ಕ್ಷೇತ್ರದಲ್ಲಿ ಬದಲಾವಣೆಯನ್ನು ತರಬೇಕು ಎಂದರೆ ನನಗೆ ಬೆಂಬಲ ನೀಡಿ: ಎನ್.ಆರ್.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ

ನಂದಿನಿ ಮೈಸೂರು

ಮೈಸೂರು: ನರಸಿಂಹರಾಜ ಕ್ಷೇತ್ರ ಕಳೆದ 60 ವರ್ಷಗಳಿಂದಲೂ ಯಾವುದೇ ರೀತಿಯಿಂದ ಅಭಿವೃದ್ಧಿಯಾಗಿಲ್ಲ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹಾಗಾಗಿ ಈ ಬಾರಿ ಕ್ಷೇತ್ರದ ಜನರು ಬದಲಾವಣೆಯನ್ನು ಬಯಸಿದ್ದು, ತಮ್ಮನ್ನು ಆಯ್ಕೆ ಮಾಡುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿಯಾದ ನಗರಪಾಲಿಕೆಯ ಮಾಜಿ ಮೇಯರ್ ಸಂದೇಶ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಮೈಸೂರಿನ ಚಾಮರಾಜಪುರಂನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿ ಕಾಣುತ್ತಿದ್ದರೆ, ಮೈಸೂರಿನ ಎನ್.ಆರ್ ಕ್ಷೇತ್ರ ಮಾತ್ರ ಯಾವುದೇ ರೀತಿಯ ಅಭಿವೃದ್ಧಿಯನ್ನು ಕಾಣದೆ, ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಇದಕ್ಕೆ ಕಾರಣ ಈ ಕ್ಷೇತ್ರದ ಜನರು ಒಂದೇ ಕುಟುಂಬಕ್ಕೆ ಅಧಿಕಾರವನ್ನು ನೀಡುತ್ತಾ ಬಂದಿರುವುದೇ.
ಕ್ಷೇತ್ರದಲ್ಲಿ ಅಜೀಜ್ ಸೇಠ್ ಅವರು ಸತತವಾಗಿ ಶಾಸಕರಾಗಿದ್ದರು. ನಂತರ ಅವರ ಪುತ್ರ ತನ್ವೀರ್ ಸೇಠ್ ಸತತವಾಗಿ ಶಾಸಕರಾಗಿ ಆಯ್ಕೆಯಾಗಿ ಬರುತ್ತಿದ್ದಾರೆ. ಆದರೆ ಯಾವುದೇ ರೀತಿಯಲ್ಲೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಇದರಿಂದಾಗಿ ಯಾವುದೇ ಮೂಲಸೌಲಭ್ಯಗಳಿಲ್ಲದೆ ಜನರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಕ್ಷೇತ್ರದಲ್ಲಿ ಸೂಕ್ತ ರೀತಿಯಲ್ಲಿ ಆಸ್ಪತ್ರೆಗಳಿಲ್ಲ, ಶಾಲಾ ಕಾಲೇಜುಗಳಿಲ್ಲ. ಇದರಿಂದಾಗಿ ಕ್ಷೇತ್ರದ ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸುತ್ತಿದ್ದಾರೆ. ಬಡಜನರಿಗೆ ಯಾವುದೇ ವಸತಿ ಸೌಲಭ್ಯಗಳನ್ನು ಕಲ್ಪಿಸಿಲ್ಲ, ಸ್ವತಂತ್ರ ಬಂದು 75 ವರ್ಷಗಳಾದರೂ ಕೂಡ ಈ ಕ್ಷೇತ್ರದಲ್ಲಿ ಹೆಚ್ಚಾಗಿ ಬಡಜನರು ಇನ್ನೂ ಕೂಡ ಜೋಪಡಿ ಮನೆಗಳಲ್ಲಿ ವಾಸಿಸುತ್ತಿದ್ದು, ದುಸ್ಥಿತಿಯ ಜೀವನವನ್ನು ನಡೆಸುತ್ತಿದ್ದಾರೆ. ಹೆಚ್ಚಾಗಿ ಈ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರೇ ವಾಸಿಸುತ್ತಿದ್ದು, ಅವರಿಗೆ ಉದ್ಯೋಗ ಕಲ್ಪಿಸುವಂತಹ ಯಾವುದೇ ವ್ಯವಸ್ಥೆಯನ್ನು ಶಾಸಕರು ಮಾಡಿಲ್ಲ ಎಂದು ಆರೋಪಿಸಿದ್ದರು.

ಎನ್.ಆರ್.ಕ್ಷೇತ್ರ ಈ ರೀತಿಯ ದುಸ್ಥಿತಿಯನ್ನು ಎದುರಿಸುತ್ತಿರುವುದಕ್ಕೆ ಒಂದು ಜಾತಿಯ ಮತ್ತು ಧರ್ಮದ ಜನರು ಅಭಿಮಾನಿದಿಂದ ಒಂದೇ ಕುಟುಂಬದವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿಕೊಂಡು ಬರುತ್ತಿರುವುದೇ ಕಾರಣವಾಗಿದೆ. ಜನರಿಂದ ಆಯ್ಕೆಯಾದ ಶಾಸಕರು ಬಳಿಕ ಜನರ ಸಮಸ್ಯೆಗಳತ್ತ ತಿರುಗಿಯೂ ನೋಡುವುದಿಲ್ಲ. ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷ ಮಾಡಿಕೊಂಡು ಬರುತ್ತಿದ್ದಾರೆ. ಆ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಕಿಡಿಕಾರಿದರು.

ಶಾಸಕರು ಮತದಾರರು ಮನೆ, ಮನೆಗೆ ಹೋಗಿ ಮತವನ್ನು ಕೇಳುತ್ತಿಲ್ಲ. ಬದಲಿಗೆ ತಮ್ಮ ಬೆಂಬಲಿಗರನ್ನು ಬಿಟ್ಟು ಜನರನ್ನು ಹೆದರಿಸಿ, ಬೆದರಿಸಿ ಮತಪಡೆಯುವ ಆ ಮೂಲಕ ಗೆಲ್ಲುವ ಪ್ರಯತ್ನ ಮಾಡ್ತಾ ಇದ್ದಾರೆ. ಇದಕ್ಕೆಲ್ಲಾ ಕ್ಷೇತ್ರದ ಮತದಾರರು ಈ ಬಾರಿ ಅವಕಾಶ ನೀಡಬಾರದು. ಕ್ಷೇತ್ರದಲ್ಲಿ ಬದಲಾವಣೆಯನ್ನು ತರಬೇಕು ಎಂದರೆ ನನಗೆ ಬೆಂಬಲ ನೀಡಿ, ಗೆಲ್ಲಿಸಿಕೊಟ್ಟರೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ. ಕ್ಷೇತ್ರಕ್ಕೆ ರಸ್ತೆ, ಕುಡಿಯುವ ನೀರು ಪೂರೈಕೆ ವಸತಿ ಸೌಲಭ್ಯ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಜನರಿಗೆ ಒದಗಿಸಿಕೊಡುತ್ತೇನೆ. ವಾಸಿಸುತ್ತಿರುವ ಬಡಜನರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಿ ಕೊಡುತ್ತೇನೆ ಕ್ಷೇತ್ರದ ಜನರು ನನ್ನನ್ನು ಒಂದು ಬಾರಿ ಶಾಸಕರಾಗಿ ಆಯ್ಕೆ ಮಾಡಬೇಕು ಎಂದು ಕೋರಿದರು.

ನಾನು ಮೈಸೂರು ನಗರಪಾಲಿಕೆಯ ಸದಸ್ಯನಾಗಿ, ಮೇಯರ್ ಆಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಎರಡು ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಈ ಬಗ್ಗೆ ಜನರ ಅನುಕಂಪದ ಒಲವು ನನ್ನ ಮೇಲಿದೆ. ಹಾಲಿ ಶಾಸಕ ತನ್ವೀರ್ ಸೇಠ್ ಅವರು ತಮಗೆ ಆರೋಗ್ಯ ಸರಿ ಇಲ್ಲವೆಂದು, ಈ ಬಾರಿ ನನಗೆ ಟಿಕೆಟ್ ಬೇಡ ಎಂದು ಹೇಳಿದ್ದರು. ಆದರೂ ಕೂಡ ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನೀಡಿದೆ. ಶಾಸಕ ತನ್ವೀರ್ ಸೇಠ್‌ರ ವರ್ತನೆ, ಅಭಿವೃದ್ಧಿಯ ನಿರ್ಲಕ್ಷö್ಯ ಧೋರಣೆಯಿಂದ ಬೇಸೆತ್ತು ಹೋಗಿರುವ ಕ್ಷೇತ್ರದಲ್ಲಿನ ಜನರ ಮನಸ್ಥಿತಿ ಬದಲಾಗಿದೆ. ಈಗ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಹಾಗಾಗಿ ನನಗೆ ಈ ಬಾರಿ ಅಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಸಂದೇಶ್ ನಾಗರಾಜ್‌ರು ನನ್ನನ್ನು ಬೆಂಬಲಿಸುತ್ತಾರೆ;
ನನ್ನ ಸಹೋದರರಾದ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹಾಗೂ ಅವರ ಕುಟುಂಬದವರು ನನ್ನನ್ನು ಈ ಚುನಾವಣೆಯಲ್ಲಿ ಬೆಂಬಲಿಸುತ್ತಾರೆ. ಸಂದೇಶ್ ನಾಗರಾಜ್ ಅವರು ಜೆಡಿಎಸ್‌ನಿಂದ ವಿಧಾನಪರಿಷತ್ ಸದಸ್ಯರಾಗಿದ್ದಾಗ, ಬಿಜೆಪಿಯಿಂದ ನನಗೆ ಎನ್.ಆರ್.ಕ್ಷೇತ್ರಕ್ಕೆ ಟಿಕೆಟ್ ನೀಡಿತ್ತು. ಆ ಚುನಾವಣೆಯಲ್ಲಿ ಸಂದೇಶ್ ನಾಗರಾಜ್ ಹಾಗೂ ಕುಟುಂಬ, ಬೆಂಬಲಿಗರು ನನ್ನನ್ನು ಬೆಂಬಲಿಸಿ, ನನಗೆ ಆಶೀರ್ವಾದ ಮಾಡಿದ್ದರು. ಈಗ ಸಂದೇಶ್ ನಾಗರಾಜ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಕೂಡ ನನ್ನ ಗೆಲುವಿಗೆ ಬೆಂಬಲ ನೀಡಿ, ಆಶೀರ್ವಾದ ಮಾಡಲಿದ್ದಾರೆ ಎಂದು ತಿಳಿಸಿದರು.

ಎನ್.ಆರ್.ಕ್ಷೇತ್ರದ ಅಧ್ಯಕ್ಷ ಭಾನು ಪ್ರಕಾಶ್ ಮಾತನಾಡಿ, ಕ್ಷೇತ್ರದ ಶಾಸಕರು ಅಭಿವೃದ್ಧಿಯ ಬಗ್ಗೆ ಹೊಂದಿರುವ ನಿರ್ಲಕ್ಷö್ಯ ಧೋರಣೆ, ಅವರ ಆಡಳಿತ ವೈಖರಿಯಿಂದಾಗಿ ಕ್ಷೇತ್ರ ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಕುರಿತು ನಾವು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಶಾಸಕ ತನ್ವೀರ್‌ಸೇಠ್‌ರ ವರ್ತನೆಯಿಂದ ಜನರು ಕೂಡ ರೋಸಿ ಹೋಗಿದ್ದಾರೆ. ಎಲ್ಲಾ ಜಾತಿ,ಮತ, ಧರ್ಮಗಳ ಜನರು ಬಿಜೆಪಿ ಬಗ್ಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ 15 ಸಾವಿರಕ್ಕೂ ಹೆಚ್ಚು ಹಿಂದೂಗಳನ್ನು ಹೊಸ ಮತದಾರರನ್ನಾಗಿ ನೋಂದಾಯಿಸಿದ್ದೇವೆ. ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಕಾರ್ಯಧ್ಯಕ್ಷ ಹೆಚ್.ಜಿ. ಗಿರಿಧರ್, ಪಕ್ಷದ ವಕ್ತಾರ ಡಾ. ಕೆ.ವಸಂತ್ ಕುಮಾರ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್, ಸಹ ವಕ್ತಾರ ಕೇಬಲ್ ಮಹೇಶ್ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ನಿರ್ಲಕ್ಷ್; ಶಿವಕುಮಾರ್

ಕಾಂಗ್ರೆಸ್ ಸರ್ಕಾರ ಕಳೆದ 60 ವರ್ಷದಲ್ಲಿ ಹಿಂದುಳಿದ ವರ್ಗಗಳಿಗೆ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ಆರೋಪಿಸಿದರು ಮೈಸೂರಿನ ಚಾಮರಾಜಪುರಂನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ರಾಜ್ಯದಲ್ಲಿ ಕನಕ ಜಯಂತಿ ಆಚರಣೆಯನ್ನು ಜಾರಿಗೆ ತಂದರಲ್ಲದೆ, ಕಾಗಿನೆಲೆ ಅಭಿವೃದ್ಧಿಗೆ 40 ಕೋಟಿ ರೂಪಾಯಿಗಳನ್ನು ನೀಡಿದರು. ಸಮಾಜದ ಏಳಿಗೆಗೆ ಎಲ್ಲಾ ರೀತಿಯ ಅನುದಾನಗಳನ್ನು ನೀಡಿದ್ದಾರೆ. ವಿಶೇಷವಾಗಿ ಕನಕ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ನೀಡಿ ಸಮಾಜವನ್ನು ಮೇಲುತ್ತುವ ಪ್ರಯತ್ನ ನಡೆಸಿದರು. ವಿದ್ಯಾ ಸಂಸ್ಥೆಗಳಿಗೂ ಕೂಡ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ. ಹಿಂದುಳಿದ ವರ್ಗಗಳ ಸ್ಥಿತಿಯನ್ನು ಉತ್ತಮಗೊಳಿಸುವುದಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು ಎಂದು ಹೇಳಿದರು.
ಸಿದ್ದರಾಮಯ್ಯನವರ ಆಡಳಿತಕ್ಕೂ, ಬಿಜೆಪಿ ಸಕಾರದ ಆಡಳಿತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬಿಜೆಪಿ ಸರ್ಕಾರವೇ ಎಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದೆ ಎಂದರು.

 

Leave a Reply

Your email address will not be published. Required fields are marked *