗಳಿಸಿತು.

ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಯೋಧಾಸ್‌ ಪ್ರಥಮಾರ್ಧದಲ್ಲಿ 23-11 ಅಂತರದಲ್ಲಿ ಮುನ್ನಡೆ ಕಂಡಿತ್ತು. ಅಶು ಸಿಂಗ್‌ (6) ಹಾಗೂ ಸುಮಿತ್‌ (7) ಟ್ಯಾಕಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದು ಯೋಧಾಸ್‌ ಜಯದ ಹೈಲೈಟ್ಸ್‌ ಆಗಿತ್ತು. ಎಂದಿನಂತೆ ಪ್ರದೀಪ್‌ ನರ್ವಾಲ್‌ (6) ಹಾಗೂ ಸುರೆಂದರ್‌ ಗಿಲ್‌ (4) ತಮ್ಮ ನೈಜ ಆಟ ಪ್ರದರ್ಶಿಸಿ ತಂಡದ ಜಯಕ್ಕೆ ನೆರವಾದರು. ತಮಿಳು ತಲೈವಾಸ್‌ ಪರ ಹಿಮಾಂಶು ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಗಳಿಸಿದರು. ಆದರೆ ರೈಡಿಂಗ್‌ನಲ್ಲಿ ಸಂಪೂರ್ಣ ವಿಫಲ ಕಂಡಿದ್ದು ತಲೈವಾಸ್‌ ಸೋಲಿಗೆ ಪ್ರಮುಖ ಕಾರಣವಾಗಿತ್ತು.
ಪ್ರದೀಪ್‌ ನರ್ವಾಲ್‌ ದಾಖಲೆ: ಸ್ಟಾರ್‌ ರೈಡರ್‌ ಪ್ರದೀಪ್‌ ನರ್ವಾಲ್‌ ಪ್ರೋ ಕಬಡ್ಡಿ ಇತಿಹಾದಲ್ಲೇ 1400 ರೈಡಿಂಗ್‌ ಅಂಕಗಳನ್ನು ಗಳಿಸುವ ಮೂಲಕ ಹೊಸ ಇತಿಹಾಸ ಬರೆದರು. ತಮಿಳು ತಲೈವಾಸ್‌ ವಿರುದ್ಧದ ಪಂದ್ಯದಲ್ಲಿ ಎರಡನೇ ಅಂಕ ಗಳಿಸುವ ಮೂಲಕ ಪ್ರದೀಪ್‌ ಈ ಹೊಸ ಮೈಲಿಗಲ್ಲು ದಾಟಿದರು. ಏಕಮುಖವಾಗಿ ನಡೆದ ಪಂದ್ಯದಲ್ಲಿ ಯುಪಿ ಯೋಧಾಸ್‌ ಪ್ರಥಮಾರ್ಧದಲ್ಲಿ 23-11 ಅಂತರದಲ್ಲಿ ಮೇಲುಗೈ ಸಾಧಿಸಿತು. ಯೋಧಾಸ್‌ ಟ್ಯಾಕಲ್‌ನಲ್ಲಿ 9 ಅಂಕಗಳನ್ನು ಗಳಿಸಿ ಎರಡು ಬಾರಿ ತಮಿಳು ತಲೈವಾಸ್‌ ಪಡೆಯನ್ನು ಆಲೌಟ್‌ ಮಾಡಿತು. ಆರಂಭದಲ್ಲೇ ಪ್ರದೀಪ್‌ ನರ್ವಾಲ್‌ ಅವರನ್ನು ಟ್ಯಾಕಲ್‌ನಲ್ಲಿ ಬಂಧಿಸುವ ಮೂಲಕ ತಮಿಳು ತಲೈವಾಸ್‌ ಉತ್ತಮ ಪ್ರದರ್ಶನ ತೋರುವ ಲಕ್ಷಣ ತೋರಿತ್ತು. ಆದರೆ ಪಂದ್ಯ ಸಾಗುತ್ತಿದ್ದಂತೆ ತನ್ನ ನೈಜ ಸಾಮರ್ಥ್ಯವನ್ನು ತೋರಿಸುವಲ್ಲಿ ವಿಫಲವಾಯಿತು.

Leave a Reply

Your email address will not be published. Required fields are marked *