ನಾ ನಾಯಕಿ ” ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳು

ನಂದಿನಿ ಮೈಸೂರು

“ ನಾ ನಾಯಕಿ ” ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮಾತುಗಳು:

ನಾವು ರಾಜ್ಯದಲ್ಲಿ ಮಹಿಳಾ ಸಮಾವೇಶವನ್ನು ಏರ್ಪಾಡು ಮಾಡಿ, ಅದರಲ್ಲಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ಪಾಲ್ಗೊಳ್ಳುತ್ತಾರೆ ಎಂದು ಗೊತ್ತಾದಮೇಲೆ ರಾಜ್ಯ ಬಿಜೆಪಿ ಸರ್ಕಾರ ದೊಡ್ಡ ಜಾಹಿರಾತನ್ನು ನೀಡಿ ತಾವು ಮುಂದೆ ಮಂಡಿಸುವ ಬಜೆಟ್ ನಲ್ಲಿ ಮಹಿಳಾ ಪರವಾದ ಕಾರ್ಯಕ್ರಮಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ಭಾರತೀಯ ಜನತಾಪಕ್ಷ ಅಧಿಕಾರಕ್ಕೆ ಬಂದು ಮೂರುವರೆ ವರ್ಷಗಳಾಯಿತು, ಆದರೆ ಇಂದಿನ ವರೆಗೆ ಮಹಿಳೆಯರಿಗಾಗಿ ಒಂದೇ ಒಂದು ಕಾರ್ಯಕ್ರಮ ರೂಪಿಸಿ ಜಾರಿ ಮಾಡಿಲ್ಲ. 2018ರ ಚುನಾವಣೆ ವೇಳೆ ಮಹಿಳೆಯರಿಗಾಗಿ 21 ಭರವಸೆಗಳನ್ನು ನೀಡಿದ್ದರು ಅದನ್ನು ಕೂಡ ಈಡೇರಿಸಿಲ್ಲ. ಈ ವರೆಗೆ ಮಲಗಿದ್ದ ರಾಜ್ಯ ಸರ್ಕಾರ ನಾವು ರಾಜ್ಯದ ಪ್ರತಿ ಮನೆಗೆ ಉಚಿತವಾಗಿ 200 ಯುನಿಟ್‌ ನೀಡುತ್ತೇವೆ ಎಂದು ಘೋಷಿಸಿದ ಮೇಲೆ ಮಹಿಳೆಯರಿಗೆ ಪುಂಕಾನುಪುಂಕವಾಗಿ ಭರವಸೆಗಳನ್ನು ನೀಡಲು ಆರಂಭ ಮಾಡಿದೆ.

ಬಿಜೆಪಿ ಪಕ್ಷ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ 600 ಭರವಸೆಗಳನ್ನು ನೀಡಿತ್ತು, ಅದರಲ್ಲಿ ಶೇ.10 ಅನ್ನು ಕೂಡ ಈಡೇರಿಸಿಲ್ಲ. ಬಿಜೆಪಿಯಂಥಾ ವಚನಭ್ರಷ್ಟ ಸರ್ಕಾರ ಯಾವುದೂ ಇಲ್ಲ. ಬಿಜೆಪಿ ಸಂವಿಧಾನ ಜಾರಿಯಾಗುವ ಮೊದಲಿನಿಂದಲೂ ಮಹಿಳೆಯರ ಪರವಾಗಿ ಇಲ್ಲ. ಇದೇ ಜನ ಮನುಸ್ಮೃತಿಯ ಮೂಲಕ ಮಹಿಳೆಯರನ್ನು ದಮನ ಮಾಡಿದ್ದರು. ಬಾಬಾ ಸಾಹೇಬರು ಸಂವಿಧಾನ ರಚಿಸಿದ ಕಾರಣಕ್ಕೆ ಇಂದು ಈ ದೇಶದ ಮಹಿಳೆಯರಿಗೆ ಎಲ್ಲಾ ಹಕ್ಕುಗಳು ಸಿಗುತ್ತಿವೆ. ದೇಶದ ಮೊದಲ ಪ್ರಧಾನಿ ಜವಹರಲಾಲ್‌ ನೆಹರು ಅವರು “ಈ ದೇಶದ ಅಭಿವೃದ್ಧಿ ಆಗಬೇಕಾದರೆ ದೇಶದ ಅರ್ಧದಷ್ಟಿರುವ ಮಹಿಳಾ ಸಮುದಾಯ ಅಭಿವೃದ್ಧಿಯಾಗಬೇಕು” ಎಂದು ಹೇಳಿದ್ದರು. ನೆಹರು ಅವರ ಆಡಳಿತದಲ್ಲಿ ಬಾಲ್ಯ ವಿವಾಹ, ಸತಿ ಪದ್ಧತಿಗಳಂಥ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಹಿಂದೂ ವಿವಾಹ ಕಾಯ್ದೆ ಜಾರಿಗೆ ತಂದರು. ಹಿಂದೂ ಉತ್ತರಾಧಿಕಾರಿ ಕಾಯ್ದೆ, 1950ರಲ್ಲಿ ದತ್ತು ಸ್ವೀಕರಿಸುವ ಕಾಯ್ದೆ, 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು. ಇದನ್ನು ಮಾಡಿದ್ದು ಕಾಂಗ್ರೆಸ್‌ ಪಕ್ಷ. 1951ರ ಜನಗಣತಿ ಪ್ರಕಾರ ದೇಶದ ಮಹಿಳಾ ಸಾಕ್ಷರತೆ ಪ್ರಮಾಣ 8.86% ಇದ್ದದ್ದು 2011ರ ಜನಗಣತಿಯ ಪ್ರಕಾರ 65.45% ಗೆ ಹೆಚ್ಚಳವಾಗಲು ಕಾಂಗ್ರೆಸ್‌ ಸರ್ಕಾರ ಕಾರಣ.

ನಾವು ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ಉದ್ಯೋಗದಲ್ಲಿ ಸಿಗುತ್ತಿದ್ದ 30% ಮೀಸಲಾತಿ ಪ್ರಮಾಣವನ್ನು 33% ಗೆ ಹೆಚ್ಚಿಸಿದ್ದೇವೆ. ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನ ತಿದ್ದುಪಡಿ ಮಾಡಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಿದ್ದು ಮತ್ತು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮೀಸಲಾತಿ ಸಿಗಬೇಕು. ಮಹಿಳೆಯರಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ 33% ಮೀಸಲಾತಿ ನೀಡಬೇಕು ಎಂಬ ಬಿಲ್‌ ಅನ್ನು 1995ರಲ್ಲಿ ಲೋಕಸಭೆ ಮುಂದೆ ತರಲಾಗಿದೆ. ಈ ಬಿಲ್ ಇನ್ನು ಹಾಗೆ ಇದೆ. ಒಂದು ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮೀಸಲಾತಿ ನೀಡುವ ಈ ಬಿಲ್‌ ಅನ್ನು ಪಾಸ್‌ ಮಾಡಿ ಜಾರಿ ಮಾಡುವ ಕೆಲಸ ಮಾಡಬೇಕು ಎಂಬ ನಿರ್ಣಯವನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಬೇಕು. ಇದು ನನ್ನ ಒತ್ತಾಯ.

ಬಿಜೆಪಿ ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಸ್ಥಾನಮಾನಗಳು ಇಲ್ಲ. ಮಹಿಳೆಯರು ಗಂಡಸರ ಅಡಿಯಾಳಾಗಿ ಇರಬೇಕು ಎಂದು ಇದು ಹೇಳುತ್ತದೆ. ಮನುಸ್ಮೃತಿಯ ಅಧ್ಯಾಯ 5 ನಿಯಮ 48ರ ಪ್ರಕಾರ ಮಹಿಳೆಯೊಬ್ಬಳು ಬಾಲ್ಯದಲ್ಲಿ ತಂದೆತಾಯಿಯ ಅಧೀನದಲ್ಲಿ, ನಂತರ ಗಂಡನ ಅಧೀನದಲ್ಲಿ, ನಂತರ ಮಕ್ಕಳ ಅಧೀನದಲ್ಲಿರಬೇಕು ಎಂಬುದನ್ನು ಹೇಳುತ್ತದೆ. ಇದನ್ನು ಒಪ್ಪಿ, ಸಮಾಜದಲ್ಲಿ ಜಾರಿಗೊಳಿಸಿದವರು ಆರ್‌,ಎಸ್‌,ಎಸ್‌ ಮತ್ತು ಬಿಜೆಪಿ ಪಕ್ಷ. ಕಾಂಗ್ರೆಸ್‌ ಪಕ್ಷ ಮೊದಲಿನಿಂದಲೂ ಮಹಿಳೆಯರ ಪರವಾಗಿದೆ. ಮಹಿಳೆಯರಿಗೆ ನ್ಯಾಯಯುತ ಹಕ್ಕುಗಳು ಸಿಗಬೇಕು, ಸಮಾನ ಗೌರವ, ಅವಕಾಶಗಳು ಸಿಗಬೇಕು ಎಂದು ಕಾಂಗ್ರೆಸ್‌ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿದೆ, ಮುಂದೆಯೂ ಇದಕ್ಕೆ ಬದ್ಧವಾಗಿರಲಿದೆ.

Leave a Reply

Your email address will not be published. Required fields are marked *