ಮೈಸೂರಿನಲ್ಲಿ ಇಂದು-ನಾಳೆ ಭಾರತ ಪ್ರವಾಸೋದ್ಯಮ ಮೇಳ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ. ಸವಿತಾ ಚಾಲನೆ

ನಂದಿನಿ ಮೈಸೂರು

ಮೈಸೂರಿನಲ್ಲಿ ಎರಡು ದಿನಗಳ ಪ್ರವಾಸೋದ್ಯಮ ಮೇಳಕ್ಕೆ ಚಾಲನೆ

ಮೈಸೂರು, ಜೂನ್‌ 28- ಪ್ರವಾಸೋದ್ಯಮ ಪ್ರದರ್ಶನ ಕ್ಷೇತ್ರದ ಐಟಿಎಂಇ (ಇಂಡಿಯಾ ಟ್ರಾವೆಲ್‌ ಮಾರ್ಟ್‌ ಎಕ್ಸಿಬಿಷನ್ಸ್‌) ಎರಡು ದಿನಗಳ ಭಾರತ ಪ್ರವಾಸೋದ್ಯಮ ಮೇಳವನ್ನು ಮೈಸೂರಿನಲ್ಲಿ ಆಯೋಜಿಸಿದ್ದು, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ. ಸವಿತಾ ಅವರು ಶುಕ್ರವಾರ ಇದನ್ನು ಉದ್ಘಾಟಿಸಿದರು.

ನಗರದ ಹುಣಸೂರು ರಸ್ತೆಯಲ್ಲಿರುವ ಲೆ ರುಚಿ ದಿ ಪ್ರಿನ್ಸ್‌ ಹೋಟೆಲ್‌ನಲ್ಲಿ ಈ ಪ್ರದರ್ಶನ ಶನಿವಾರ (ಜೂನ್‌ 29) ಮುಕ್ತಾಯಗೊಳ್ಳಲಿದೆ. ಕರ್ನಾಟಕ ಮಾತ್ರವಲ್ಲದೇ ಕೇರಳ, ಚಂಡಿಗಢ, ಗೋವಾ, ತಮಿಳುನಾಡು, ಪುದುಚೇರಿ, ದೆಹಲಿ, ಅಂಡಮಾನ್‌ ಮತ್ತು ವಿದೇಶಗಳಿಂದ ನೇಪಾಳ ಮತ್ತು ಥಾಯ್ಲೆಂಡ್‌ನ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಪ್ರವಾಸೋದ್ಯಮ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಮೈಸೂರು ವಲಯದ ಜಂಟಿ ನಿರ್ದೇಶಕರಾದ ಎಂ.ಕೆ. ಸವಿತಾ ಅವರು “ಮೈಸೂರು, ಕರ್ನಾಟಕ ಚಾರಿತ್ರಿಕ ನಗರಗಳಲ್ಲಿ ಒಂದಾಗಿದ್ದು, ಅನೇಕ ಪ್ರವಾಸಿ ಆಕರ್ಷಣೆಯ ಸ್ಥಳಗಳಿವೆ. ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಬೃಂದಾವನ ಉದ್ಯಾನ, ಮತ್ತು ಮೈಸೂರು ಮೃಗಾಲಯ ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ. ದಸರಾ ಉತ್ಸವ ವೀಕ್ಷಿಸಲು ದೇಶ, ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ವರ್ಷವಿಡೀ ಇರುವ ಉತ್ತಮ ಹವಾಮಾನವೂ ಅನುಕೂಲಕರವಾಗಿದೆ. ಪ್ರತಿ ವರ್ಷ 40 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಿದ್ದು, ಇಂಥ ಪ್ರವಾಸೋದ್ಯಮ ಪ್ರದರ್ಶನಗಳಿಗೆ ಇದು ಯೋಗ್ಯವಾಗಿದೆ” ಎಂದು ಹೇಳಿದರು.

ಪ್ರಸ್ತುತ ಮೇಳದಲ್ಲಿ ಟ್ರಾವೆಲ್‌ ಏಜೆಂಟರು, ಟೂರ್‌ ಆಪರೇಟರ್‌ಗಳು, ಕಾರ್ಪೊರೆಟ್‌ ಖರೀದಿದಾರರು ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದ ಎಲ್ಲ ಪಾಲುದಾರರು ಭಾಗಹಿಸಿದ್ದಾರೆ. ಎಲ್ಲ ನಡುವೆ ನೆಟ್‌ವರ್ಕ್‌ ಸೃಷ್ಟಿಸಿ ಪ್ರವಾಸೋದ್ಯಮವನ್ನು ಬೆಳೆಸುವ ಉದ್ದೇಶವನ್ನು ಮೇಳ ಹೊಂದಿದೆ.

ಮೇಳದ ಆಯೋಜಕರಲ್ಲಿ ಒಬ್ಬರಾದ ಜುಪಿಟರ್‌ ಟ್ರಾವೆಲ್‌ ಎಕ್ಸಿಬಿಷನ್ಸ್‌ನ ನಿರ್ದೇಶಕರಾದ ಟಿ.ಜೆ.ಪಿ. ರಾಜು ಅವರು ಮಾತನಾಡಿ “ಪ್ರವಾಸೋದ್ಯಮ ಅಭಿವೃದ್ಧಿಗೆ ಮೈಸೂರಿನಲ್ಲಿ ವಿಪುಲ ಅವಕಾಶಗಳಿವೆ. ನಗರಕ್ಕೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆಯಲ್ಲಿ ಪ್ರತಿ ವರ್ಷ ಸರಾಸರಿ ಶೇ 20ರಷ್ಟು ಹೆಚ್ಚಳವಾಗುತ್ತಿದ್ದು, ನಗರದ ಅರ್ಥವ್ಯವಸ್ಥೆಗೆ ಆತಿಥ್ಯ ಕ್ಷೇತ್ರ ಶೇ 25ರಷ್ಟು ಕೊಡುಗೆ ನೀಡುತ್ತಿದೆ. ಐಟಿಎಂಇ ಪ್ರವಾಸೋದ್ಯಮ ಮೇಳಕ್ಕೆ ಮೈಸೂರು ಪ್ರಶಸ್ತವಾಗಿದೆ. ಭವಿಷ್ಯದ ಪ್ರವಾಸೋದ್ಯಮ ಸ್ವರೂಪವನ್ನು ರೂಪಿಸಲು ಮೈಸೂರು ಮಹತ್ವದ ಪಾತ್ರ ವಹಿಸುತ್ತಿದೆ. ಆಧುನಿಕತೆ ಮತ್ತು ಇತಿಹಾಸ ಸಂಗಮಿಸುವ ಅಪರೂಪದ ಸ್ಥಳ ಇದಾಗಿದೆ” ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *