ಅಮಾನತ್ತುಗೊಂಡಿದ್ದ ಪೇದೆ ಅನುಚಿತ ವರ್ತನೆ ನ್ಯಾಯಾಂಗ ಬಂಧನ

 

ಹುಣಸೂರು:16 ಆಗಸ್ಟ್ 2021

ಇಲಾಖಾ ವಿಚಾರಣೆ ವೇಳೆಯೇ ಹಿರಿಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಬೆದರಿಕೆ ಒಡ್ಡಿದ ಆರೋಪದಡಿ ಅಮಾನತುಗೊಂಡಿರುವ ಮುಖ್ಯ ಪೇದೆಯೊರ್ವನನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಟಿ.ನರಸೀಪುರ ಠಾಣೆಯ ರೈಟರ್(ಠಾಣಾ ಬರಹಗಾರರಾಗಿದ್ದ ) ಕೃಷ್ಣೇಗೌಡ ಎಂಬಾತನೇ ಬಂಧನಕ್ಕೊಳಗಾದಾತ. ಇಲಾಖಾ ವಿಚಾರಣೆಯನ್ನು ಎದುರಿಸು ಬಂದಿದ್ದಾತ ಅನುಚಿತವಾಗಿ ವರ್ತಿಸಿದ್ದ.
೨೦೦೧ನೇ ಇಸವಿಯಲ್ಲಿ ಕೃಷ್ಣೇಗೌಡ ಪೊಲೀಸ್ ಇಲಾಖೆಗೆ ಪೇದೆಯಾಗಿ ಸೇರಿದ್ದು, ನಂಜನಗೂಡು ವಿಭಾಗದ ವಿವಿಧ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ, ನಂಜನಗೂಡು ವೃತ್ತದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದರಿಂದ ೨೦೧೯ರಲ್ಲಿ ನಂಜನಗೂಡು ಠಾಣೆಯಿಂದ ಟಿ.ನರಸೀಪುರ ಠಾಣೆಗೆ ವರ್ಗಾವಣೆಗೊಂಡಿದ್ದ ಮುಖ್ಯಪೇದೆ ಕೃಷ್ಣೇಗೌಡ ಪ್ರಭಾವ ಬೀರಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಇಲ್ಲೂ ಸಹ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಹಿರಿಯ ಅಧಿಕಾರಿಗಳಿಗೆ ಅಗೌರವವಾಗಿ ನಡೆದುಕೊಳ್ಳುತ್ತಿದ್ದ ಎನ್ನಲಾಗಿದ್ದು, ಇದರಿಂದ ಕೃಷ್ಣೇಗೌಡನ ವರ್ತನೆಯಿಂದ ರೈಟರ್ ಕೆಲಸಕ್ಕೆ ಬೇರೆಯವರನ್ನು ನಿಯೋಜಿಸಲಾಗಿತ್ತು, ಇದರಿಂದ ಕುಪಿತಗೊಂಡ ಕೃಷ್ಣೇಗೌಡ ತನ್ನ ವಶದಲ್ಲಿದ್ದ ಇಲಾಖೆಗೆ ಸೇರಿದ ೫೦ ಜೀವಂತ ಬುಲೆಟ್(ಗುಂಡು)ಗಳನ್ನು ಹೊತ್ತೊಯ್ದು, ಕಾವೇರಿ ನದಿ ಸೇತುವೆ ಕೆಳಗೆ ಬಿಸಾಡಿದ್ದ, ಟಿ.ನರಸೀಪುರ ಠಾಣೆಯಲ್ಲಿ ಅಂದೇ ಪ್ರಕರಣ ದಾಖಲಾಗಿತ್ತು. ನಂತರದಲ್ಲಿ ಸೇತುವೆ ಕೆಳಗಿನ ನದಿಯಲ್ಲಿ ಬುಲೆಟ್‌ಗಳು ದೊರೆತಿದ್ದವು. ಆರೋಪಿ ಕೃಷ್ಣೇಗೌಡನನ್ನು ಬಂಧಿಸಿ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿ ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿತ್ತು.

ಹುಣಸೂರು ಡಿವೈಎಸ್‌ಪಿ ರವಿಪ್ರಸಾದ್‌ರಿಗೆ ವಿಚಾರಣೆ ಜವಾಬ್ದಾರಿ ವಹಿಸಲಾಗಿತ್ತು. ಆ.೧೪ರಂದು ಬೆಳಗ್ಗೆ ವಿಚಾರಣೆಗೆ ಹಾಜರಾದ ಕೃಷ್ಣೇಗೌಡ ಅನುಚಿತವಾಗಿ ವರ್ತಿಸಿದ್ದಾನೆ. ಈ ವೇಳೆ ಡಿವೈಎಸ್‌ಪಿ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರ ಮೇರೆಗೆ ಸ್ಥಳಕ್ಕಾಗಮಿಸಿದ ಇನ್ಸ್‌ಪೆಕ್ಟರ್ ಸಿ.ವಿ.ರವಿರವರ ಮೇಲೂ ಹರಿಹಾಯ್ದು ಏಕಾಏಕಿ ಕಚೇರಿಯಿಂದ ಹೊರಬಂದು ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ನನ್ನ ಕೈಯಲ್ಲಿದ್ದಾರೆ, ನೀವೇನೂ ಮಾಡಲಾಗಲ್ಲವೆಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಲ್ಲದೆ ಪೊಲೀಸರು ಹೊಡೆಯುತ್ತಿದ್ದಾರೆಂದು ಆವರಣದಲ್ಲಿ ತನ್ನ ಬಟ್ಟೆ ಹರಿದುಕೊಂಡು ಕೂಗಾಟನಡೆಸಿದ್ದಾನೆ. ಡಿವೈಎಸ್‌ಪಿ ರವಿಪ್ರಸಾದ್ ನೀಡಿರುವ ದೂರಿನ ಮೇರೆಗೆ ಕೃಷ್ಣೇಗೌಡರ ವಿರುದ್ದ ಪ್ರಕರಣ ದಾಖಲಿಸಿರುವ ನಗರ ಠಾಣೆ ಪೊಲೀಸರು ಇದೀಗ ಪ್ರಕರಣವನ್ನು ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಪುಕ್ಕಟೆ ಮನರಂಜನೆ: ಡಿವೈಎಸ್‌ಪಿ ಕಚೇರಿ ಪಕ್ಕದಲ್ಲೇ ಗ್ರಾಮಾಂತರ ಠಾಣೆ ಇದ್ದು, ಇಲ್ಲಿಗೆ ಬಂದಿದ್ದವರು ಹಾಗೂ ಆವರಣದ ಪೊಲೀಸ್ ಕ್ಯಾಂಟಿನ್‌ನಲ್ಲಿದ್ದ ಜನರು ಕೃಷ್ಣೇಗೌಡನ ಕೂಗಾಟ ಕಂಡು ಓಡಿ ಬಂದರಾದರೂ ಸತ್ಯಾಂಶ ತಿಳಿದು ಪುಕ್ಕಟೆ ಮನರಂಜನೆ ಪಡೆದು ತೆರಳಿದರು.

ಸೂಕ್ತ ಕ್ರಮಕ್ಕಾಗಿ ಒತ್ತಾಯ: ಶಿಸ್ತಿನ ಇಲಾಖೆಯಾಗಿರುವ ಪೊಲೀಸ್ ಇಲಾಖೆಯಲ್ಲಿ ಇಂತಹ ಕೃತ್ಯ ಎಸಗುವವರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರಲಿದೆ. ಈತನನ್ನು ವಜಾಗೊಳಿಸಿ ಇಲಾಖೆ ಮರ್‍ಯಾದೆ ಕಾಪಾಡುವಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *