ಪಿರಿಯಾಪಟ್ಟಣ :19 ಏಪ್ರಿಲ್ 2022
ನಂದಿನಿ ಮೈಸೂರು
ಮೈಸೂರು ಜಿಲ್ಲಾ ಹಾಲು ಒಕ್ಕೂಟವು ಉತ್ಪಾದಕರಿಗೆ ಉತ್ತಮ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಇತರರಿಗೆ ಮಾದರಿಯಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಶ್ಲಾಘಿಸಿದರು.
ಪಟ್ಟಣದ ಜೂನಿಯರ್ ಕಾಲೇಜ್ ಆವರಣದಲ್ಲಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಉಪ ಕಚೇರಿ ಮತ್ತು ರಾಸು ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಾದ್ಯಂತ 15 ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳಿದ್ದು, ಮೈಸೂರು ಹಾಲು ಒಕ್ಕೂಟವು ರೈತರಿಗೆ ಸಹಕಾರಿಯಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿದ್ದು, ಉತ್ಪಾದಕರಿಗೆ ಆರ್ಥಿಕ ಸದೃಢತೆಗೆ ಹೆಚ್ಚಿನ ಸಾಲ ಸೌಲಭ್ಯ ನೀಡಿ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ವಿಮೆ, ಯಶಸ್ವಿನಿ ಯೋಜನೆ, ಹೈನುಗಾರಿಕೆಗೆ ವಿವಿಧ ಬ್ಯಾಂಕುಗಳ ಸಾಲ ಕೊಡಿಸುವ ಮಹತ್ವದ ಯೋಜನೆಗಳನ್ನು ಜಾರಿಗೋಳಿಸಿದೆ. ರಾಜ್ಯದ ಮುಖ್ಯಮಂತ್ರಿಗಳು 33 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ನೀಡಲು ಕ್ರಮ ಕೈಗೊಂಡಿದ್ದು, ಇದರಲ್ಲಿ 1,480 ಕೋಟಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಮುಂದಾಗಿದ್ದಾರೆ ಅಲ್ಲದೆ ರಾಗಿ ಕರಿದಿಸಲು 480 ಕೋಟಿ ಹಣವನ್ನು ಬಿಡುಗಡೆಗೊಳಿಸಲಾಗಿದೆ ಆದ್ದರಿಂದ ರೈತರು ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ ಹೈನುಗಾರಿಕೆಯಿಂದ ಜೀವನ ಸಾರ್ಥಕಗೊಳಿಸಲು ಸಾಧ್ಯವಾಗಿದ್ದು ಇದರಿಂದ ಅನೇಕ ಕುಟುಂಬಗಳು ಇಂದಿಗೂ ಹೈನುಗಾರಿಕೆಗೆ ಒತ್ತು ನೀಡುತ್ತಿದೆ. ಮತ್ತು ಕೋವಿಡ್ ನಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕೂಡ ಮೈಸೂರು ಹಾಲು ಒಕ್ಕೂಟವು ರೈತರ ಹಿತ ಕಾಯುವ ಕಾರ್ಯ ಮಾಡಿದೆ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ಎಸ್.ಬಿ.ಐ ಬ್ಯಾಂಕಿನಲ್ಲಿ ಹೈನುಗಾರಿಕೆ ಮಾಡಲಿಚ್ಚಿಸುವವರಿಗೆ 5 ಸಾಲಿನಲ್ಲಿ ರಾಸುಗಳಿಗೆ ಸಾಲ ನೀಡಲು ಮನವಿ ಮಾಡಲಾಗಿದೆ. ಈ ಹಿಂದೆ ತಾಲ್ಲೂಕಿನಲ್ಲಿ 40 ಸಾವಿರ ಉತ್ಪಾದನೆಯಾಗುತ್ತಿತ್ತು ಆದರೆ ಪ್ರಸ್ತುತ 1 ಲಕ್ಷಕ್ಕೂ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ ಇದನ್ನು 2 ಲಕ್ಷಕ್ಕೆ ತಲುಪಿಸುವ ಗುರಿ ನಮ್ಮದಾಗಿದೆ. ಇದಕ್ಕಾಗಿ 70ರಿಂದ 80 ಹಾಲು ಉತ್ಪಾದಕರ ಸಂಘಗಳು, 42 ಹಾಲು ಉತ್ಪಾದಕ ಕೇಂದ್ರಗಳು ಶ್ರಮಿಸುತ್ತಿದೆ ಮತ್ತು ಮೈಮುಲ್ ನಿಂದ ಯುಎಸ್ಬಿ ಬ್ಯಾಂಕ್ ತೆರೆಯುವ ಯೋಜನೆ ಇದೆ. ತಾಲೂಕಿನಲ್ಲಿಯೂ ಪಶು ಆಹಾರ ಘಟಕವನ್ನು ಸ್ಥಾಪನೆ ಮಾಡುವುದರ ಜೊತೆಗೆ 250 ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿನಿಲಯ ನಿರ್ಮಿಸುವುದನ್ನು ಗುರಿ ಹೊಂದಿದ್ದೇವೆ. ಈ ಕಾರ್ಯಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಇದನ್ನು ಪ್ರತಿಯೊಬ್ಬರು ಅರ್ಥಯಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ, ನಿರ್ದೇಶಕರಾದ ಸೋಮಶೇಖರ್, ಮಹೇಶ್, ಹಿರೇಗೌಡ, ಓಂಪ್ರಕಾಶ್, ಕುಮಾರ್, ದ್ರಾಕ್ಷಯಿಣಿ, ಒಂಪ್ರಕಾಶ್, ಉಮಾಶಂಕರ್, ಲೀಲಾ, ಶಿವಾಗಾಮಿ, ರಾಜೇಂದ್ರ, ಪುರಸಭೆ ಅಧ್ಯಕ್ಷೆ ನಾಗರತ್ನ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಬಿ.ಎನ್.ಷಡಕ್ಷರ ಮೂರ್ತಿ, ವಿಜಯ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.