ರೈಲ್ವೆ ಹಳಿಗಳ ಮೇಲೆ ಅತಿಕ್ರಮ ಪ್ರವೇಶದ ವಿರುದ್ಧ ಹೆಚ್ಚಿನ ಜಾಗೃತಿಗಾಗಿ ಸುರಕ್ಷತಾ ಅಭಿಯಾನ ಪ್ರಾರಂಭ

ಮೈಸೂರು:8 ಏಪ್ರಿಲ್ 2022

ನಂದಿನಿ ಮೈಸೂರು

ರೈಲ್ವೆ ಹಳಿಗಳ ಮೇಲೆ ಅತಿಕ್ರಮ ಪ್ರವೇಶದ ವಿರುದ್ಧ ಹೆಚ್ಚಿನ ಜಾಗೃತಿ ಮೂಡಿಸಲು ಮೈಸೂರು ವಿಭಾಗದಿಂದ ಸುರಕ್ಷತಾ ಅಭಿಯಾನ ಏರ್ಪಡಿಸಲಾಗಿತ್ತು.

ಮೈಸೂರು ವಿಭಾಗವು ಇಂದು ಹೆಡ್‌-ಫೋನ್/ಇಯರ್‌-ಫೋನ್‌ಗಳನ್ನು ಬಳಸುತ್ತಾ ರೈಲ್ವೆ ಹಳಿಗಳ ಮೇಲೆ ಅತಿಕ್ರಮ ಪ್ರವೇಶ ಮಾಡುವುದರಿಂದ ಆಗುವ ಅಪಾಯಗಳ ಕುರಿತು ರೈಲು-ಬಳಕೆದಾರರು ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸುರಕ್ಷತಾ ಅಭಿಯಾನವನ್ನು ಪ್ರಾರಂಭಿಸಿತು.

ರೈಲು ಹಳಿಗಳ ಮೇಲೆ ಅತಿಕ್ರಮ ಪ್ರವೇಶ ಮಾಡುವುದರಿಂದ ಉಂಟಾಗುವ ಅಪಾಯಗಳ ಕುರಿತು ರೈಲು ಬಳಕೆದಾರರು ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ರವರು ಇಂದು ಮೈಸೂರು ರೈಲು ನಿಲ್ದಾಣದಲ್ಲಿ ಸುರಕ್ಷತಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ರೈಲು ಹಳಿಗಳನ್ನು ಅತಿಕ್ರಮಿಸುವುದಿಲ್ಲ ಮತ್ತು ರೈಲ್ವೆ ಹಳಿಗಳ ಬಳಿ ಹೆಡ್‌-ಫೋನ್ / ಇಯರ್‌-ಫೋನ್‌ಗಳನ್ನು ಬಳಸುವುದಿಲ್ಲ ಎಂದು ಅವರು ಪ್ರಯಾಣಿಕರು ಮತ್ತು ಇತರ ರೈಲ್ವೆ ಸಿಬ್ಬಂದಿಗೆ ಪ್ರತಿಜ್ಞೆ ಬೋಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಭಾಗೀಯ ವ್ಯವಸ್ಥಾಪಕರು, ಹಳಿಗಳ ಮೇಲಿನ ಯಾವುದೇ ನಿರ್ಲಕ್ಷ್ಯವು ಮಾರಣಾಂತಿಕ ಅವಘಡಗಳಿಗೆ ಕಾರಣವಾಗಬಹುದು ಮತ್ತು ನೂರಾರು ಇತರರ ಜೀವಕ್ಕೆ ಕೂಡ ಅಪಾಯವನ್ನುಂಟುಮಾಡುತ್ತದೆ. ಆದರಿಂದ ರೈಲ್ವೆ ಹಳಿ ಮತ್ತು ಎಲ್‌ಸಿ ಗೇಟ್‌ಗಳನ್ನು ದಾಟುವಾಗ ಜಾಗರೂಕರಾಗಿರಿ ಎಂದು ಮನವಿ ಮಾಡಿದರು. ಇಯರ್‌ಫೋನ್‌ಗಳ ಬಳಕೆಯು ಪಾದಚಾರಿಗೆ ಅಥವಾ ಚಾಲಕನಿಗೆ ಸಮೀಪಿಸುತ್ತಿರುವ ವಾಹನದ ಬಗ್ಗೆ ನಿರ್ಲಕ್ಷ್ಯವನ್ನು ಉಂಟುಮಾಡುತ್ತದೆ ಮತ್ತು ಯಾವುದೇ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಅವರ ಪ್ರತಿಕ್ರಿಯೆ ಸಮಯವನ್ನು ಬಹಳವಾಗಿ ಕಡಿಮೆ ಮಾಡುತ್ತದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು. ರೈಲು ಹಳಿಗಳನ್ನು ದಾಟುವಾಗ ಯಾವಾಗಲೂ ಪಾದಾಚಾರಿ ಮೇಲ್ಸೇತುವೆ ಅಥವಾ ಸುರಂಗ ಮಾರ್ಗಗಳನ್ನು ಬಳಸಬೇಕೆಂದು ಅವರು ಪ್ರಯಾಣಿಕರನ್ನು ಒತ್ತಾಯಿಸಿದರು. ರೈಲ್ವೆ ಹಳಿ ಸೇರಿದಂತೆ ರೈಲ್ವೆ ಆವರಣದಲ್ಲಿ ಯಾವುದೇ ಅನಧಿಕೃತ ಅತಿಕ್ರಮ ಪ್ರವೇಶವು ರೈಲ್ವೆ ಕಾಯ್ದೆ, 1989 ರ ಸೆಕ್ಶನ್147 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು. ಮೈಸೂರು ವಿಭಾಗವು ಹಳಿಗಳ ಸಂರಕ್ಷಣೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಜಾನುವಾರುಗಳು ಹಳಿ ದಾಟುವ ಘಟನೆಗಳನ್ನು ನಿವಾರಿಸಲು ಮತ್ತು ಅನಧಿಕೃತ ಅತಿಕ್ರಮ ಪ್ರವೇಶವನ್ನು ತಡೆಯಲು ಅಗತ್ಯವಾದ ಸ್ಥಳಗಳಲ್ಲಿ ಮತ್ತು ಪ್ರಮುಖ ರೈಲು ನಿಲ್ದಾಣಗಳ ಸಮೀಪದಲ್ಲಿ ಬೇಲಿ ನಿರ್ಮಾಣ ಸುರಕ್ಷತಾ ಕ್ರಮಗಳಲ್ಲಿ ಒಂದು ಎಂದು ಅವರು ಹೇಳಿದರು.

ಹದಿನೈದು ದಿನಗಳ ಪಾಕ್ಷಿಕ ಅಭಿಯಾನದ ಭಾಗವಾಗಿ, ರೈಲ್ವೆ ರಕ್ಷಣಾ ಪಡೆ, ರೈಲ್ವೆ ಸುರಕ್ಷತಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೆರವಿನಿಂದ, ಪ್ರಯಾಣಿಕರು ಮತ್ತು ರೈಲ್ವೆ ಹಳಿಗಳ ಬಳಿ ವಾಸಿಸುವ ಸ್ಥಳೀಯ ಜನರಿಗೆ ಸುರಕ್ಷಿತವಾಗಿ ರೈಲು ಕಾರ್ಯಾಚರಣೆ ನಡೆಸಲು ಅನುಕೂಲವಾಗಲು, ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ, ಜನರ ವಾಸಸ್ಥಳದ ಮೂಲಕ ಹಾದುಹೋಗುವ ರೈಲು ಹಳಿಗಳಲ್ಲಿ, ನಿಲ್ದಾಣಗಳ ಆವರಣದಲ್ಲಿ, ಪಾದಚಾರಿಗಳು ಮತ್ತು ವಾಹನಗಳು ರೈಲ್ವೆ ಹಳಿಯನ್ನು ಅನಧಿಕೃತವಾಗಿ ದಾಟುವುದನ್ನು ತಪ್ಪಿಸುವುದು ಮತ್ತು ಅವರ ಸುರಕ್ಷತೆಯನ್ನು ನೋಡಿಕೊಳ್ಳುವುದು, ಜಾನುವಾರುಗಳನ್ನು ರೈಲ್ವೆ ಹಳಿಗಳಿಂದ ದೂರವಿಡುವುದು ಇತ್ಯಾದಿ.– ಇವುಗಳ ಬಗ್ಗೆ ಅರಿವು ನೀಡಲಿದ್ದಾರೆ. ಜನರಿಗೆ ಪ್ರತಿಜ್ಞೆಯನ್ನು ಬೋದಿಸಿ ಸುರಕ್ಷತಾ ಪ್ರತಿಜ್ಞೆಯ ಬ್ಯಾನರ್‌ನಲ್ಲಿ ಅವರಿಂದ ಸಹಿಗಳನ್ನು ಪಡೆಯಲಾಗುತ್ತದೆ. ಅದೇ ರೀತಿ, ವಿಭಾಗದಾದ್ಯಂತ ವಿವಿಧ ನಿಲ್ದಾಣಗಳ ಪ್ರಮುಖ ಸ್ಥಳಗಳಲ್ಲಿ ದೊಡ್ಡ ದೊಡ್ಡ ಭಿತ್ತಿಪತ್ರ ಮತ್ತು ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ಅತಿಕ್ರಮ ಪ್ರವೇಶದ ವಿರುದ್ದ ಮತ್ತು ರೈಲ್ವೆ ಹಳಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಯರ್‌ಫೋನ್ ಮತ್ತು ಸೆಲ್ ಫೋನ್‌ಗಳನ್ನು ಬಳಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ನಿಯಮಿತ ಘೋಷಣೆ ಮಾಡಲಾಗುವುದು.

-ಡಾ.ಮಂಜುನಾಥ್ ಕನಮಡಿ
ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು
ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ, ಮೈಸೂರು ವಿಭಾಗ

Leave a Reply

Your email address will not be published. Required fields are marked *