ಮೈಸೂರು:25 ನವೆಂಬರ್ 2021
ನಂದಿನಿ
ಚಾಮುಂಡೇಶ್ವರಿ ಬೆಟ್ಟವನ್ನು ಸಂರಕ್ಷಿಸಿ- ಭೂ ಕುಸಿತದಿಂದ ಉಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟಿಸಿದೆ.
ಸಾವಿರಾರು ವರ್ಷಗಳ ಇತಿಹಾಸವಿರುವ ಐತಿಹಾಸಿಕ ಪುರಾಣಪ್ರಸಿದ್ಧವಾದ, ಮೈಸೂರು ರಾಜಮನೆತನದ ಅಧಿದೇವತೆ ತಾಯಿ ಚಾಮುಂಡೇಶ್ವರಿ ಬೆಟ್ಟದಲ್ಲಿ ಪದೇಪದೇ ಭೂ ಕುಸಿತವಾಗುತ್ತಿದೆ. ಇದಕ್ಕೆ ಕಾರಣ ಮೊದಲಿದ್ದ ರಾಜ್ಯಸರ್ಕಾರ ಹಾಗು ಕೆಲವು ರಾಜಕೀಯ ನಾಯಕರುಗಳು ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟವನ್ನು ನಾಶಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅವೈಜ್ಞಾನಿಕವಾಗಿ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು, ಬಹುಮಾಡಿ ಪಾರ್ಕಿಂಗ್ ಕಾಮಗಾರಿಗಳನ್ನು ನಿರ್ಮಾಣ ಮಾಡಿ, ಹಿಂದೆಂದೂ ಆಗದಂತಹ ಭೂ ಕುಸಿತಕ್ಕೆ ಕಾರಣವಾಗಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ಚಾಮುಂಡಿಬೆಟ್ಟ ಕಾಂಕ್ರೀಟ್ ಕಾಡಾಗದಿರಲಿ & ವಾಣಿಜ್ಯ ಕೇಂದ್ರವಾಗದಿರಲಿ. ಜನ ಇಲ್ಲಿಗೆ ಬರುವುದು ಆಧ್ಯಾತ್ಮ ಹಾಗೂ ಮನಸ್ಸಿನ ನೆಮ್ಮದಿ ಬಯಸಿ.
ಮಲೆನಾಡಿನಲ್ಲಿ ಸಹ ಅವೈಜ್ಞಾನಿಕವಾಗಿ ಬೆಟ್ಟಗುಡ್ಡಗಳನ್ನು ಕೊರೆದು, ಹಣದಾಸೆಗಾಗಿ ರೆಸಾರ್ಟ್, ಹೋಟೆಲ್ ಗಳನ್ನು ನಿರ್ಮಿಸಿ ಭೂಮಿ ಸಡಿಲಗೊಳಿಸಿದ್ದರಿಂದಾಗಿ ಕಳೆದೆರಡು ವರ್ಷಗಳ ಹಿಂದೆ ಭಾರೀ ಭೂಕುಸಿತ ಉಂಟಾಗಿ ಅಪಾರ ಆಸ್ತಿಪಾಸ್ತಿ, ಭೂಮಿ ನಷ್ಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಶ್ವವಿಖ್ಯಾತ ಚಾಮುಂಡಿ ಬೆಟ್ಟ ದೇಶದ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ಇದನ್ನು ರಾಜ್ಯ ಸರ್ಕಾರ ದಯಮಾಡಿ ” ಧಾರ್ಮಿಕ ಕ್ಷೇತ್ರ “ವನ್ನಾಗಿಯೇ ಉಳಿಸಬೇಕು. ಇನ್ನು ಮುಂದೆ ಯಾವುದೇ ದೊಡ್ಡ ದೊಡ್ಡ ಕಟ್ಟಡ ಕಾಮಗಾರಿಗಳು, ರಸ್ತೆ ಅಗಲೀಕರಣ ಮುಂತಾದ ಅವೈಜ್ಞಾನಿಕ ಅಭಿವೃದ್ಧಿಗೆ ಹಾಗೂ ಗಿಡಮರಗಳನ್ನು ಕೆಡವುವುದಕ್ಕೆ ಮುಂದಾಗಬಾರದು ಎಂದು ರಾಜ್ಯ ಸರಕಾರಕ್ಕೆ – ಜಿಲ್ಲಾಡಳಿತಕ್ಕೆ ಆಗ್ರಹಿಸಿ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.
ಈ ಕೂಡಲೇ ರಾಜ್ಯ ಸರ್ಕಾರ ಚಾಮುಂಡಿಬೆಟ್ಟದಲ್ಲಿ ಭೂಕುಸಿತವಾಗಿರುವುದಕ್ಕೆ, ತಜ್ಞರ ಸಲಹೆ ಪಡೆದು ಮತ್ತೆ ಮತ್ತೆ ಚಾಮುಂಡಿಬೆಟ್ಟದಲ್ಲಿ ಭೂ ಕುಸಿತವಾಗದಿರುವಂತೆ ಶಾಶ್ವತ ಪರಿಹಾರ ಮಾಡಬೇಕೆಂದು ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬೆಟ್ಟದಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಿ ಪೋಷಿಸಿ ಮತ್ತೆಂದೂ ಬೆಟ್ಟದಲ್ಲಿ ಭೂಕುಸಿತ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಮತ್ತು ನಾಡಿನ ಐತಿಹಾಸಿಕ ಪುರಾಣ ಪ್ರಸಿದ್ದ ” ಚಾಮುಂಡೇಶ್ವರಿ ಬೆಟ್ಟದಲ್ಲಿ ನಡೆಸುತ್ಥಿರುವ ಅವೈಜ್ಞಾನಿಕ ಕಾಮಗಾರಿಗಳನ್ನು ಈ ಕೂಡಲೇ ನಿಲ್ಲಿಸಿ, ಬೆಟ್ಟದ ನೈಸರ್ಗಿಕ ಸೌಂದರ್ಯ ಸಂರಕ್ಷಿಸಿ-ಉಳಿಸಬೇಕು ” ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಮನವಿಯನ್ನು ನೀಡುತ್ತಿದ್ದೇವೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ತಿಳಿಸಿದರು.
ಪ್ರತಿಭಟನೆಯಲ್ಲಿ ಡಾ. ಶಾಂತರಾಜೇಅರಸ್ ಪಿ, ವಿಜಯೇಂದ್ರ, ಪ್ರಜೀಶ್.ಪಿ, ಡಾ. ಮೊಗಣ್ಣಾಚಾರ್, ಮಂಜುನಾಥ್, ಎಳನೀರು ರಾಮಣ್ಣ, ದರ್ಶನ್ ಗೌಡ, ನಂದಕುಮಾರ್, ಬಂಗಾರಪ್ಪ, ರಾಧಾಕೃಷ್ಣ, ಮಹದೇವ ಸ್ವಾಮಿ, ರಾಮನಾಯ್ಕ, ಗೊರೂರು ಮಲ್ಲೇಶ್, ಗುಂಡ್ಲುಪೇಟೆ ಸಂತೋಷ್, ಗಣೇಶ್ ಪ್ರಸಾದ್, ರವಿ ನಾಯಕ್, ರಮೇಶ್ ಟಿ, ಭರತ್ ಡೀನ್, ದೂರಸುರೇಶ್, ಉಪಸ್ಥಿತರಿದ್ದರು.