ಪಿರಿಯಾಪಟ್ಟಣ:14 ಜುಲೈ 2022
ಸತೀಶ್ ಆರಾಧ್ಯ/ ನಂದಿನಿ ಮೈಸೂರು
ಪಿರಿಯಾಪಟ್ಟಣ ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ನೀಡುತ್ತಿರುವ ಅನುದಾನ ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ 2021-22 ನೇ ಸಾಲಿನ ವಾಜಪೇಯಿ ಹಾಗೂ ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು, ಪರಿಶಿಷ್ಟ ಜಾತಿ ಪಂಗಡದ ಫಲಾನುಭವಿಗಳಿಗೆ 2 ಲಕ್ಷ ಇತರೆ ಸಮುದಾಯ ಫಲಾನುಭವಿಗಳಿಗೆ 1.20 ಲಕ್ಷ ರೂ ಸಹಾಯ ಧನ ನೀಡಲಾಗುತ್ತಿದೆ, ಸರ್ಕಾರದ ಈ ತೀರ್ಮಾನ ಅವೈಜ್ಞಾನಿಕವಾಗಿದ್ದು ಅನುದಾನವನ್ನು ಹೆಚ್ಚಿಸುವಂತೆ ಮನವಿ ನೀಡುತ್ತೇನೆ, ಈ ಹಿಂದೆ ನಾನು ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 1350 ಮನೆಗಳನ್ನು ಕಡುಬಡವರಿಗೆ ವಿತರಿಸಿದ್ದೆ ತದನಂತರದ ದಿನಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ
ಜನಪ್ರತಿನಿಧಿಯಿಂದ ಒಂದು ಮನೆಗಳನ್ನು ನೀಡಿಲ್ಲ, ಪುರಸಭೆ ಚುನಾವಣೆ ಸಂದರ್ಭ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 2 ಸಾವಿರ ಮನೆಗಳನ್ನು ನಿವೇಶನರಹಿತ ಬಡವರಿಗೆ ವಿತರಿಸಲು ಭರವಸೆ ನೀಡಲಾಗಿತ್ತು ಮುಂದಿನ ದಿನಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ನಿವೇಶನ ವಿತರಿಸಲು ಕ್ರಮ ಕೈಗೊಳ್ಳುತ್ತೇನೆ, ಶಾಸಕನಾಗಿ ಆಯ್ಕೆಯಾದ ನಂತರ ಕೋವಿಡ್ ಹಾಗೂ ನೆರೆ ಪ್ರವಾಹ ಸಂಕಷ್ಟದಿಂದಾಗಿ ಸರ್ಕಾರ ಅಭಿವೃದ್ಧಿ ಕೆಲಸಗಳಿಗೆ ಹಣ ನೀಡಿರಲಿಲ್ಲ, ಮಳೆಗಾಲ ಸಂದರ್ಭ ಪಟ್ಟಣದಲ್ಲಿನ ರಸ್ತೆಗಳ ಸಂಬಂಧ ಸಮಸ್ಯೆಗಳು ಉಂಟಾಗಿದ್ದು ಪಟ್ಟಣದ ಅಭಿವೃದ್ಧಿಗಾಗಿ 20 ಕೋಟಿ ಹಣ ಮಂಜೂರು ಮಾಡಿಸಿದ್ದು ಶೀಘ್ರವೇ ಪುರಸಭಾ ವ್ಯಾಪ್ತಿಯ ಎಲ್ಲಾ ರಸ್ತೆಗಳ ದುರಸ್ತಿ ಮಾಡಲಾಗುವುದು, ಇದಲ್ಲದೆ ಮೈಸೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅಕ್ಕಪಕ್ಕ ಇರುವ ಜಾಗವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ 50 ಕೋಟಿ ಮಂಜೂರಾತಿಗಾಗಿ ಸಂಸದರೊಂದಿಗೆ ಚರ್ಚಿಸಲಾಗುತ್ತಿದೆ ಎಂದರು.
ಈ ಸಂದರ್ಭ ಪುರಸಭೆ ಅಧ್ಯಕ್ಷ ಕೆ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಸದಸ್ಯರಾದ ಮಂಜುನಾಥ್, ರವಿ, ನಿರಂಜನ್, ಮಂಜುಳಾ, ಪುಷ್ಪಲತಾ, ಆಶಾ, ಶಿವರಾಮೇಗೌಡ, ಪ್ರಸಾದ್, ಪ್ರಕಾಶ್ ಸಿಂಗ್, ನೂರ್ ಜಹಾನ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖ್ಯಾಧಿಕಾರಿ ಎ.ಟಿ ಪ್ರಸನ್ನ, ವಸತಿ ಯೋಜನೆ ನೋಡಲ್ ಅಧಿಕಾರಿ ಶರ್ಮಿಳಾ, ಮುಖಂಡರಾದ ರಘುನಾಥ್, ಟಿ.ರಾಜು, ಗೋಪಾಲ್, ಶಿವಣ್ಣ, ಮುಶೀರ್ ಖಾನ್ ಮತ್ತಿತರಿದ್ದರು .