ಜೂ.೨೭ರಂದು ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆದ್ಧೂರಿಯಾಗಿ ಆಚರಣೆ

ನಂದಿನಿ ಮೈಸೂರು

ಮೈಸೂರು: ನಗರದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಣೆಯನ್ನು ಜೂ.೨೭ರಂದು ಆದ್ಧೂರಿಯಾಗಿ ಆಚರಿಸಬೇಕೆಂದು ಒಕ್ಕಲಿಗ ಸಮುದಾಯದ ಮುಖಂಡರು ಒಕ್ಕೊರಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನಗರದ ಬೋಗಾದಿಯಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಶನಿವಾರ ನಡೆದ ಜನಪ್ರತಿನಿಧಿಗಳ ಮತ್ತು ಒಕ್ಕಲಿಗ ಸಂಘ-ಸಂಸ್ಥೆಗಳ ಹಾಗೂ ಮುಖಂಡ ಸಭೆಯಲ್ಲಿ ಸಮುದಾಯದ ಮುಖಂಡರು ಶಿಸ್ತುಬದ್ದವಾಗಿ, ಅರ್ಥಪೂರ್ಣವಾಗಿ, ಆದ್ದೂರಿಯಾಗಿ ಜಯಂತಿ ಆಚರಿಸಲು ಸಂಪೂರ್ಣ ಬೆಂಬಲ ಮತ್ತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಈ ಬಾರಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಅರ್ಥಪೂರ್ಣ ಮತ್ತು ಆದ್ಧೂರಿಯಾಗಿ ಆಚರಿಸಲು ಸಮುದಾಯದ ಮುಖಂಡರು ಸಂಪೂರ್ಣ ಬೆಂಬಲ ಸೂಚಿಸಬೇಕು. ಕಳೆದ ಬಾರಿ ಮೈಸೂರು ತಾಲ್ಲೂಕಿಗೆ ಮಾತ್ರ ಜಯಂತಿಯ ಪ್ರಚಾರದ ರಥಯಾತ್ರೆ ಸೀಮಿತಗೊಂಡಿತ್ತು. ಆದರೆ, ಈ ಭಾರಿ ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿಯೂ ಪ್ರಚಾರದ ರಥಯಾತ್ರೆಗೆ ನಡೆಸಬೇಕು. ಇದಕ್ಕಾಗಿ ರೂಪರೇಷೆಗಳನ್ನು ಸಿದ್ಧಪಡಿಸಿಕೊಳ್ಳಿ. ಶಾಂತಿ ಸೌಹಾರ್ದತೆಯಿಂದ ಪಕ್ಷಾತೀತವಾಗಿ ಆದ್ದೂರಿ ಜಯಂತಿ ಆಚರಿಸಲು ಮುಂದಾಗಬೇಕು ಎಂದು ಹೇಳಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ಸದ್ಯದಲ್ಲೇ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ಮೈಸೂರಿನಲ್ಲಿ ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕಾಗಿ ಕಲಾಮಂದಿರದ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರೂ ಆದ ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್, ಕಾರ್ಯದರ್ಶಿ ಚೇತನ್, ನಗರಪಾಲಿಕೆ ಸದಸ್ಯ ಪ್ರೇಮ ಶಂಕರೇ ಗೌಡ, ಪುಷ್ಪಲತಾ ಜಗನ್ನಾಥ್, ಪೈ.ಶ್ರೀನಿವಾಸ್, ನಂಜನಗೂಡು ತಾಲ್ಲೂಕು ಸಂಘದ ಅಧ್ಯಕ್ಷ ನರಸಿಂಹಸ್ವಾಮಿ, ಕೆ.ಆರ್.ನಗರ ತಾಲ್ಲೂಕು ಸಂಘದ ಅಧ್ಯಕ್ಷ ಅಣ್ಣೇಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ೨೫೦ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *