ಮಾ.1ರಿಂದ ರಾಜ್ಯ ಸರ್ಕಾರಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ, ಗೋವಿಂದರಾಜು ಅಧ್ಯಕ್ಷತೆಯಲ್ಲಿ ಸಭೆ

ನಂದಿನಿ ಮೈಸೂರು

ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳನ್ನು ಪರಿಷ್ಕರಿಸಬೇಕು, ಹಳೇ ಪಿಂಚಣಿ ಯೋಜನೆ ಮತ್ತೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಾ. 1ರಿಂದ ರಾಜ್ಯ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹಿನ್ನಲೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಗೋವಿಂದರಾಜು ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಮೈಸೂರು ಸರ್ಕಾರಿ ನೌಕರರ ಸಂಘದಲ್ಲಿ ಎಲ್ಲಾ ಸರ್ಕಾರಿ ನೌಕರರು ಹಾಗೂ ಚಾಲಕರು ಸದಸ್ಯರು ಒಟ್ಟುಗೂಡಿ ಮುಷ್ಕರ ಕುರಿತು ಸಭೆಯಲ್ಲಿ ರೂಪುರೇಷೆಗಳನ್ನು ಚರ್ಚಿಸಿದರು.

ಇದೇ ಸಂದರ್ಭದಲ್ಲಿ ಗೋವಿಂದರಾಜು ಮಾತನಾಡಿ ರಾಜ್ಯದ ನೂತನ ಸಾಲಿನ ಆಯವ್ಯಯದಲ್ಲಿ ಸರ್ಕಾರಿ ನೌಕರರ ವೇತನ- ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡದಿರುವುದು ಬೇಸರ ತರಿಸಿದೆ. ವೇತನ- ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರ ರಾಜ್ಯ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗ ರಚಿಸಿತ್ತು.
ಆದರೂ ಸರ್ಕಾರ ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ತಕ್ಕಂತೆ ವೇತನ ಪರಿಷ್ಕರಣೆ ಮಾಡದಿರುವುದು ಬೇಸರದ ಸಂಗತಿಯಾಗಿದೆ. ಹೀಗಾಗಿ ಮಾ. ಒಂದರಿಂದ ರಾಜ್ಯದ ಎಲ್ಲ ಸರ್ಕಾರಿ ನೌಕರರ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟಿಸಲಿದ್ದೇವೆ. ರಾಜ್ಯ ಸರ್ಕಾರ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಯಾದ ವೇತನ ಪರಿಷ್ಕರಣೆ ಸಂಬಂಧಿಸಿದ ಮಧ್ಯಂತರ ವರದಿಯನ್ನು ಏಳನೇ ವೇತನ ಆಯೋಗದಿಂದ ಶೀಘ್ರ ಪಡೆದು ಕಳೆದ ಜುಲೈನಿಂದ ಜಾರಿಗೆ ಬರುವಂತೆ ಶೇ. ೪೦ ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರಿ ಆದೇಶ ಹೊರಡಿಸುವ ಮೂಲಕ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಕರ್ನಾಟಕ ರಾಜ್ಯಾದ್ಯಂತ ನಡೆಯುವ ಸರ್ಕಾರಿ ನೌಕರರ ಅನಿರ್ಧಿಷ್ಟ ಮುಷ್ಕರಕ್ಕೆ ಗೈರು ಹಾಜರಿ ಆಗುವ ಮೂಲಕ ಮೈಸೂರು ವಿಭಾಗ‌ ಮಟ್ಟದ ಸರ್ಕಾರಿ ವಾಹನ ಚಾಲಕರ ಜಿಲ್ಲಾ ಸಂಘದ ಶಾಖೆಯ ಸಂಘಗಳು ,ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದೆ ಎಂದು
ಕರ್ನಾಟಕ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘ ಬೆಂಗಳೂರು ಮೈಸೂರು ವಿಭಾಗದ ಉಪಾಧ್ಯಕ್ಷರು
ಕನಕರಾಜ್ ತಿಳಿಸಿದರು.

ಸಭೆಯಲ್ಲಿ ಪದಾಧಿಕಾರಿಗಳಾದ
ಉಮೇಶ್, ರೇವಣ್ಣ, ಆನಂದ್, ರವಿ,ಮಾಲಂಗಿ ಸುರೇಶ್ ಸೇರಿದಂತೆ ನೌಕರರು ಹಾಜರಿದ್ದರು.

Leave a Reply

Your email address will not be published. Required fields are marked *