ನಾಡಪ್ರಭು ಕೆಂಪೇಗೌಡರನ್ನು ಅನಾಥರನ್ನಾಗಿಸದಿರೋಣ….. ಪ್ರಸ್ತುತಿ- ಕಿರಣ್ ಜಯರಾಮೇಗೌಡ

ನಾಡಪ್ರಭು ಕೆಂಪೇಗೌಡರನ್ನು ಅನಾಥರನ್ನಾಗಿಸದಿರೋಣ…..
ಪ್ರಸ್ತುತಿ- ಕಿರಣ್ ಜಯರಾಮೇಗೌಡ

108 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ 23 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಥೀಮ್ ಪಾರ್ಕ್ ನ ವೆಚ್ಚ ಬರೋಬರಿ 84 ಕೋಟಿಗಳು. ಇದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿದೆ. ಇದನ್ನು ನವಂಬರ್ 11, 2022 ರಂದು ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಪ್ರತಿಮೆಗೆ “ಪ್ರಗತಿಯ ಪ್ರತಿಮೆ” “Statue of Prosperity” ಎಂದು ಕರೆಯಲಾಗಿದೆ. ಈ 108 ಅಡಿ ಎತ್ತರದ ಪ್ರತಿಮೆಯು ಬರೋಬ್ಬರಿ 4000 ಕೆಜಿ ತೂಕದ ಖಡ್ಗವನ್ನು ಒಳಗೊಂಡಿದೆ. ದೆಹಲಿಯಲ್ಲಿ ನಿರ್ಮಾಣಗೊಂಡ 4000 ಕೆಜಿ ತೂಕದ ಖಡ್ಗವು ಮೇ 04, 2022 ರಂದು ಬಂದು ಸೇರಿದೆ. ಈ ಖಡ್ಗವು 35 ಅಡಿ ಉದ್ದವಿದ್ದು ಪ್ರಖರವಾಗಿದೆ. ಇದನ್ನು ಶಕ್ತಿ ಪೂಜೆ ಮಾಡಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಘನ ಸರ್ಕಾರದ ಸಚಿವರೂ ಆದ ಡಾII ಅಶ್ವತ್ ನಾರಾಯಣ್ ಅವರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ಥೀಮ್ ಪಾರ್ಕ್ ನಲ್ಲಿ ಆಂಪಿಥಿಯೇಟರ್, ಅಂಡಾಕಾರದ ರಂಗಮಂದಿರ, ಪಾತ್ ವೇ, ಏವಿ ಎಕ್ಸಿಬಿಷನ್ ಸಿಸ್ಟಮ್, ತ್ರೀಡಿ ಪ್ರೊಜೆಕ್ಷನ್, ಕಾರಂಜಿಗಳು, ಹೂವಿನ ತೋಟಗಳು, ವಿಐಪಿ ರೂಮುಗಳು, ವಿಶ್ರಾಂತಿ ಗೃಹಗಳು, ಕಿಯೋಸ್ಕ್, ಮಂಟಪಗಳು ಮತ್ತು ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಹೀಗೆ ಹಲವಾರು ಸೌಲಭ್ಯಗಳು ಇರಲಿವೆ. ಇವೆಲ್ಲಾ ಒಂದು ಕಡೆ ಆದರೆ ಐವತ್ತು ಕೋಟಿ ವೆಚ್ಚದಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕೆಂಪೇಗೌಡರ ಅಧ್ಯಯನ ಕೇಂದ್ರ ಸ್ಥಾಪನೆಯಾಗಲಿದೆ.


ಕೆಂಪೇಗೌಡರ 511ನೇ ಜಯಂತಿಯ ಅಂಗವಾಗಿ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ ಬಿ .ಎಸ್. ಯಡಿಯೂರಪ್ಪನವರು ಸೆಪ್ಟೆಂಬರ್ 13, 2019ರಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ ಕೆಂಪೇಗೌಡರ ಪ್ರತಿಮೆಗೆ 100 ಕೋಟಿಗಳನ್ನು ಘೋಷಣೆ ಮಾಡಿ ಬಿಡುಗಡೆ ಮಾಡುತ್ತಾರೆ ಮತ್ತು ಜೂನ್ 2020 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪರವರ ನೇತೃತ್ವದಲ್ಲಿ ಭೂಮಿ ಪೂಜೆ ಮಾಡಿ ಅಡಿಪಾಯ ಹಾಕಲಾಯಿತು. ಇಷ್ಟೆಲ್ಲಕ್ಕೂ ಒತ್ತಾಸೆಯಾಗಿ ನಿಂತು ಹಗಲಿರುಳು ಶ್ರಮಿಸುತ್ತಿರುವವರು ಡಾII ಅಶ್ವತ್ ನಾರಾಯಣರವರು. ಅಂದು ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಪೀಠಾಧ್ಯಕ್ಷರು ಹಾಗೂ ಸಮಾಜದ ಮಾರ್ಗದರ್ಶಕರಾದ ಡಾII ನಿರ್ಮಲಾನಂದನಾಥ ಸ್ವಾಮಿಗಳು, ಮಾಜಿ ಪ್ರಧಾನ ಮಂತ್ರಿಗಳು, ಸಮಾಜದ ನೆಚ್ಚಿನ ಕಣ್ಮಣಿ ದೇವೇಗೌಡರು, ಸಮಾಜದ ಮುಖಂಡರಾದ ಡಿ.ಕೆ. ಶಿವಕುಮಾರ್ ರವರು, ಹೀಗೆ ಸಮಾಜದ ಹಲವಾರು ಸಚಿವರುಗಳು, ಮುಖಂಡರುಗಳು ಹಾಜರಿದ್ದರು.
ನಾವಿಂದು ಕರೆಯುವ ಹೆಸರಿಗೆ ತಕ್ಕ ಹಾಗೆ ನಾಡಪ್ರಭು ಕೆಂಪೇಗೌಡರು 1537-38 ರಲ್ಲಿ ವಿಜಯನಗರದ ಅರಸರಾದ ಅಚ್ಯುತ ದೇವರಾಯರ ಸಹಾಯ ಪಡೆದು ತನ್ನ ಸುಪರ್ದಿಯ ಸುತ್ತ ಕೋಟೆ ನಿರ್ಮಿಸಿ ತಾನು ಕಟ್ಟಿದ ನಾಡಿನ ಜನರಿಗೆ ಭದ್ರತೆ ಒದಗಿಸಿದ್ದರು. ಇತಿಹಾಸಕಾರರು ನಾಡಪ್ರಭು ಕೆಂಪೇಗೌಡರನ್ನು “ಮರುಕವುಳ್ಳವ, ದಯಾಳು, ಧರ್ಮ ಬುದ್ಧಿಯುಳ್ಳವ, ಮಾನವೀಯತೆಯ ಸಾಕಾರ ಮೂರ್ತಿ” ಎಂದೆಲ್ಲಾ ಕರೆದಿದ್ದಾರೆ.
ಈ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪದ್ಮಭೂಷಣ ಪ್ರಶಸ್ತಿಯ ಪುರಸ್ಕೃತರಾದ ರಾಮ್ ವಿ. ಸುತಾರ್ ರವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿದೆ. ಈ ಹಿಂದೆ ರಾಮ್ ವಿ. ಸುತಾರ್ ರವರು ಗುಜರಾತಿನಲ್ಲಿ ನಿರ್ಮಾಣಗೊಂಡಿರುವ “Statue of Unity” “ಏಕತಾ ಪ್ರತಿಮೆ” ಮತ್ತು ಬೆಂಗಳೂರಿನ ವಿಧಾನಸೌಧದ ಮುಂದಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ಶಿಲ್ಪಿಗಳು ಇವರೇ ಎಂಬುದು ಮತ್ತೊಂದು ವಿಶೇಷ. ಬೆಂಗಳೂರಿಗೆ ಮಾತ್ರವಲ್ಲ, ರಾಜ್ಯದ ಕೇಂದ್ರ ಬಿಂದುವಾಗಿ ಎದ್ದು ನಿಲ್ಲುತ್ತಿರುವ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯು ವಿಸ್ಮಯಗೊಳಿಸುವ ವಿನ್ಯಾಸಕ್ಕೆ ದೇಶ ವಿದೇಶಗಳಿಂದ ವಿಮಾನ ನಿಲ್ದಾಣದ ಮೂಲಕ ಬಂದು ಹೋಗುವ ಪ್ರವಾಸಿಗರು ಮತ್ತು ನಾಡ ಜನರನ್ನು ಆಕರ್ಷಿಸುವುದರಲ್ಲಿ ಎರಡು ಮಾತೇ ಇಲ್ಲ.
ಕೆಂಪೇಗೌಡ ಬಸ್ಸು ನಿಲ್ದಾಣ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೆಂಪೇಗೌಡ ರಸ್ತೆ, ಕೆಂಪೇಗೌಡ ನಗರ ಹೀಗೆ ಹಲವಾರು ಸ್ಥಳಗಳು ಶ್ರೀಯುತರ ಹೆಸರಿನಿಂದ ಕರೆಯಲ್ಪಟ್ಟಿವೆ. ಒಕ್ಕಲಿಗರಿಗೆ ಆದರ್ಶ ಪುರುಷ ಈ ನಮ್ಮ ನಾಡಪ್ರಭು ಕೆಂಪೇಗೌಡರು. ಇವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲು ಕೆಂಪೇಗೌಡರ ಸ್ಮಾರಕಗಳನ್ನು ನಿರ್ಮಿಸಲು ಅವತಿ, ಮಾಗಡಿಕೋಟೆ, ಯಲಹಂಕ, ಸಾವನೂರು ದುರ್ಗ, ಹುತ್ತರಿದುರ್ಗ ಮತ್ತು ಶಿವಗಂಗಾದಲ್ಲಿ ನಿರ್ಮಿಸಲು ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಈ ಸ್ಥಳಗಳಲ್ಲಿ ಕೆಂಪೇಗೌಡರು ತಮ್ಮ ಕೊನೆಯ ದಿನಗಳನ್ನು ಕಳೆದರು ಎಂದು ನಂಬಲಾಗಿದೆ. 2015 ರವರೆಗೆ ಸಾಕಷ್ಟು ಪ್ರಯತ್ನ ಪಟ್ಟವರೂ ಅವರ ಸಮಾಧಿ ಸ್ಥಳ ನಮಗೆಲ್ಲ ತಿಳಿದಿರಲಿಲ್ಲ. ಪ್ರಶಾಂತ್ ಮರೂರ್ ಎಂಬುವವರು ಬೆಂಗಳೂರಿನಿಂದ ಸುಮಾರು 50 ಕಿಲೋಮೀಟರ್ ದೂರದ ಕೆಂಪಾಪುರ ಗ್ರಾಮ ಎಂಬಲ್ಲಿ ಕೆಂಪೇಗೌಡರ ಸಮಾಧಿಯನ್ನು ಗುರುತಿಸಿದರು, ನಂತರ ಇತಿಹಾಸಕಾರರು ಇದನ್ನು ಖಾತ್ರಿಪಡಿಸಿದರು. ಕೆಂಪೇಗೌಡರು ಕುಣಿಗಲ್ ಕದನ ಮುಗಿಸಿ ಗಾಯಗೊಂಡು ಹಿಂತಿರುಗುವ ವೇಳೆ ಕೆಂಪಾಪುರದಲ್ಲಿ ವೀರಮರಣ ಹೊಂದಿದರು ಎಂದು ಹೇಳಲಾಗಿದೆ.


ಕೆಂಪೇಗೌಡರು ದೂರ ದೃಷ್ಟಿಯಿಂದ ಬೆಂಗಳೂರನ್ನು ನಿರ್ಮಿಸಿ ಅದರಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹಣ ಕೇಂದ್ರ, ಆಹಾರ ಸಂಗ್ರಹಣ ಕೇಂದ್ರ, ದೇವಸ್ಥಾನಗಳು, ಕೆರೆಗಳು, ಜಲಾಶಯಗಳು, ಮರಗಳು, ರಸ್ತೆಗಳು, ಮತ್ತು ಮಾರುಕಟ್ಟೆಗಳನ್ನು ಒದಗಿಸಿದ್ದರು. ಕೆಂಪೇಗೌಡರು ಆಗಲೇ ಅದೆಷ್ಟು ದೂರ ದೃಷ್ಟಿಯಿಂದ ಜಲಾಶಯಗಳನ್ನು ನಿರ್ಮಿಸಿ ಅವುಗಳಿಗೆ ಗ್ರಿಡ್ ವ್ಯವಸ್ಥೆಯನ್ನು ಅಳವಡಿಸಿದ್ದರು (ಗ್ರಿಡ್ ವ್ಯವಸ್ಥೆ ಎಂದರೆ ಮಳೆಗಾಲದಲ್ಲಿ ಜಲಾಶಯಗಳು ತುಂಬಿ ಹೆಚ್ಚಾಗುವ ನೀರು ಪಕ್ಕದ ಜಲಾಶಯಗಳಿಗೆ ಹರಿದು ಹೋಗುವ ವ್ಯವಸ್ಥೆ). ಈ ಮೇಲಿನ ಎಲ್ಲಾ ವ್ಯವಸ್ಥೆಗಳು ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ನಿರ್ಮಾಣವಾಗಿವೆ ಎಂಬುದು ವಿಶೇಷ. ಕೋಟೆ ನಿರ್ಮಾಣ ಮಾಡಿದ ಕೆಂಪೇಗೌಡರು ಕೋಟೆಯ ಒಂದು ದಿಕ್ಕಿಗೆ ಯಲಹಂಕ ಬಾಗಿಲು ಎಂದು, ಮತ್ತೊಂದು ದಿಕ್ಕಿಗೆ ಸೊಂಡೆಕೊಪ್ಪ ಬಾಗಿಲು ಎಂದು, ಮತ್ತೊಂದನ್ನು ಬೆಂಗಳೂರು ಬಾಗಿಲು ಎಂದು ಮತ್ತು ಮಗದೊಂದಕ್ಕೆ ಮೈಸೂರು ಬಾಗಿಲು ಎಂದು ಕರೆದರು. ಬೆಂಗಳೂರು ಕೋಟೆಯ ಬಾಗಿಲನ್ನು ಕಟ್ಟುವ ಕೆಂಪೇಗೌಡರ ಕಾರ್ಯ ಸುಸೂತ್ರವಾಗಿ ನೆರವೇರಲಿ ಎಂದು ಅವರ ಸೊಸೆ ಲಕ್ಷ್ಮಿ ದೇವಿ ಆತ್ಮಾರ್ಪಣೆ ಮಾಡಿಕೊಂಡರು ಎಂದು ಹೇಳಲಾಗಿದೆ. ಕೆಂಪೇಗೌಡರು ಎಲ್ಲಾ ತಳವರ್ಗದ ಸಮುದಾಯಗಳ ಅಭಿವೃದ್ಧಿಗಾಗಿ ಅವರವರ ಕುಲ ಕಸುಬಿಗೆ ಅನುಗುಣವಾಗಿ ಅಂಚೆಪೇಟೆ, ಸುಲ್ತಾನ್ ಪೇಟೆ, ತರಗುಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಬಳೆಪೇಟೆ, ನಗರಪೇಟೆ, ಬಳ್ಳಾಪುರಪೇಟೆ, ಗಾಣಿಗರಪೇಟೆ, ತಿಗಳರಪೇಟೆ, ಕಬ್ಬನ್ ಪೇಟೆ ಎಂಬೆಲ್ಲಾ ಪೇಟೆಗಳನ್ನು ನಿರ್ಮಿಸುವುದರ ಜೊತೆಗೆ ಬೆಂಗಳೂರನ್ನು ಒಂದು ವಾಣಿಜ್ಯ ಕೇಂದ್ರವಾಗಿಸಬೇಕೆಂಬ ಹಂಬಲವಿತ್ತು ಗೌಡರಿಗೆ. ಬೆಂಗಳೂರು ನಿರ್ಮಾಣಕ್ಕಾಗಿ 12 ಹೋಬಳಿಗಳ 30,000 ಪಗಡವನ್ನು ಕೆಂಪೇಗೌಡರಿಗೆ ಬಿಟ್ಟುಕೊಟ್ಟು ಅಚ್ಯುತ ದೇವರಾಯರು ನೆರವಾಗುತ್ತಾರೆ. ವಿಜಯನಗರ ಅರಸರ ನಂಬಿಕಸ್ತ ಮತ್ತು ವಿಧೇಯರಾಗಿದ್ದ ಕಾರಣ ಕೆಂಪೇಗೌಡರಿಗೆ “ಅಮರ ನಾಯಕ” ಎಂಬ ಬಿರುದನ್ನು ನೀಡಿ ವಿಜಯನಗರ ಅರಸರು ಗೌರವಿಸಿದ್ದರು.
ಆರು ಶತಮಾನಗಳಿಗೂ ಅಧಿಕಕಾಲ ಆಳ್ವಿಕೆ ನಡೆಸಿದ್ದ ಗಂಗಾ ಸಾಮ್ರಾಜ್ಯದ ಕುಡಿಯೇ ನಾಡಪ್ರಭು ಕೆಂಪೇಗೌಡರು ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ 31/ 10/2022 ರಂದು ಟಿ. ನರಸಿಪುರದ ಮುಡುಕುತೊರೆ ಪ್ರದೇಶದಲ್ಲಿ ಗಂಗಾ ಸಾಮ್ರಾಜ್ಯದ ಅರಸರಾದ ಶ್ರೀಪುರುಷ ರವರ ಸಮಾಧಿಯ ಸ್ಥಳದಿಂದ ಪವಿತ್ರ ಮೃತ್ತಿಕೆಯನ್ನು ಸ್ವತಃ ಡಾII ಅಶ್ವತ್ ನಾರಾಯಣ್ ರವರೇ ಸಂಗ್ರಹಿಸಿದ್ದಾರೆ. ಪವಿತ್ರ ಮೃತ್ತಿಕೆ ಎಂದರೆ ಪವಿತ್ರವಾದ ಮಣ್ಣು. ಇದನ್ನು ಈಗ ಕೆಂಪೇಗೌಡರ ರಥವು ಸಾಗುವ ಪ್ರತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಪುರಾತನ ದೇವಸ್ಥಾನಗಳ ಆವರಣದ ಮಣ್ಣು, ಹಿರಿಯರು ಕರೆಯುವ ಪುಣ್ಯಭೂಮಿಗಳು, ಪುರಾತನ ಕೆರೆ ಕಟ್ಟೆಗಳ ಮಣ್ಣನ್ನು ಧನ್ಯತೆಯಿಂದ, ಗೌರವದಿಂದ, ಭಕ್ತಿ ಭಾವದಿಂದ ಸಂಗ್ರಹಿಸಿ ಅದನ್ನು ಕೆಂಪೇಗೌಡರ ಪ್ರತಿಮೆಯ ಸುತ್ತ ಇರುವ ಥೀಮ್ ಪಾರ್ಕ್ ನಲ್ಲಿ ಬಳಸಿಕೊಳ್ಳಲಾಗುವುದು. ಈ ಕಾರ್ಯದಿಂದ “ನಮ್ಮೂರಿನ ಮಣ್ಣು ಕೆಂಪೇಗೌಡರ ಪ್ರತಿಮೆಯ ಥೀಮ್ ಪಾರ್ಕ್ ನಲ್ಲಿ ಸೇರಿಕೊಂಡಿದೆ” ಎಂಬ ಒಂದು ಅವಿನಾಭಾವ ಸಂಬಂಧ, ಒಂದು ಧನ್ಯತಾ ಭಾವ ನಮ್ಮಲ್ಲಿ ಉಂಟಾಗುತ್ತದೆ.
ವಿಶ್ವ ಮಾನ್ಯತೆಯನ್ನು ಪಡೆದುಕೊಂಡ ಬೆಂಗಳೂರು ಇಂದು ಕೋಟ್ಯಂತರ ಜನರಿಗೆ ಜೀವಸೆಲೆಯಾಗಿದೆ. ಐಟಿ – ಬಿಟಿ ಹಬ್ ಆಗಿ, ರಾಜ್ಯದ ರಾಜಧಾನಿಯಾಗಿ, ರಾಜ್ಯದ ಶಕ್ತಿ ಕೇಂದ್ರವಾಗಿ, ರಾಜ್ಯದ ಆರ್ಥಿಕತೆಯ ಪ್ರಮುಖ ಮೂಲವಾಗಿ ಕರ್ನಾಟಕಕ್ಕೆ ಕಳಸದಂತಿದೆ. ಇವು ನಾವೆಲ್ಲರೂ ಹೆಮ್ಮೆಪಡುವಂತಹ ವಿಚಾರಗಳು.
ಜೂನ್ 27, 2020 ರಂದು ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನ ಮಂತ್ರಿಗಳು, ಒಕ್ಕಲಿಗ ಸಮುದಾಯದ ನೆಚ್ಚಿನ ದೊಡ್ಡಗೌಡರು ಅಂದು ವೇದಿಕೆಯಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣವನ್ನು ಅನುಷ್ಠಾನಕ್ಕೆ ತರಲು ಬೆಂಗಳೂರು ನಗರಕ್ಕೆ ಕೆಂಪೇಗೌಡರ ಕೊಡುಗೆ ಏನಿದೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಯಾವುದೇ ಪಕ್ಷ ಭೇದವಿಲ್ಲದೆ ಎಲ್ಲರನ್ನೂ ಕರೆದು ಐಕ್ಯತೆಯಿಂದ ಎಲ್ಲರೂ ಒಟ್ಟಾಗಿ ಈ ಕಾರ್ಯಕ್ರಮ ಮಾಡಬೇಕು ಎಂದು ಹೇಳುತ್ತಾ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪರವರ ಮುಖಂಡತ್ವದಲ್ಲಿ ಆದ್ಯತೆ ಮೇರೆಗೆ ಈ ಕಾರ್ಯ ಮಾಡುತ್ತಿದ್ದಾರೆ ಶುಭವಾಗಲಿ ಎಂದು ಹರಸಿದ್ದರು. ಡಾII ಅಶ್ವಥ್ ನಾರಾಯಣ್ ಅವರು ಅತ್ಯಂತ ಆಸ್ಥೆಯಿಂದ, ಬದ್ಧತೆಯಿಂದ, ದೃಢ ಸಂಕಲ್ಪದೊಂದಿಗೆ ಈ ಒಂದು ಮಹತ್ಕಾರ್ಯವನ್ನು ತಾರ್ಕಿಕ ಗುರಿ ಮುಟ್ಟಿಸಲು ಅವಿರತ ಶ್ರಮಿಸುತ್ತಿದ್ದಾರೆ.
ಈ ಮಧ್ಯೆ ಅಲ್ಲಲ್ಲಿ ಮೃತ್ತಿಕೆ ಸಂಗ್ರಹಿಸಲು ತೆರಳಿರುವ ರಥಗಳಲ್ಲಿ ಪೂಜ್ಯ ಸ್ವಾಮೀಜಿಗಳ ಹಾಗೂ ದೇವೇಗೌಡರ ಭಾವಚಿತ್ರಗಳಿಲ್ಲ ಎಂದು ಕೆಲವರು ಅಪಸ್ವರ ತೆಗೆದು ಅಡ್ಡಿ ಪಡಿಸಿರುವುದುಂಟು. ಬಿಜೆಪಿ ನೇತೃತ್ವದ ಸರ್ಕಾರ ಮಾಡುತ್ತಿರುವ ಕೆಂಪೇಗೌಡರ ಪ್ರತಿಮೆಯ ಲೋಕಾರ್ಪಣಾ ಕಾರ್ಯಕ್ರಮಕ್ಕೆ ತಾವ್ಯಾರು ಹೋಗಬಾರದು ಎಂದು ಅಲ್ಲಲ್ಲಿ ಚರ್ಚೆಗಳು ನಡೆಯುತ್ತಿವೆ. ಹೀಗೆ ಮಾಡಿ ನಾಡಪ್ರಭು ಕೆಂಪೇಗೌಡರನ್ನು ಅನಾಥರನ್ನಾಗಿಸದಿರೋಣ.
ಸ್ವತ: ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರೇ ಹಲವಾರು ಬಾರಿ ಕೆಂಪೇಗೌಡರ ಪ್ರತಿಮೆ ನಿರ್ಮಾಣಗೊಳ್ಳುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ನಿರ್ಮಾಣ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ, ಜೊತೆಗೆ ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಕೆಂಪೇಗೌಡರ ಪ್ರತಿಮೆಯು ಲೋಕಾರ್ಪಣೆಗೊಳ್ಳುವುದನ್ನು ಕಣ್ಣು ತುಂಬಿಕೊಳ್ಳಲು ಕಾತರರಾಗಿದ್ದಾರೆ. ಒಂದು ಸರ್ಕಾರ ಇಂತಹ ದೊಡ್ಡ ಮಟ್ಟದ ಕಾರ್ಯವನ್ನು ನಿರ್ವಹಿಸುವಾಗ ಸಣ್ಣಪುಟ್ಟ ವ್ಯತ್ಯಾಸಗಳು ಹಾಗೂ ಆ ಪಕ್ಷದ ಮುಖಂಡರ ಭಾಗಿತ್ವ ಸಹಜವಾಗಿ ಇದ್ದೇ ಇರುತ್ತದೆ. ಈ ಮಹತ್ಕಾರ್ಯವನ್ನು ಯಾರೇ ಮಾಡುತ್ತಿರಲಿ, ಯಾವುದೇ ಸರ್ಕಾರವಿರಲಿ, ಒಕ್ಕಲಿಗರ ಅಸ್ಮಿತೆಯಾಗಿರುವ ಕೆಂಪೇಗೌಡರನ್ನು ಸ್ಮರಿಸುತ್ತಾ ಅವರ ಸ್ಮರಣೆಯು ಚಿರಸ್ಥಾಯಿಯಾಗಿ ಉಳಿಯುವಂತೆ ಒಂದು ಸರ್ಕಾರ ಮಾಡುತ್ತಿದೆ ಎಂದು ತಿಳಿಯುತ್ತಾ ಈ ಒಂದು ಮಹತ್ಕಾರ್ಯದಲ್ಲಿ ಎಲ್ಲರೂ ಒಟ್ಟಾಗಿ ಐಕ್ಯತೆಯಿಂದ ಭಾಗಿಯಾಗೋಣ. ಸರ್ಕಾರಗಳು ಬರುತ್ತವೆ, ಸರ್ಕಾರಗಳು ಹೋಗುತ್ತವೆ ಆದರೆ ನಾಡು ಕಟ್ಟಿದ ಕೆಂಪೇಗೌಡರು ಚಿರಾಯುವಾಗಲಿ ಎಂಬುದೇ ಪ್ರತಿಯೊಬ್ಬ ಕೆಂಪೇಗೌಡರ ಅಭಿಮಾನಿಯ ಆಶಯವಾಗಿದೆ.

ವಿಳಾಸ:
ಕಿರಣ್ ಜೈರಾಮ್ ಗೌಡ
ಕೆಂಪೇಗೌಡನ ಕೊಪ್ಪಲು, ಕಿತ್ತೂರು,
ಪಿರಿಯಾಪಟ್ಟಣ ತಾಲೂಕು, ಮೈಸೂರು ಜಿಲ್ಲೆ
9620145991

Leave a Reply

Your email address will not be published. Required fields are marked *