ಮೈಸೂರು:13 ಜುಲೈ 2022
ನಂದಿನಿ ಮೈಸೂರು
ಗುರುವಿನ ಮಾರ್ಗದಲ್ಲಿ ನಡೆದಾಗ ಮಾತ್ರ ನಾವೆಲ್ಲರೂ ನಮ್ಮ,ನಮ್ಮ ಗುರಿ ತಲುಪಬಹುದು ಎಂದು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.
19ನೇ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಸ್ವಾಮೀಜಿ ಇಂದು ಗುರು ಪೂರ್ಣಿಮೆಯ ಪ್ರಯುಕ್ತ ಈ ಕುರಿತು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಗುರು ಎಂದರೆ ಎಲ್ಲರಿಗೂ ಪ್ರಿಯ.ತಂದೆ,ತಾಯಿ ನಮಗೆ ಶರೀರದ ಜನ್ಮ ನೀಡಿದರೆ ಗುರು ಜ್ಞಾನದ ಜನ್ಮ ನೀಡುತ್ತಾರೆ.ಪ್ರತಿದಿನ ಗುರು ಸ್ಮರಣೆ ಮಾಡಿದರೆ ಜೀವನದ ಪರಿವರ್ತನೆ ಆಗುತ್ತದೆ.ಸಾರ್ಥಕತೆ ಲಭಿಸುತ್ತದೆ.ಹಾಗಾಗಿ ಎಲ್ಲರೂ ಗುರು ಸ್ಮರಣೆ ಮಾಡಬೇಕು ಎಂದು ತಿಳಿಸಿದರು.
ಗುರುವಿನ ಸ್ಥಾನ ಅದ್ಭುತ, ಅಮೋಘ ಎಂದು ಬಣ್ಣಿಸಿದ ಶ್ರೀಗಳು, ಗುರುವಿಲ್ಲದೆ ಜನ್ಮವೂ ಇಲ್ಲ,ಜ್ಞಾನವೂ ಇಲ್ಲ.ನಾವೆಲ್ಲ ಗುರುವಿನ ಮಾರ್ಗದರ್ಶನದಲ್ಲೇ ನಡೆಯಬೇಕು ಎಂದು ಹೇಳಿದರು.
ಗುರು ಪೂರ್ಣಿಮೆಯನ್ನು ಆಷಾಢ ಪೂರ್ಣಿಮೆ ಎಂದೂ ಕರೆಯುತ್ತಾರೆ. ನಾವು ಏನೇ ಮಾಡುತ್ತಿದ್ದರೂ ಅದು ವ್ಯಾಸರ ಪ್ರಸಾದ,ಜ್ಞಾನದ ಜ್ಯೋತಿಯನ್ನು ವ್ಯಾಸರು ನೀಡುತ್ತಾರೆ.ಗುರು ಪರಂಪರೆಯನ್ನು ತೋರಿಸಿಕೊಟ್ಟವರು ವ್ಯಾಸರು ಎಂದು ಸ್ವಾಮೀಜಿ ತಿಳಿಸಿದರು.
ಗುರುವಿನ ಪಾದಸೇವೆ ಮಾಡಿ ಪೂಜಿಸುವುದೇ ಗುರುಪೂರ್ಣಿಮಾ.ನಮಗೆ ಪೂರ್ಣತ್ವ ನೀಡುವುದು,ನಮ್ಮಲ್ಲಿ ಜ್ಞಾನದ ಬೆಳಕನ್ನು ನೀಡುವವರೇ ಗುರುಗಳು.ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಸುವವರು ಸದ್ಗುರುಗಳು. ಎಲ್ಲರೂ ಅವರ ಸ್ಮರಣೆ ಮಾಡೋಣ ಎಂದು ಶ್ರೀ ಗಳು ತಿಳಿಸಿದರು.
ಚಾತುರ್ಮಾಸ್ಯ-ನಾಲ್ಕು ತಿಂಗಳು ಒಂದೇ ಸ್ಥಳದಲ್ಲಿ ಇದ್ದುಕೊಂಡು ಅಹಿಂಸೆಯನ್ನು ಪಾಲಿಸುತ್ತಾ ಮಾಡುವ ವ್ರತವೇ ಚಾತುರ್ಮಾಸ್ಯ ಎಂದು ಇದೇ ವೇಳೆ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿಕೊಟ್ಟರು.
ಹಿರಿಯ ಶ್ರೀಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಡಲ್ಲಾಸ್ ನಲ್ಲಿ ಇದ್ದಾರೆ. ಅವರ ಆಶೀರ್ವಾದದಲ್ಲಿ ತಾವು ಈ ಆಶ್ರಮದಲ್ಲಿ ಇದ್ದು ಚಾತುರ್ಮಾಸ್ಯ ವ್ರತ ಕೈಗೊಂಡಿರುವುದಾಗಿ ಶ್ರೀಗಳು ತಿಳಿಸಿದರು.
ನಮ್ಮ ಶ್ರೀಗಳು ಡಲ್ಲಾಸ್ ನಲ್ಲಿದ್ದಾರೆ. ಅಲ್ಲಿ ಸುಮಾರು ಎರಡು ಸಾವಿರ ಮಕ್ಕಳು ನಮ್ಮ ಶ್ರೀಗಳ ಸಮ್ಮುಖದಲ್ಲಿ ಸುಂದರ ಕಾಂಡ ಪಾರಾಯಣ ಮಾಡಿದ್ದಾರೆ.
ಶ್ರೀಗಳು ಭಗವದ್ಗೀತೆ ಪಾರಾಯಣ ಮಾಡುತ್ತಾರೆ. ಎಲ್ಲರೂ ಭಗವದ್ಗೀತೆ ಪಾರಾಯಣ ಮಾಡಬೇಕು ಎಂಬುದು ಶ್ರೀಗಳ ಆಶಯವಾಗಿದೆ. ಎಲ್ಲರೂ ತಪ್ಪದೆ ಭಗವದ್ಗೀತೆ ಓದಬೇಕು ಎಂದು ಸಲಹೆ ನೀಡಿದರಲ್ಲದೆ ಎಲ್ಲರಿಗೂ ಗುರು ಅನುಗ್ರಹ ಸಿಗಲಿ ಎಂದು ದತ್ತ ವಿಜಯಾನಂದ ತೀರ್ಥ ಶ್ರೀಗಳು ಹಾರೈಸಿದರು.