ವಿದ್ಯಾರ್ಥಿಗಳು ಜ್ಞಾನದಾಹಿ ಗಳಾಗಬೇಕು: ಬನ್ನೂರು ರಾಜು

 

 

ಮೈಸೂರು:17 ಆಗಸ್ಟ್ 2021

ಗುರಿ ತಲುಪಲು ಹಾಗೂ ಅಂದುಕೊಂಡದ್ದನ್ನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಾಗಿ ಸಾಧಿಸಲು ಸಾಧಕರಿಗೆ ಅರಿವು ಮತ್ತು ಆರೋಗ್ಯ ಅತ್ಯವಶ್ಯಕವಾಗಿದ್ದು ವಿದ್ಯಾರ್ಥಿದೆಸೆಯಲ್ಲಿಯೇ ಇದನ್ನು ಗಳಿಸಿಕೊಳ್ಳುವತ್ತ ವಿದ್ಯಾರ್ಥಿಗಳು ಜ್ಞಾನದಾಹಿಗಳಾ ಗುವುದರ ಜೊತೆಗೆ ಆರೋಗ್ಯದಾಹಿಗಳಾಗಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಲಕ್ಷ್ಮೀಪುರಂನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಂಟಿಯಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ , ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲಾ ಪಠ್ಯಪುಸ್ತಕಗಳು ಸೇರಿದಂತೆ ಸಾಮಾನ್ಯ ಜ್ಞಾನವುಳ್ಳ ಇತರೆ ಉತ್ತಮೋತ್ತಮ ಪುಸ್ತಕಗಳ ಅಧ್ಯಯನದಿಂದ, ಪಠ್ಯೇತರ ಚಟುವಟಿಕೆಗಳಿಂದ,ಸುತ್ತಲಿನ ವಾತಾವರಣದಿಂದ,ಸಾಮಾನ್ಯ ಜನರಿಂದ, ಪಂಡಿತರಿಂದ,ಹೀಗೆ ಒಟ್ಟಾರೆ ನಮ್ಮ ಸಮಾಜದಿಂದ ಜ್ಞಾನವೆಂಬುದು ಎಲ್ಲಿಂದ ಬಂದರೂ ಸರಿಯೇ ಜ್ಞಾನದಾಹಿ ಗಳಾಗಿ ಅದನ್ನು ಬರಮಾಡಿಕೊಳ್ಳಬೇಕು. ಇಂದು ತಾವು ಜ್ಞಾನದಾಹಿಗಳಾಗಿ ಜ್ಞಾನವಂತರಾದರೆ ಮುಂದೆ ತಾವು ಜ್ಞಾನದಾಸೋಹಿಗಳಾಗಿ ಇತರರನ್ನೂ ಜ್ಞಾನಶೀಲರಾಗಿಸ ಬಹುದೆಂದರು.
ಜ್ಞಾನದಾಹಿಗಳಾಗಿ ಏನೇ ಕಲಿಯಬೇಕೆಂದರೂ ಸಹ ಆರೋಗ್ಯ ಬಹಳ ಮುಖ್ಯ. ಆದ್ದರಿಂದ ಆರೋಗ್ಯದಾಹಿಗಳೂ ಆಗಿ ಬದುಕಿನಲ್ಲಿ ಸ್ವಚ್ಛತೆಗೂ ಆದ್ಯತೆ ನೀಡಬೇಕು. ಪ್ರತಿಯೊಬ್ಬರ ಜೀವನದಲ್ಲೂ ಆರೋಗ್ಯ ಎಷ್ಟೊಂದು ಮಹತ್ವದ್ದು ಎಂಬುದನ್ನು ಈಗಾಗಲೇ ಕೊರೋನಾ ಎಂಬ ಒಂದು ಸಣ್ಣ ವೈರಸ್ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಕೊರೋನಾ ದಿಂದಾಗಿ ಇಡೀ ಸಮಾಜದ ವ್ಯವಸ್ಥೆ ಏರುಪೇರಾಗಿ ಹಾಳಾಗಿದೆ. ಇಂತಹ ವ್ಯತಿರಿಕ್ತ ಪರಿಸ್ಥಿತಿಗೆ ಶಾಲಾ-ಕಾಲೇಜುಗಳು ಕೂಡ ಹೊರತಾಗಿಲ್ಲ.ಆದ್ದರಿಂದ ಎಂಥಾ ವ್ಯತಿರಿಕ್ತ ಪರಿಸ್ಥಿತಿಗೂ ದೃತಿಗೆಡದೆ ಪರಿಸ್ಥಿತಿಗೆ ತಕ್ಕಂತೆ ವಿದ್ಯಾರ್ಥಿಗಳು ಹೊಂದಿಕೊಂಡು ಅದು ಆನ್ಲೈನ್ ಇರಲಿ ಅಥವಾ ಆಫ್ಲೈನ್ ಇರಲಿ ತಮ್ಮ ಕಲಿಕೆಯಲ್ಲಿ ಉತ್ತಮ ಫಲಿತಾಂಶ ತರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ವೇಳೆ ಪ್ರಸ್ತುತ ಸಾಲಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಾದ ವಿಜಯ್ ಕುಮಾರ್, ಎಂ. ಅಮೃತಾ, ಉಲ್ಲಾಸ್ ಕುಮಾರ್, ಎಂ.ಸುಪ್ರೀತ್ ಅವರುಗಳಿಗೆ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಿಶ್ರಾಂತ ಶಿಕ್ಷಕ ಎ. ಸಂಗಪ್ಪ ಅವರು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ಕಾಲೇಜಿನ ಪ್ರಾಂಶುಪಾಲ ಎನ್.ಎಂ.ಸುರೇಶ್ ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ. ಕಾವೇರಿಯಮ್ಮ , ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ವಿ. ಮುರಳೀಧರ, ಕಾಲೇಜು ಉಪನ್ಯಾಸಕಿಯರಾದ ಎಚ್. ಕೆ. ನಾಗರತ್ನ,ಎಂ.ಕೆ.ಬೇಬಿ, ಕೆ.ವಸುಂಧರ, ಎಸ್.ಪುಷ್ಪ, ಎಸ್.ಲಲಿತಾ, ಬಿ. ಎಚ್. ವನಿತಾ, ಪಿ. ಪೂರ್ಣಿಮಾ ಇನ್ನಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *