ನಂದಿನಿ ಮೈಸೂರು
*ಯುವ ಪ್ರತಿಭೆ ಜೊತೆ ಕೈ ಜೋಡಿಸಿದ ನಿರೂಪ್ ಭಂಡಾರಿ…ಜನವರಿಯಿಂದ ಶೂಟಿಂಗ್ ಚಾಲು*
ರಂಗಿತರಂಗ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಚಿರಪರಿಚಿತರಾದ ನಿರೂಪ್ ಭಂಡಾರಿ ಆ ನಂತರ ರಾಜರಥ, ವಿಕ್ರಾಂತ್ ರೋಣ, ಆದಿ ಲಕ್ಷ್ಮಿ ಪುರಾಣ ಮತ್ತು ವಿಂಡೋ ಸೀಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ನಿಭಾಯಿಸುತ್ತಿರುವ ಯುವ ಪ್ರತಿಭೆ ಸಚಿನ್ ವಾಲಿ ಜೊತೆ ಕೈ ಜೋಡಿಸಿದ್ದಾರೆ.
ಕೆಲವೊಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಸಚಿನ್ ವಾಲಿ ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೇಳಲು ಸಚಿನ್ ಹೊರಟ್ಟಿದ್ದಾರೆ. ಅವರ ಚೊಚ್ಚಲ ಪ್ರಯತ್ನದಲ್ಲಿ ನಾಯಕನಾಗಿ ನಿರೂಪ್ ಭಂಡಾರಿ ಬಣ್ಣ ಹಚ್ಚಲಿದ್ದಾರೆ.
ಸ್ಕ್ರಿಪ್ಟ್ ಪೂಜೆ ಮುಗಿಸಿಕೊಂಡಿರುವ ಈ ಸಿನಿಮಾಗೆ ಅಂಕೆತ್ ಸಿನಿಮಾಸ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ ನಿರ್ಮಿಸಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಜನವರಿಯಿಂದ ಶೂಟಿಂಗ್ ಹೊರಡಲು ಸಜ್ಜಾಗಿರುವ ಚಿತ್ರತಂಡ, ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ, ತುಮಕೂರು ಹಾಗೂ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ.