*ನಾಲ್ಕು ತಲೆಮಾರಿನ ಕಾಂಗ್ರೆಸ್ ಆಡಳಿತಕ್ಕಿಂತ, ಮೋದಿಯವರ ಒಂಬತ್ತು ವರ್ಷಗಳ ಆಡಳಿತ ಬಡವರಿಗೆ ಹೆಚ್ಚಿನ ಒಳಿತನ್ನು ಮಾಡಿದೆ: ಅಮಿತ್ ಶಾ*
ಕೇಂದ್ರದ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಬಡತನವನ್ನು ನಿವಾರಿಸುವಲ್ಲಿ ವಿಫಲವಾಗಿವೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದ ಗೃಹ ಸಚಿವ ಅಮಿತ್ ಶಾ, ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಡವರಿಗೆ ಹಿಂದಿನ ನಾಲ್ಕು ತಲೆಮಾರಿನ ಕಾಂಗ್ರೆಸ್ ಆಡಳಿತಕ್ಕಿಂತ ಹೆಚ್ಚಿನ ಒಳಿತನ್ನು ಮಾಡಿದ್ದಾರೆ ಎಂದು ಶನಿವಾರ ಹೇಳಿದ್ದಾರೆ.
ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಬಿಜೆಪಿಯ ಪ್ರಚಾರ ಕಾರ್ಯಕ್ರಮದ ಭಾಗವಾಗಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಶಾ, ಗಾಂಧಿ ಕುಟುಂಬದ ಆಳ್ವಿಕೆಯಲ್ಲಿ ಬಡವರಿಗೆ ವಸತಿ ಘಟಕಗಳು, ಶೌಚಾಲಯಗಳು, ಅಡುಗೆ ಅನಿಲ ಮತ್ತು ಇತರ ಮೂಲಭೂತ ಅಗತ್ಯಗಳು ಬಹುಕಾಲದವರೆಗೆ ಕನಸಿನ ಮಾತಾಗಿತ್ತು. ಕಾಂಗ್ರೆಸ್ ಮಾತ್ರ ದೇಶದ ಬಡತನವನ್ನು ಮುದುವರೆಸುತ್ತಾ ಬಂತು.
“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ 9 ವರ್ಷಗಳು ಭಾರತದ ಹೆಮ್ಮೆಯ ವರ್ಷಗಳು, ಭಾರತದ ಅಭಿವೃದ್ಧಿ ಮತ್ತು ಭಾರತವು ಬಡವರ ಕಲ್ಯಾಣವನ್ನು ಖಾತ್ರಿಪಡಿಸಿದ ವರ್ಷಗಳು. ಸೋನಿಯಾ-ಮನಮೋಹನ್ ಆಳ್ವಿಕೆ ಕೊನೆಗೊಂಡ ನಂತರ, ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಭಾರತವು ಪ್ರಗತಿ ಸಾಧಿಸಿತ್ತಾ ಅಭಿವೃದ್ಧಿ ಪಥದತ್ತ ಮುನ್ನೆಡೆಯಲು ಆರಂಭಿಸಿತು ಎಂದು ಶಾ ಹೇಳಿದರು.
10 ವರ್ಷಗಳ ಸೋನಿಯಾ-ಮನಮೋಹನ್ ಆಡಳಿತ ಅತ್ಯಂತ ಭ್ರಷ್ಟವಾಗಿತ್ತು. ಅವರ ಕಡಿವಾಣವಿಲ್ಲದ ಭ್ರಷ್ಟಾಚಾರ ಸುಮಾರು 12 ಲಕ್ಷ ಕೋಟಿ ರೂ. ದಾಟಿತ್ತು. ಮತ್ತೊಂದೆಡೆ, ಮೋದಿ ನೇತೃತ್ವದ ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಸ್ತುತ ಆಡಳಿತದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡುವ ಯಾವುದೇ ಸಂದರ್ಭ ಪ್ರತಿಪಕ್ಷಗಳಿಗೆ ದೊರಕಿಲ್ಲ.
ಮೋದಿಯವರ ಆಡಳಿತದಲ್ಲಿ, ಆರ್ಥಿಕತೆ, ಭದ್ರತೆ, ರಕ್ಷಣೆ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಬಹುಮೂಲಾಗ್ರವಾಗಿ ಸುಧಾರಣೆ ಕಂಡುಬಂದಿದೆ. ಮೋದಿಯವರು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ಮಾತ್ರವಲ್ಲದೇ, ಅವರು ವಿಶ್ವದಾದ್ಯಂತ ಎಲ್ಲರೂ ಗೌರವಿಸುವ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ.
ಮಾಜಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಇತ್ತೀಚಿನ ಅಮೇರಿಕಾ ಭೇಟಿಯ ಸಂದರ್ಭದಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಮಾತನಾಡುತ್ತಾ, ದೇಶದ ಮರ್ಯಾದೆಯನ್ನು ಹೊರಗಡೆ ಹಾಳು ಮಾಡಿದ್ದಕ್ಕಾಗಿ ರಾಹುಲ್ ವಿರುದ್ಧ ಶಾ ತೀಕ್ಷ್ಣ ವಾಗ್ದಾಳಿ ನಡೆಸಿ, ಅವರ ಈ ನಿಂದನೀಯ ಕೃತ್ಯವನ್ನು ದೇಶವಾಸಿಗಳು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. ನಾಂದೇಡ್ ಮತ್ತು ಮಹಾರಾಷ್ಟ್ರದ ಜನರು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪರವಾಗಿ 45 ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡುವ ಮೂಲಕ ಸೂಕ್ತವಾದ ಉತ್ತರವನ್ನು ನೀಡಲಿದ್ದಾರೆ ಎಂದರು.
ಬಿಜೆಪಿಯ ಪ್ರಮುಖ ಚುನಾವಣಾ ತಂತ್ರಗಾರರಾಗಿರುವ ಅಮಿತ್ ಶಾ ಉದ್ಧವ್ ಠಾಕ್ರೆ ಕಡೆ ತಮ್ಮ ಮಾತಿನ ದಾಳಿ ತಿರುಗಿಸುತ್ತಾ “2019 ರಲ್ಲಿ ಸಭೆಯಲ್ಲಿ ಉದ್ಧವ್ ಠಾಕ್ರೆ, ಎನ್‌ಡಿಎ ಅಧಿಕಾರಕ್ಕೆ ಬಂದರೆ ದೇವೇಂದ್ರ ಫಡ್ನವಿಸ್ ಸಿಎಂ ಆಗುತ್ತಾರೆ ಎಂದಾಗ ಒಪ್ಪಿಕೊಂಡಿದ್ದರು. ಆದರೆ ಅಧಿಕಾರ ಮತ್ತು ಮುಖ್ಯಮಂತ್ರಿ ಹುದ್ದೆಗಾಗಿ ಉದ್ಧವ್ ಠಾಕ್ರೆ ಕಾಂಗ್ರೆಸ್-ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡರು” ಎಂದು ಹೇಳಿದರು.
ಉದ್ಧವ್ ಠಾಕ್ರೆ ವಿರುದ್ಧ ಪ್ರಶ್ನೆಗಳ ಸುರಿಮಳೆಗೈಯುತ್ತಾ ಶಾ “ಉದ್ಧವ್ ಠಾಕ್ರೆ ಅವರು ಯೂನಿಫಾರ್ಮ್ ಸಿವಿಲ್ ಕೋಡ್ ಬಗ್ಗೆ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕೆಂದು ನಾವು ಬಯಸುತ್ತೇವೆ. ಅವರು ಕಾಂಗ್ರೆಸ್ಸಿನ ವೀರ್ ಸಾವರ್ಕರ್ ವಿರೋಧಿ ನಿಲುವಿಗೆ ಚಂದಾದಾರರಾಗುತ್ತಾರೆಯೇ? ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೂಡಿದ ನಂತರ ಔರಂಗಾಬಾದ್, ಒಸ್ಮಾನಾಬಾದ್ ಮತ್ತು ಅಹಮದ್‌ನಗರಗಳ ಮರುನಾಮಕರಣವನ್ನು ಬೆಂಬಲಿಸುತ್ತಾರಾ? ಅವರು ಸಂವಿಧಾನಕ್ಕೆ ವಿರುದ್ಧವಾದ ಮುಸ್ಲಿಂ ಮೀಸಲಾತಿಯನ್ನು ಬೆಂಬಲಿಸುತ್ತಾರೆಯೇ?” ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಬಿಸಿಗಾಳಿಯ ಉಷ್ಣ ವಾತಾವರಣವನ್ನು ಲೆಕ್ಕಿಸದೇ ರ್ಯಾಲಿಯಲ್ಲಿ ಭಾಗವಹಿಸಿದ್ದ ಸಾವಿರಾರು ಬೆಂಬಲಿಗರಿಗೆ, ನಿಮಗೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೋ ಅಥವಾ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೋ ಎಂದು ಶಾ ಕೇಳಿದಾಗ, ನೆರೆದಿದ್ದ ಜನಸಮೂಹ “ಮೋದಿ, ಮೋದಿ” ಘೋಷಣೆಯೊಂದಿಗೆ ಮತ್ತೊಮ್ಮೆ ಘರ್ಜಿಸಿತು.
ರ್ಯಾಲಿಯಲ್ಲಿ ಮಾತನಾಡುವ ಮೊದಲು, ಅಮಿತ್ ಶಾ ತಾಖತ್ ಸಚ್‌ಖಂಡ್ ಶ್ರೀ ಹಜೂರ್ ಅಬ್‌ಚಲ್‌ನಗರ ಸಾಹಿಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇದಕ್ಕೂ ಮುನ್ನ ಗುಜರಾತ್‌ನ ಪಟಾನ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ ಅಲ್ಲಿಯೂ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡು, ”ಬೇಸಿಗೆಯ ತಾಪದಿಂದ ಪಾರಾಗಲು ರಾಹುಲ್ ಬಾಬಾ ರಜೆಯ ಮೇಲೆ ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿ ದೇಶವನ್ನುಸದಾ ಟೀಕಿಸುತ್ತಲೇ ಇರುತ್ತಾರೆ. ರಾಹುಲ್ ಗಾಂಧಿ ಅವರು ತಮ್ಮ ಪೂರ್ವಜರನ್ನು ನೋಡಿ ಕಲಿಯಲು ನಾನು ಸಲಹೆ ನೀಡಬಯಸುತ್ತೇನೆ ಎಂದರು.
“ಯಾವುದೇ ದೇಶಭಕ್ತರು ಭಾರತದ ರಾಜಕೀಯದ ಬಗ್ಗೆ ಭಾರತದೊಳಗೆ ಚರ್ಚಿಸಬೇಕು. ವಿದೇಶಕ್ಕೆ ಹೋಗಿ ದೇಶದ ರಾಜಕೀಯದ ಬಗ್ಗೆ ಚರ್ಚಿಸಿ ದೇಶವನ್ನು ಟೀಕಿಸುವುದು ಯಾವುದೇ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲ. ಇದನ್ನು ದೇಶದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ರಾಹುಲ್ ಬಾಬಾ ನೆನಪಿಟ್ಟುಕೊಳ್ಳಬೇಕು” ಎಂದು ರಾಹುಲ್ ಗಾಂಧಿಯವರ ಬಾಲಿಶತನವನ್ನು ಟೀಕಿಸಿದರು.