ಮಣಿಪಾಲ್‌ ಆಸ್ಪತ್ರೆಯಿಂದ ಬೃಹತ್‌ ರಕ್ತದಾನ ಶಿಬಿರ ವಿವಿಧ ಕೇಂದ್ರಗಳಲ್ಲಿ 251 ಮಂದಿಯಿಂದ ರಕ್ತದಾನ

ಮೈಸೂರು:8 ಏಪ್ರಿಲ್ 2022

ನಂದಿನಿ ಮೈಸೂರು

ವಿಶ್ವ ಆರೋಗ್ಯ ದಿನದ ಅಂಗವಾಗಿ ಮಣಿಪಾಲ್‌ ಆಸ್ಪತ್ರೆಯ ವತಿಯಿಂದ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಮೈಸೂರಿನ ಐದು ಸ್ಥಳಗಳಲ್ಲಿ ಬೃಹತ್‌ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಮೈಸೂರಿನ ಮಣಿಪಾಲ್‌ ಆಸ್ಪತ್ರೆ, ಫೋರಂ ಸೆಂಟರ್‌ ಸಿಟಿ ಮಾಲ್‌, ಎಂಐಟಿ ಕಾಲೇಜು, ಮಣಿಪಾಲ್‌ ಸಿಟಿ ಕ್ಲಿನಿಕ್‌ (ಸರಸ್ವತಿಪುರಂ) ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ ಶಿಬಿರ ನಡೆಯಿತು. ಜನರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸಿ ಪ್ರಸ್ತುತ ಮೈಸೂರು ನಗರದಲ್ಲಿ ರೋಗಿಗಳಿಗೆ ಇರುವ ರಕ್ತದ ಕೊರತೆಯನ್ನು ನೀಗಿಸುವುದು ಇದರ ಹಿಂದಿನ ಉದ್ದೇಶ.

ಆಸ್ಪತ್ರೆಗಳಲ್ಲಿ ವಿವಿಧ ರೀತಿಯ ಚಿಕಿತ್ಸೆಗಳನ್ನು ನೀಡುವಾಗ ರಕ್ತ ಬಹಳ ಮುಖ್ಯ. ರಸ್ತೆ ಅಪಘಾತ, ಕ್ಯಾನ್ಸರ್‌ನಂತಹ ರಕ್ತಸಂಬಂಧಿ ಖಾಯಿಲೆ, ರಕ್ತಕಣಗಳ ಕೊರತೆ, ಅಂಗಾಂಗ ಕಸಿ ಹಾಗೂ ಮತ್ತಿತರ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ರಕ್ತ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ತಿಂಗಳು ಆಸ್ಪತ್ರೆಗಳಿಗೆ ನೂರಾರು ಯೂನಿಟ್‌ಗಳಷ್ಟು ರಕ್ತ, ಪ್ಲಾಸ್ಮಾ, ಕೆಂಪು ರಕ್ತಕಣಗಳು ಬೇಕಾಗುತ್ತಿರುತ್ತದೆ. ರಕ್ತವನ್ನು ನಾವು ಒದಗಿಸಬಹುದಷ್ಟೇ ಹೊರತು ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ರಕ್ತದಾನಿಗಳು ಹಾಗೂ ರೋಗಿಗಳ ನಡುವಿನ ಅಂತರ ಕಡಿಮೆ ಮಾಡುವುದು ಮುಖ್ಯವಾಗುತ್ತದೆ. ಇಂತಹ ಬೃಹತ್‌ ರಕ್ತದಾನ ಶಿಬಿರಗಳಿಂದಾಗಿ ಹೆಚ್ಚು ರಕ್ತ ಸಂಗ್ರಹವಾಗಿ ರೋಗಿಗಳಿಗೆ ಸಹಾಯವಾಗುತ್ತದೆ, ಸಾಕಷ್ಟು ಜೀವಗಳು ಉಳಿಯುತ್ತವೆ.

ವಿವಿಧ ಸ್ಥಳಗಳಲ್ಲಿ ರಕ್ತದಾನ ಶಿಬಿರ ನಡೆಸಿ ಹೆಚ್ಚು ಹೆಚ್ಚು ರಕ್ತ ಸಂಗ್ರಹ ಮಾಡುವುದು ನಮ್ಮ ಉದ್ದೇಶ. ವಿವಿಧ ಪೂರ್ವನಿಯೋಜಿತ ಕೇಂದ್ರಗಳಲ್ಲಿ ದಾನಿಗಳಿಂದ ರಕ್ತ ಸಂಗ್ರಹಿಸಲಾಯಿತು. ಅವರವರಿಗೆ ಅನುಕೂಲವಾದ ಕೇಂದ್ರಗಳಿಗೆ ಆಗಮಿಸಿ ದಾನಿಗಳು ರಕ್ತ ನೀಡಿದರು. ಇಡೀ ಪ್ರಕ್ರಿಯೆಯ ಮೇಲುಸ್ತುವಾರಿಯಪನ್ನು ವೈದ್ಯರ ತಂಡ ವಹಿಸಿತ್ತು. ಯಾರಿಗೂ ಅನಾನುಕೂಲವಾಗದಂತೆ ನೋಡಿಕೊಳ್ಳಲಾಯಿತು. ಫೋರಂ ಸಿಟಿ ಸೆಂಟರ್‌ ಮಾಲ್‌ನ ಸೆಂಟರ್‌ ಹೆಡ್ ಧನಶೇಖರನ್‌ ರಾಮಚಂದ್ರನ್‌ ಅವರು ಈ ಕುರಿತು ಮಾತನಾಡಿ, ರಕ್ತದಾನವು ನೂರಾರು ಜೀವಗಳನ್ನು ಉಳಿಸುವ ಮಾನವೀಯ ಕೆಲಸ ಎಂದರಲ್ಲದೇ, ಹೆಚ್ಚು ಜನರು ರಕ್ತದಾನ ಮಾಡಲು ಮುಂದಾಗಬೇಕೆಂದು ಮನವಿ ಮಾಡಿದರು.

ʻಕೊರೊನಾ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ರಕ್ತದಾನಿಗಳು ಗೊಂದಲದಲ್ಲಿದ್ದಾರೆ. ಕೊರೊನಾದಿಂದ ಚೇತರಿಸಿಕೊಂಡು 14 ದಿನ ಕಳೆದ, ರೋಗಲಕ್ಷಣಗಳಿಲ್ಲದ ಜನರು ರಕ್ತದಾನ ಮಾಡಬಹುದು ಎಂಬ ಅಧಿಕೃತ ಮಾಹಿತಿ ಬಂದ ತಕ್ಷಣ ಎಲ್ಲರೂ ರಕ್ತದಾನ ಮಾಡಲು ಆರಂಭಿಸಿದರು. ಅಲ್ಲದೆ ಇತರರಲ್ಲೂ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದರು. ಶಿಬಿರದಲ್ಲಿ ಸುಮಾರು 251 ಮಂದಿ ರಕ್ತದಾನ ಮಾಡಿದರು. ಎಲ್ಲರಿಗೂ ಸುಸ್ತು ಕಡಿಮೆಯಾಗಲು ಹಾಗೂ ಶಕ್ತಿ ಬರಲು ತಾಜಾ ಹಣ್ಣಿನ ರಸ ವಿತರಿಸಲಾಯಿತುʼ ಎಂದು ಜೀವಧಾರಾ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಗಿರೀಶ್‌ ತಿಳಿಸಿದರು.

ʻರಕ್ತದಾನ ಎಂಬ ಸಾರ್ಥಕ ಕಾರ್ಯವು ರೋಗಿಗಳು ಹಾಗೂ ದಾನಿಗಳ ಮಧ್ಯೆ ವಿಶೇಷವಾದ ಬಾಂಧವ್ಯವೊಂದನ್ನು ಹುಟ್ಟುಹಾಕುತ್ತದೆ. ಮಣಿಪಾಲ್‌ ಆಸ್ಪತ್ರೆಯು ಇಂತಹ ವಿಶಿಷ್ಟ ಹಾಗೂ ಮಾನವೀಯ ಕಾರ್ಯಕ್ರಮಗಳನ್ನು ಆಗಿಂದಾಗ್ಗೆ ಆಯೋಜಿಸುತ್ತಿರುತ್ತದೆʼ ಎಂದು ಶಿಬಿರದಲ್ಲಿ ರಕ್ತದಾನ ಮಾಡಿದ ಇಂಜಿನಿಯರಿಂಗ್‌ ವಿದ್ಯಾರ್ಥಿನಿ ದೀಪಿಕಾ ತಿಳಿಸಿದರು.

ರೋಗವನ್ನು ಬೇಗ ಪತ್ತೆಹಚ್ಚುವ, ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಪ್ರವೃತ್ತಿಯನ್ನು ಉತ್ತೇಜಿಸುವ ಸಲುವಾಗಿ ಮಣಿಪಾಲ್‌ ಆಸ್ಪತ್ರೆಯು ವಿವಿಧ ಆರೋಗ್ಯ ತಪಾಸಣಾ ಪ್ಯಾಕೇಜ್‌ಗಳಿಗೆ ರಿಯಾಯಿತಿ ನೀಡುತ್ತಿದೆ. ಏಪ್ರಿಲ್‌ 30ರವರೆಗೂ ಈ ರಿಯಾಯಿತಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 9620030123 ಗ ಕರೆ ಮಾಡಬಹುದು.

Leave a Reply

Your email address will not be published. Required fields are marked *