ನಂದಿನಿ ಮೈಸೂರು
ಮೈಸೂರು: ಸ್ವಾಮಿ ವಶಪಡಿಸಿಕೊಂಡಿರುವ ನಮ್ಮ ಜಮೀನನ್ನು ನಮಗೆ ವಾಪಾಸ್ ಕೊಡಿ. ಇಲ್ಲದಿದ್ದರೇ ತಾವು ನೀಡಿದ ಭರವಸೆಯಂತೆ ಸೂಕ್ತ ಪರಿಹಾರವನ್ನಾದರೂ ನೀಡಿ. ತುತ್ತು ಅನ್ನಕ್ಕೂ ಕಷ್ಟವಾಗಿದೆ. ನಮಗೂ ಬದುಕಲು ಅವಕಾಶ ಮಾಡಿಕೊಡಿ ಸಾಹೇಬ್ರೇ..ಇಲ್ಲದಿದ್ದಲ್ಲಿ ಸ್ವಲ್ಪ ವಿಷವನ್ನಾದರೂ ನೀಡಿಬಿಡಿ…!
ಇದು ವರುಣಾ ಹೋಬಳಿ ವ್ಯಾಪ್ತಿಯ ಸೋಮೇಶ್ವರಪುರ, ಇಮ್ಮಾವು ಹಾಗೂ ಸುತ್ತಮುತ್ತಲಿನ ಗ್ರಾಮದ ಅನ್ನದಾತರು ಹಾಗೂ ಅವರ ಕುಟುಂಬಸ್ಥರ ಕಣ್ಣೀರಿನ ಕಥೆಯಾಗಿದೆ. ನ್ಯಾಯಕ್ಕಾಗಿ ಹಾತೊರೆದು ಇದೀಗ ಹತಾಶರಾಗಿ, ಅತ್ತ ವಶಪಡಿಸಿಕೊಂಡ ಜಮೀನು ಇಲ್ಲ. ಇತ್ತ ಅದಕ್ಕೆ ದೊರಕಬೇಕಾದ ಪರಿಹಾರವೂ ಇಲ್ಲದಂತಾಗಿ ದಿನಂಪ್ರತಿ ನೋವಲ್ಲೇ ಕಾಲ ಕಳೆಯುವ ಪರಿಸ್ಥಿತಿ ಬಂದೊದಗಿದೆ.
ಹೌದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಇಮ್ಮಾವು ಗ್ರಾಮದ ಸರ್ವೇ ನಂ೩೯೧ರಿಂದ ೪೩೦ ಹಾಗೂ ೪೨೪ರ ಜಮೀನಿನ ವಿಚಾರವಾಗಿ ವರುಣಾ ಹೋಬಳಿಯ ಸೋಮೇಶ್ವರಪುರ ಗ್ರಾಮದ ಗೋವಿಂದ ನಾಯ್ಕ ಎಂಬವರು ಕಳೆದ ೨೦೧೫ನೇ ಇಸವಿಯಿಂದಲೂ ಜಿಲ್ಲಾಧಿಕಾರಿಗಳೂ, ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಬೇಡಿಕೆ ಇಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ.
ಜಮೀನಿನ ಮೂಲ ವಾರಸುದಾರರಿಗೆ ಇಂತಿಷ್ಟು ಪರಿಹಾರ ಹಣ ನೀಡುವುದಾಗಿ ಹೇಳಿ ಮೇಲ್ಕಂಡ ಸರ್ವೇ ನಂಬರ್‌ನಲ್ಲಿನ ಹಲವು ಎಕರೆಯಷ್ಟು ಭೂಮಿಯನ್ನು ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಈ ಹಿಂದೆ ಕೆಐಎಡಿಬಿ ವತಿಯಿಂದ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಇದುವರೆವಿಗೂ ಸಾಕಷ್ಟು ರೈತರಿಗೆ ಪರಿಹಾರದ ಬಿಡಿಗಾಸು ದೊರೆತಿಲ್ಲ ಎಂಬುದು ಸ್ಥಳೀಯ ಅನ್ನದಾತರ ಅಳಲಾಗಿದ್ದು, ಸರ್ಕಾರಿ ಕಚೇರಿಗೆ ಅಲೆದು-ಅಲೆದು ಸಾಕಾಗಿದೆ.ಈಗಲಾದರೂ ಸೂಕ್ತ ಪರಿಹಾರ ಕೊಡಿ ಎಂದು ನೂರಾರು ರೈತ ಮಹಿಳೆಯರು ಹಾಗೂ ಕುಟುಂಬಸ್ಥರು ಮೊರೆಯಿಡುತ್ತಿದ್ದಾರೆ.
ಬುಧವಾರ ರೈತ ಸ್ಪಂದನ ಸಭೆಯಲ್ಲಿ ಭಾಗವಹಿಸಿದ ರೈತ ಮಹಿಳೆಯರು, ಗ್ರಾಮಸ್ಥರು ತಮ್ಮ ದೂರು-ದುಮ್ಮಾನಗಳನ್ನು ಬಹಿರಂಗಗೊಳಿಸಿದರಲ್ಲದೇ, ನಮಗೂ ಬದುಕಲು ಬಿಡಿ. ನ್ಯಾಯ ಕೊಡಿಸಿ. ಅಥವಾ ಒಂದಿಷ್ಟು ವಿಷ ನೀಡಿಬಿಡಿ ಎಂದು ಕಣ್ಣೀರಿಡುತ್ತಲೇ ನೋವನ್ನು ವ್ಯಕ್ತಪಡಿಸಿದರು.
ಜಮೀನು ವಶಕ್ಕೆ ಪಡೆದು ಸಾಕಷ್ಟು ವರುಷಗಳಾಗಿವೆ.ಆದರೆ ಪರಿಹಾರ ಮಾತ್ರ ಇನ್ನೂ ದೊರೆತಿಲ್ಲ.ಮೊದಲಿಗೆ ಎಕರೆಗೆ ೧೨ ಲಕ್ಷ ಪರಿಹಾರ ಘೋಷಿಸಿದ್ದ ಅಧಿಕಾರಿಗಳು ಇದೀಗ ೪ ಲಕ್ಷ ಮಾತ್ರ ಪರಿಹಾರ ನೀಡಲಾಗುವುದು ಎನ್ನುತ್ತಿದ್ದಾರೆ. ಆದರೆ ಆ ೪ಲಕ್ಷ ಪರಿಹಾರವನ್ನೂ ನೀಡದೇ ಸತಾಯಿಸುತ್ತಿದ್ದಾರೆ.ಅಲ್ಲದೇ ಮಧ್ಯವರ್ತಿಗಳ ಹಾವಳಿಯಿಂದಾಗಿ ಕೆಲವು ರೈತರಿಗೆ ೨ ಲಕ್ಷ ಮಾತ್ರ ಪರಿಹಾರ ದೊರೆತಿದೆ ಎಂಬಿತ್ಯಾದಿ ಹತ್ತು-ಹಲವು ದೂರುಗಳ ಸುರಿಮಳೆಗೈದರು.
ರೈತ ಕಲ್ಯಾಣ ಭೇಟಿ: ಇನ್ನೂ ಸಾಕಷ್ಟು ರೈತರು, ರೈತ ಮಹಿಳೆಯರು ಇತ್ತೀಚೆಗೆ ರಾಜ್ಯ ರೈತ ಕಲ್ಯಾಣ ಸಂಘದ ಪ್ರಧಾನ ಕಚೇರಿಗೆ ಆಗಮಿಸಿ, ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಅವರಲ್ಲಿ ತಮ್ಮ ನೋವನ್ನು ತೋಡಿಕೊಂಡು ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು.
ಈ ಹಿನ್ನಲೆಯಲ್ಲಿ ಚಂದನ್ ಗೌಡ ಹಾಗೂ ಸಂಘದ ಪದಾಧಿಕಾರಿಗಳು ವರುಣಾ ಹೋಬಳಿಯ ಸೋಮೇಶ್ವರಪುರ ಗ್ರಾಮಕ್ಕೆ ಖುದ್ದು ತೆರಳಿ ಸಮಸ್ಯೆ ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡರು.
ಬಾಕ್ಸ್..
ಕೈಗಾರಿಕೆಗಳು ಬರಬೇಕು-ರೈತರು ಬದುಕಬೇಕು
ಮೈಸೂರು: ಅಭಿವೃದ್ದಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆಗಳು ಬರಬೇಕು. ಆದರೆ ಹಾಗೆಯೇ ರೈತರು ಬದುಕಬೇಕು. ಭೂ ಸ್ವಾದೀನ ಪಡೆಯುವುದಕ್ಕಿಂತ, ಗುತ್ತಿಗೆ ಪಡೆಯುವುದು ಒಳಿತಲ್ಲವೇ..? ಎಂದು ರೈತ ಕಲ್ಯಾಣ ಸಂಸ್ಥಾಪಕ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಪ್ರಶ್ನಿಸಿದರು.
ರೈತರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಕೆಐಎಡಿಬಿ ಮತ್ತು ಕೆಹೆಚ್‌ಬಿನವರು ಗುತ್ತಿಗೆ ಆಧಾರದ ಮೇಲೆ ಎಲ್ಲಾ ಯೋಜನೆಗಳಿಗೆ ಭೂಮಿ ಪಡೆಯುವುದು ಸುಲಭ ಹಾಗೂ ಸರಳ ಮಾರ್ಗ ಎಂದರಲ್ಲದೇ,ಕೈಗಾರಿಕಾ ಕ್ಷೇತ್ರಕ್ಕೆ ಆಧಾರ ಸ್ಥಂಭವೇ ಕೃಷಿ ಕೇತ್ರ. ಕೈಗಾರಿಕೆ ಸ್ಥಾಪನೆಗಾಗಿ ಭೂಮಿ ಸ್ವಾಧೀನ ವಿಚಾರದಲ್ಲಿ ತಪ್ಪೇನಿಲ್ಲ. ಆದರೆ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ನೀಡುವ ಪರಿಹಾರ ಹಣವನ್ನು ನೀಡದೇ ವರ್ಷಗಟ್ಟಲೇ ರೈತರನ್ನು ಅಲೆಸುವುದು ಖಂಡನೀಯ ಎಂದರು.
ಭೂಮಿ ಸ್ವಾಧೀನಕ್ಕೂ ಮುನ್ನ ಕನಿಷ್ಠ ಪಕ್ಷ ಅದಕ್ಕಿರುವ ಮಾನದಂಡಗಳನ್ನಾದರೂ ಪಾಲಿಸಬೇಕಿದೆ.ಆದರೆ ಅದಾವುದನ್ನೂ ಪಾಲಿಸದೇ ಭೂಮಿಯನ್ನು ವಶಪಡಿಸಿಕೊಂಡಿರುವುದಲ್ಲದೇ, ಸೂಕ್ತ ಪರಿಹಾರ ಮಂಜೂರು ಮಾಡದೇ, ಅದರಲ್ಲೂ ನಮ್ಮೆಲ್ಲರ ನೆಚ್ಚಿನ ಈ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹ ಸಮಸ್ಯೆಗೆ ಕಾರಣರಾಗಿರುವವರ ವಿಚಾರಣೆ ನಡೆಸಿ, ಈಗಲಾದರೂ ಭೂಮಿ ಕಳಕೊಂಡ ಅನ್ನದಾತರಿಗೆ ನ್ಯಾಯ ಒದಗಿಸಿಕೊಡಬೇಕಿದೆ ಎಂದು ಇದೇ ವೇಳೆ ಒತ್ತಾಯಿಸಿದರು.
ಈ ಬಗ್ಗೆ ಶೀಘ್ರವೇ ಮುಖ್ಯಮಂತ್ರಿಗಳನ್ನು ಹಾಗೂ ಕೆಐಎಡಿಬಿ ಅಧಿಕಾರಿಗಳನ್ನು ಹಾಗೂ ಸಂಬಂಧಪಟ್ಟವರ ಬಳಿ ನಿಯೋಗ ತೆರಳಿ ಸಮಸ್ಯೆನ್ನು ವಿವರಿಸಿ, ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ರೈತ ಕಲ್ಯಾಣ ಶ್ರಮಿಸಲಿದೆ ಎಂದು ಇದೇ ಸಂದರ್ಭದಲ್ಲಿ ಸಭೆಯಲ್ಲಿದ್ದ ನೊಂದ ರೈತರಿಗೆ ಭರವಸೆ ನೀಡಿದರು.
ಕೋಟ್..
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನಛತ್ರ ಹೋಬಳಿಯ ಇಮ್ಮಾವು ಗ್ರಾಮದ ಸರ್ವೇ ನಂ೩೯೧ರಿಂದ ೪೩೦ ಹಾಗೂ ೪೨೪ರ ಜಮೀನಿನ ವಿಚಾರವಾಗಿ ಕೆಐಎಡಿಬಿ ವತಿಯಿಂದ ಸ್ವಾಧೀನ ಪಡಿಸಿಕೊಳ್ಳಲಾಗಿರುವ ಜಮೀನುಗಳ ಸಾಕಷ್ಟು ಮಾಲೀಕರಿಗೆ ಪರಿಹಾರ ಈಗಾಗಲೇ ನೀಡಲಾಗಿದೆ. ಹಾಗೂ ಉಳಿದಿರುವ ರೈತರಿಗೂ ಪರಿಹಾರ ದೊರಕಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ. ಎಲ್ಲರಿಗೂ ಪರಿಹಾರ ಶೀಘ್ರವೇ ಮಂಜೂರಾಗಲಿದೆ.
ಶಿವಕುಮಾರ್,
ತಹಸೀಲ್ದಾರ್,
ನಂಜನಗೂಡು
ಕೋಟ್..
ಇರುವ ಮನೆಯೂ ಕುಸಿಯುವ ಸ್ಥಿತಿಯಲ್ಲಿದೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬಂದಿದೆ. ದಯಮಾಡಿ ನಮ್ಮ ಜಮೀನಿನ ಪರಿಹಾರ ಹಣ ಕೊಡಿಸಿ ಸಾಹೇಬ್ರೆ. ಇಲ್ಲದಿದ್ದರೆ ನಮ್ಮ ಜಮೀನನ್ನಾದರೂ ವಾಪಾಸ್ ಕೊಡಿಸಿ ನಿಮಗೆ ಪುಣ್ಯ ಬರುತ್ತೆ. ಅದೆಷ್ಟು ಕೊಡ್ತಾರೋ ಕೊಡಲಿ. ನಮ್ಮ ಸಂಕಷ್ಟ ಕೇಳೋರು ಯಾರು ಇಲ್ಲ ಸ್ವಾಮಿ.
ನೊಂದ ವೃದ್ದೆ
ಸೋಮೇಶ್ವರಪುರ ಗ್ರಾಮ
ಕೋಟ್..
೨೦೧೫ರಿಂದಲೂ ಪರಿಹಾರಕ್ಕಾಗಿ ತಹಸೀಲ್ದಾರ್, ಜಿಲ್ಲಾಧಿಕಾರಿ ಕಚೇರಿ ಹಾಗೂ ಬೆಂಗಲೂರಿನ ವಿಧಾನಸೌದಕ್ಕೂ ಅಲೆದು ಅಲೆದು ಸಾಕಾಗಿದೆ.ಆದರೆ ಈ ವರೆಗೂ ನ್ಯಾಯ ಸಿಕ್ಕಿಲ್ಲ. ಜಮೀನು ಸ್ವಾಧೀನಕ್ಕೆ ಮುನ್ನ ನೀಡಿದ ಭರವಸೆಯಂತೆ ಸೂಕ್ತ ಪರಿಹಾರವೂ ದೊರೆತಿಲ್ಲ.ಸಾಕಷ್ಟು ಸಂಕಷ್ಟದಲ್ಲಿದ್ದೇವೆ.ಸಾಯುವ ಸ್ಥಿತಿಯಲ್ಲಿದ್ದೇವೆ.ಭರವಸೆಯಂತೆ ಎಕರೆಗೆ ೧೨ಲಕ್ಷ ರೂ.ಪರಿಹಾರ ಕೂಡಲೇ ಮಂಜೂರು ಮಾಡಿಕೊಡಿ.
ನೊಂದ ರೈತ ಮಹಿಳೆ,
ಸೋಮೇಶ್ವರ ಪುರ ಗ್ರಾಮ
ಕೋಟ್..
ಅಭಿವೃದ್ದಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆಗಳು ಬರಬೇಕು. ಆದರೆ ಹಾಗೆಯೇ ರೈತರು ಬದುಕಬೇಕು. ಭೂ ಸ್ವಾದೀನ ಪಡೆಯುವುದಕ್ಕಿಂತ, ಗುತ್ತಿಗೆ ಪಡೆಯುವುದು ಒಳಿತಲ್ಲವೇ..? ಕೆಐಎಡಿಬಿ ಮತ್ತು ಕೆಹೆಚ್‌ಬಿನವರು ಗುತ್ತಿಗೆ ಆಧಾರದ ಮೇಲೆ ಎಲ್ಲಾ ಯೋಜನೆಗಳಿಗೆ ಭೂಮಿ ಪಡೆಯುವುದು ಸುಲಭ ಹಾಗೂ ಸರಳ ಮಾರ್ಗ. ಕೈಗಾರಿಕಾ ಕ್ಷೇತ್ರಕ್ಕೆ ಆಧಾರ ಸ್ಥಂಭವೇ ಕೃಷಿ ಕೇತ್ರ. ಕೈಗಾರಿಕೆ ಸ್ಥಾಪನೆಗಾಗಿ ಭೂಮಿ ಸ್ವಾಧೀನ ವಿಚಾರದಲ್ಲಿ ತಪ್ಪೇನಿಲ್ಲ. ಆದರೆ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ನೀಡುವ ಪರಿಹಾರ ಹಣವನ್ನು ನೀಡದೇ ವರ್ಷಗಟ್ಟಲೇ ರೈತರನ್ನು ಅಲೆಸುವುದು ಖಂಡನೀಯ.
ಭೂಮಿಪುತ್ರ ಸಿ. ಚಂದನ್‌ಗೌಡ,
ಸಂಸ್ಥಾಪಕ ರಾಜ್ಯಾಧ್ಯಕ್ಷ,
ರಾಜ್ಯ ರೈತ ಕಲ್ಯಾಣ ಸಂಘ