ಯಶಸ್ವಿಯಾಗಿ ನಡೆದ 9ನೇ ಆವೃತ್ತಿಯ ಟೆಕ್‌ಜಿಯಂ® 2026

ನಂದಿನಿ ಮನುಪ್ರಸಾದ್ ನಾಯಕ್

 

ಯಶಸ್ವಿಯಾಗಿ ನಡೆದ 9ನೇ ಆವೃತ್ತಿಯ ಟೆಕ್‌ಜಿಯಂ® 2026;
ಭಾರತದ ಡೀಪ್- ಟೆಕ್ ಎಂಜಿನಿಯರಿಂಗ್ ಸಾಮರ್ಥ್ಯ ಪ್ರದರ್ಶನ, ರಾಷ್ಟ್ರ ಮಟ್ಟದ ಸ್ಪರ್ಧಿಗಳ ಭಾಗಿ
ಭಾರತದ ಅತಿದೊಡ್ಡ ಎಂಜಿನಿಯರಿಂಗ್ ಸ್ಪರ್ಧೆಯ 9ನೇ ಆವೃತ್ತಿಯಲ್ಲಿ ಭಾಗವಹಿಸುವಿಕೆ ಶೇ. 60ಕ್ಕಿಂತ ಹೆಚ್ಚು ಏರಿಕೆಯಾಗಿದೆ; 540ಕ್ಕೂ ಹೆಚ್ಚು ಎಂಜಿನಿಯರಿಂಗ್ ಸಂಸ್ಥೆಗಳಿಂದ ನಾಮನಿರ್ದೇಶನ.


ಮೈಸೂರು, ಮೇ 15, 2026: ಎಐ, ಡಿಜಿಟಲ್ ಮತ್ತು ಇಆರ್&ಡಿ ಕನ್ಸಲ್ಟಿಂಗ್ ಸೇವೆಗಳಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಎಲ್&ಟಿ ಟೆಕ್ನಾಲಜಿ ಸರ್ವಿಸಸ್ ಸಂಸ್ಥೆಯು ಭಾರತದ ಡೀಪ್-ಟೆಕ್ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಜಗತ್ತಿಗೆ ಸಾರುವ ಸಲುವಾಗಿ, ವಿದ್ಯಾರ್ಥಿಗಳಿಗಾಗಿ ಆಯೋಜಿಸುವ ಭಾರತದ ಅತಿದೊಡ್ಡ ಎಂಜಿನಿಯರಿಂಗ್ ಸ್ಪರ್ಧಾ ವೇದಿಕೆಯಾದ ಟೆಕ್‌ಜಿಯಂ® ನ ಒಂಬತ್ತನೇ ಆವೃತ್ತಿಯು ಶುಕ್ರವಾರ ಎಲ್‌ಟಿಟಿಎಸ್ ಮೈಸೂರು ಕ್ಯಾಂಪಸ್‌ ನಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು.
ಈ ಬಾರಿಯ ಸ್ಪರ್ಧೆಯು ದಾಖಲೆ ಮಟ್ಟದ 62,000ಕ್ಕೂ ಹೆಚ್ಚು ನೋಂದಣಿಗಳನ್ನು ಕಾಣುವ ಮೂಲಕ ದೇಶದ ಗಮನ ಸೆಳೆದಿದೆ. ದೇಶಾದ್ಯಂತ 540ಕ್ಕೂ ಹೆಚ್ಚು ಎಂಜಿನಿಯರಿಂಗ್ ಸಂಸ್ಥೆಗಳಿಂದ ಸ್ಪರ್ಧಿಗಳು ಹೆಸರು ನೋಂದಣಿ ಮಾಡಿದ್ದರು. ಈ ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಸಂಖ್ಯೆ ಶೇ. 60ರಷ್ಟು ಹೆಚ್ಚಳವಾಗಿದ್ದು, 2016ರಲ್ಲಿ ಈ ವೇದಿಕೆ ಆರಂಭವಾದಾಗಿನಿಂದ ಸುಮಾರು ಶೇ. 800ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಈ ವರ್ಷದ ಅಂತಿಮ ಸ್ಪರ್ಧಿಗಳು ವಿವಿಧ ತಂತ್ರಜ್ಞಾನಗಳಲ್ಲಿ ನವೀನ ಪರಿಕಲ್ಪನೆಗಳನ್ನು ಪ್ರದರ್ಶಿಸಿದರು. ಇದರಲ್ಲಿ ವೈದ್ಯಕೀಯ ರೋಗನಿರ್ಣಯಕ್ಕಾಗಿ ರೋಬೋಟಿಕ್ ಆಟೋಮೇಷನ್, ಎಐ-ಚಾಲಿತ ಬಹುಭಾಷಾ ವೀಡಿಯೋ ಲೋಕಲೈಸೇಷನ್, ಲೈವ್ ಎಐ ಕ್ಯಾಪ್ಶನಿಂಗ್ ವ್ಯವಸ್ಥೆಗಳು, ಸ್ಮಾರ್ಟ್ ಹೋಮ್ ಮಾನಿಟರಿಂಗ್‌ ಗಾಗಿ ವೈ-ಫೈ ಸೆನ್ಸಿಂಗ್ ಮತ್ತು ಸುರಕ್ಷಿತ ಕೈಗಾರಿಕಾ ಕಾರ್ಯಾಚರಣೆಗಳಿಗಾಗಿ ಅಡಾಪ್ಟಿವ್ ರೋಬೋಟಿಕ್ ಆರ್ಮ್‌ ಗಳು ಪ್ರಮುಖವಾಗಿದ್ದವು.

ಡೀಪ್-ಟೆಕ್ ಆವಿಷ್ಕಾರ, ಅಪ್ಲೈಡ್ ರಿಸರ್ಚ್ ಮತ್ತು ಉದ್ಯಮ ಮಾರ್ಗದರ್ಶನದ ಮೂಲಕ ನೈಜ ಪ್ರಪಂಚದ ಎಂಜಿನಿಯರಿಂಗ್ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳಿಗೆ ಸವಾಲು ನೀಡುವ ಮೂಲಕ, ಟೆಕ್‌ಜಿಯಂ® ಮುಂದಿನ ಪೀಳಿಗೆಯ ಎಂಜಿನಿಯರಿಂಗ್ ಇಂಟೆಲಿಜೆನ್ಸ್ (ಇಐ)ನ ಪ್ರದರ್ಶನ ವೇದಿಕೆಯಾಗಿ ಹೊರಹೊಮ್ಮುತ್ತಿದೆ. ಇಲ್ಲಿ ಎಐ, ಸಾಫ್ಟ್‌ ವೇರ್, ಹಾರ್ಡ್‌ ವೇರ್ ಮತ್ತು ಡೊಮೇನ್ ಪರಿಣತಿಯು ಒಗ್ಗೂಡಿ ಬುದ್ಧಿವಂತ, ಅಭಿವೃದ್ಧಿಶೀಲ ಮತ್ತು ಉದ್ಯಮ ಸಂಬಂಧಿತ ಪರಿಹಾರಗಳನ್ನು ರೂಪಿಸಲಾಗುತ್ತಿದೆ.
ವಿಜೇತರ ವಿವರಗಳು:
ಪ್ರಥಮ ಬಹುಮಾನ (ವಿಜೇತರು): ಎಂ. ಎಸ್. ರಾಮಯ್ಯ ಇನ್‌ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಬೆಂಗಳೂರು, ಕರ್ನಾಟಕ) ತಂಡ. ಇವರು ಅಭಿವೃದ್ಧಿಪಡಿಸಿರುವ ‘ನೆಕ್ಸ್ಟ್‌ ಜೆನ್ ಸೆಲ್ಫ್- ಚಾರ್ಜಿಂಗ್ ಹೈಬ್ರಿಡ್ ಸ್ಕೂಟರ್ ಯೋಜನೆಗೆ ಈ ಗೌರವ ಒಲಿದಿದೆ.
ದ್ವಿತೀಯ ಬಹುಮಾನ: ಆರ್‌ಎನ್ಎಸ್ ಇನ್‌ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬೆಂಗಳೂರು, ಕರ್ನಾಟಕ) ಕಾಲೇಜಿನ ವಿದ್ಯಾರ್ಥಿಗಳು. ಇವರ ಟೆಟ್ರೋಬೋಟ್ – ಮಾಡ್ಯುಲರ್ ರೋಬೋಟಿಕ್ ಆರ್ಮ್ ಯೋಜನೆಗೆ ಈ ಪ್ರಶಸ್ತಿ ಲಭಿಸಿದೆ.
ತೃತೀಯ ಬಹುಮಾನ: ಪಿಎಸ್ಎನ್ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ದಿಂಡಿಗಲ್, ತಮಿಳುನಾಡು) ವಿದ್ಯಾರ್ಥಿಗಳು. ಇವರ ಏರಿಸ್ – ಸ್ಟೆಬಿಲಿಟಿ ಸ್ಟಾರ್ಟ್ಸ್ ವಿತ್ ಕಂಫರ್ಟ್ ಯೋಜನೆಗೆ ಈ ಬಹುಮಾನ ಸಂದಿದೆ.
ಪೀಪಲ್ಸ್ ಚಾಯ್ಸ್ ಅವಾರ್ಡ್: ಇನ್‌ ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಶನ್ ಆಂಡ್ ರಿಸರ್ಚ್ – ಐಟಿಇಆರ್ (ಭುವನೇಶ್ವರ, ಒಡಿಶಾ) ತಂಡ. ಇವರು ರೂಪಿಸಿರುವ ಚಿರಂಜೀವಿ ಯೋಜನೆಗೆ ಸಾರ್ವಜನಿಕರಿಂದ ಅತ್ಯಧಿಕ ಮತಗಳು ಲಭಿಸಿವೆ.
ಭಾರತದ ಮೊದಲ ಸ್ವದೇಶಿ ರನ್‌ ವೇ ವಿಸಿಬಿಲಿಟಿ ಅಳೆಯುವ ಅಪೂರ್ವ ವ್ಯವಸ್ಥೆ ಆಗಿರುವ ದೃಷ್ಟಿ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿಎಸ್ಐಆರ್ ಎನ್ಎಎಲ್ ನ ಹಿರಿಯ ವಿಜ್ಞಾನಿ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಶುಭಾ ವಿ. ಅಯ್ಯಂಗಾರ್ ಅವರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಕುರಿತು ಮಾತನಾಡಿದ ಡಾ. ಶುಭಾ ವಿ ಅಯ್ಯಂಗಾರ್ ಅವರು, “ಟೆಕ್‌ಜಿಯಂ® ವೇದಿಕೆಯು ಎಂಜಿನಿಯರಿಂಗ್ ಆವಿಷ್ಕಾರದ ಭವಿಷ್ಯದ ಮೇಲೆ ಬೆಳಕು ಚೆಲ್ಲುವಂತಿದೆ. ವಿದ್ಯಾರ್ಥಿಗಳ ಪರಿಕಲ್ಪನೆಗಳನ್ನು ನೈಜ ಜಗತ್ತಿನ ಪರಿಣಾಮಕಾರಿ ಮತ್ತು ಕೈಗಾರಿಕೆಗೆ ಪೂರಕವಾದ ಪರಿಹಾರಗಳನ್ನಾಗಿ ಪರಿವರ್ತಿಸುವ ಈ ವೇದಿಕೆಯ ಸಾಮರ್ಥ್ಯ ಶ್ಲಾಘನೀಯ. ಮುಂದಿನ ತಲೆಮಾರಿನ ಎಂಜಿನಿಯರಿಂಗ್ ಆವಿಷ್ಕಾರಗಳನ್ನು ಪೋಷಿಸಲು ಇಂತಹ ಯೋಜನೆಗಳು ಅತ್ಯಗತ್ಯ,” ಎಂದು ತಿಳಿಸಿದರು.

ಎಲ್‌ಟಿಟಿಎಸ್ ಎಂಜಿನಿಯರ್‌ಗಳು ಮತ್ತು ತಜ್ಞರ ನೇತೃತ್ವದಲ್ಲಿ ನಡೆದ ಒಂಬತ್ತು ತಿಂಗಳ ಕಠಿಣ ಮಾರ್ಗದರ್ಶನ ಹಾಗೂ ಮೌಲ್ಯಮಾಪನ ಪ್ರಕ್ರಿಯೆಯ ನಂತರ, ಅಂತಿಮ ಹಂತಕ್ಕೆ ಆಯ್ಕೆಯಾದ 34 ತಂಡಗಳು ಉದ್ಯಮದ ಮುಖಂಡರು ಮತ್ತು ಶಿಕ್ಷಣ ತಜ್ಞರ ಎದುರು ತಮ್ಮ ಪ್ರೊಟೊಟೈಪ್ ಮಾದರಿಗಳನ್ನು ಪ್ರದರ್ಶಿಸಿದವು. ವಿಜೇತರಿಗೆ ಒಟ್ಟು 18 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಬಹುಮಾನಗಳನ್ನು ವಿತರಿಸಲಾಯಿತು.
ಈ ಕುರಿತು ಎಲ್‌&ಟಿ ಟೆಕ್ನಾಲಜಿ ಸರ್ವಿಸಸ್‌ ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಗುಪ್ತಾ ಮಾತನಾಡಿ, “ಭಾರತದ ಉದಯೋನ್ಮುಖ ಡೀಪ್- ಟೆಕ್ ಎಂಜಿನಿಯರಿಂಗ್ ಸಾಮರ್ಥ್ಯ ಮತ್ತು ನಮ್ಮ ಯುವ ಪ್ರತಿಭೆಗಳ ನಾವೀನ್ಯತೆಯ ಶಕ್ತಿ ಪ್ರದರ್ಶನಕ್ಕೆ ಟೆಕ್‌ಜಿಯಂ® ಒಂದು ಪ್ರಬಲ ವೇದಿಕೆಯಾಗಿ ಹೊರಹೊಮ್ಮಿದೆ. ಕಳೆದ ಒಂಬತ್ತು ಆವೃತ್ತಿಗಳಲ್ಲಿ, ಈ ವೇದಿಕೆಯು ಶೈಕ್ಷಣಿಕ ಕ್ಷೇತ್ರ ಮತ್ತು ಕೈಗಾರಿಕೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ರಾಷ್ಟ್ರಮಟ್ಟದ ಅಪೂರ್ವ ಆವಿಷ್ಕಾರ ವ್ಯವಸ್ಥೆಯಾಗಿ ಬೆಳೆದಿದೆ. ಈ ವರ್ಷ ಪ್ರದರ್ಶಿಸಲಾದ ತಾಂತ್ರಿಕ ಪರಿಹಾರಗಳ ವ್ಯಾಪ್ತಿ ಮತ್ತು ಗುಣಮಟ್ಟವು ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಭವಿಷ್ಯದ ಎಂಜಿನಿಯರಿಂಗ್ ಕ್ಷೇತ್ರವು ಎಂಜಿನಿಯರಿಂಗ್ ಇಂಟೆಲಿಜೆನ್ಸ್ ಮೂಲಕ ರೂಪುಗೊಳ್ಳಲಿದೆ. ಇಲ್ಲಿ ಎಐ, ವಿಷಯ ಪರಿಣತಿ ಮತ್ತು ನೈಜ ಜಗತ್ತಿನ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವು ಒಗ್ಗೂಡಿ ಮಹತ್ವದ ಬದಲಾವಣೆಗಳನ್ನು ತರಲಿವೆ. ಟೆಕ್‌ಜಿಯಂ® ಮೂಲಕ ಜಾಗತಿಕವಾಗಿ ಹೆಚ್ಚು ಸ್ಮಾರ್ಟ್, ಸುರಕ್ಷಿತ ಮತ್ತು ಸುಸ್ಥಿರ ಕೈಗಾರಿಕೆಗಳನ್ನು ನಿರ್ಮಿಸುವ ಭವಿಷ್ಯದ ಎಂಜಿನಿಯರ್‌ಗಳನ್ನು ಪೋಷಿಸಲು ನಾವು ಬದ್ಧರಾಗಿದ್ದೇವೆ,” ಎಂದು ತಿಳಿಸಿದರು.

Leave a Reply

Your email address will not be published. Required fields are marked *