ಕರ್ನಾಟಕದಲ್ಲಿ ಕೇಸರಿ ಕಹಳೆ ಮೊಳಗಿಸಲು ರಾಜಕೀಯ ಚಾಣಕ್ಯ ಅಮಿತ್ ಶಾ ತಂತ್ರಗಾರಿಕೆ ಅನಿವಾರ್ಯ

ಕರ್ನಾಟಕದಲ್ಲಿ ಕೇಸರಿ ಕಹಳೆ ಮೊಳಗಿಸಲು ರಾಜಕೀಯ ಚಾಣಕ್ಯ ಅಮಿತ್ ಶಾ ತಂತ್ರಗಾರಿಕೆ ಅನಿವಾರ್ಯ

ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರ ಬರುತ್ತಿದೆ. ಎಲ್ಲಾ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರ ಜೊತೆ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಅಧಿಕಾರಕ್ಕೆ ಬರಲು ಕೆಲವೇ ಸೀಟುಗಳ ಕೊರತೆ ಎದುರಿಸಿದ್ಧ ಭಾರತೀಯ ಜನತಾ ಪಕ್ಷ ಈ ಬಾರಿ ಪೂರ್ಣಬಹುಮತದೊಂದಿಗೆ ರಾಜಕೀಯ ಚುಕ್ಕಾಣಿ ಹಿಡಿಯಲು ಬಯಸುತ್ತಿದೆ. ಯಡಿಯೂರಪ್ಪನವರು ರಾಜಕೀಯದಿಂದ ಸ್ವಲ್ಪ ಹಿನ್ನೆಲೆಗೆ ಬಂದಿದ್ದರಿಂದ, ಈ ಬಾರಿ ರಾಜ್ಯ ಚುನಾವಣೆಯಲ್ಲಿ ಕೇಂದ್ರ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಂಚೂಣಿಯಲ್ಲಿ ನಿಂತು ಮತಯಾಚನೆ ಮಾಡುವ ಅನಿವಾರ್ಯತೆ ಮೊದಲಿಗಿಂತ ಹೆಚ್ಚಾಗಿದೆ.

ಈಗಾಗಲೇ ಉಭಯ ನಾಯಕರು ಕರ್ನಾಟಕಕ್ಕೆ ಎರಡು ಮೂರು ಬಾರಿ ಭೇಟಿ ನೀಡಿ ರಾಜಕೀಯ ಚಟುವಟಿಕೆಗಳಿಗೆ ವೇಗ ನೀಡಿದ್ದಾರೆ. ಮುಖ್ಯವಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ನೇರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರಿಗೆ ಟಕ್ಕರ್ ನೀಡಿ ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಯಾತ್ರೆಯನ್ನು ಆರಂಭಿಸಿದ್ದಾರೆ. ಹಲವು ರಾಜ್ಯಗಳಲ್ಲಿ ಕಮಲ ಅರಳಿಸಿ ತಮ್ಮ ವಿವಿಧ ತಂತ್ರಗಾರಿಕೆಗಳಿಂದ ಭಾಜಪ ಸರ್ಕಾರ ರಚಿಸಲು ಕಾರಣೀಭೂತರಾದ ಅಮಿತ್ ಶಾ, ಕರ್ನಾಟಕದ ಚುಕ್ಕಾಣಿಗೆ ವಿವಿಧ ತಂತ್ರಗಾರಿಕೆಗಳನ್ನು ರೂಪಿಸುತ್ತಿದ್ದಾರೆ. ಇತ್ತೀಚಿಗೆ ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಭಾಗಗಳಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣೆ ಸಭೆ ಮತ್ತು ಸಮಾರೋಹಗಳಲ್ಲಿ ಪಾಲ್ಗೊಂಡಿದ್ದ ರಾಜಕೀಯ ಚಾಣಾಕ್ಯ ದಕ್ಷಿಣ ಭಾರತದಲ್ಲಿ ಭಾಜಪದ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಶತಾಯಗತಾಯ ಕಮಲವನ್ನು ಅರಳಿಸಲು ಸಂಕಲ್ಪ ಮಾಡಿದ್ದಾರೆ.

ಕರ್ನಾಟಕ ಅಖಾಡದಲ್ಲಿ ಗೆಲ್ಲುತ್ತಾರಾ ಶಾ
ಹಲವು ರಾಜ್ಯ ಚುನಾವಣೆಗಳಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿ, ಗೆಲುವಿನ ದಡ ಸೇರಿಸಿರುವ ಅಮಿತ್ ಶಾ ಭಾರತೀಯ ರಾಜಕಾರಣದಲ್ಲಿ ಚಾಣಕ್ಯನೆಂದೇ ಖ್ಯಾತಿ ಪಡೆದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಭಾಜಪ ಸಮಬಲದ ಸ್ಫರ್ಧಿಗಳಾದರೆ, ಜನತಾ ದಳ ಸದ್ಯದ ಪರಿಸ್ಥಿತಿಯಲ್ಲಿ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಆದರೆ ಜೆಡಿಎಸ್‌ಗೆ ಎರಡು ಪ್ರಬಲ ಪಕ್ಷಗಳಿಗೆ ಪೂರ್ಣ ಬಹುಮತ ದೊರೆಯದಂತೆ ಪ್ರಬಲ ಪ್ರತಿಸ್ಪರ್ಧೆ ಒಡ್ಡುವ ಸಾಮರ್ಥ್ಯವಂತೂ ಖಂಡಿತ ಇದೆ. ಈ ವಾಸ್ತವವನ್ನು ಅರಿತಿರುವ ಅಮಿತ್ ಶಾ ಹಳೇ ಮೈಸೂರು ಭಾಗದಲ್ಲಿ ನೇರವಾಗಿ ಜೆಡಿಎಸ್‌ಗೆ ಮೇಲೆ ತಮ್ಮ ಗಮನವನ್ನು ಕೇಂದ್ರಿಕರಿಸಲಿದ್ದಾರೆ. ಕಳೆದ ಬಾರಿ ಬೆಂಗಳೂರಿನ ಬೂತ್ ವಿಜಯ ಕಾರ್ಯಕ್ರಮದಲ್ಲಿ ದಳಪತಿಗಳ ಮೇಲೆ ನೇರವಾಗಿ ಹರಿಹಾಯ್ದ ಶಾ, ಜನತಾ ದಳದ ಇಬ್ಬಂದಿ ನೀತಿಯ ಬಗ್ಗೆ ವ್ಯಂಗವಾಡಿದ್ದರು. ಚುನಾವಣೆ ಪೂರ್ವ ವೈರಿಗಳಂತೆ ಕಚ್ಚಾಡುವ ಕಾಂಗ್ರೆಸ್ ಮತ್ತು ಜನತಾ ದಳ, ಚುನಾವಣೆ ಮುಗಿದ ನಂತರ ಒಬ್ಬರನ್ನೊಬ್ಬರು ಆಲಂಗಿಸುವ ಇವರು ಒಂದೇ ನಾಣ್ಯದ ಎರಡು ಮುಖಗಳೆಂದರು.

ಕರ್ನಾಟಕದೊಂದಿಗೆ ಹಲವು ವರ್ಷಗಳ ಒಡನಾಟವಿರುವ ಅಮಿತ್ ಶಾ ಕರುನಾಡಿನ ಜನರ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲರು. ಕಲ್ಯಾಣ ಕರ್ನಾಟಕ, ಹಳೆ ಮೈಸೂರು, ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಭಾಗಗಳ ಮತದಾರರ ವಿಭಿನ್ನ ಪ್ರಾಧಾನ್ಯತೆಗಳನ್ನು ಅರಿತಿರುವ ಅಮಿತ್ ಶಾ, ತಾವು ಹೋದ ಕಡೆಯಲ್ಲಾ ಅಲ್ಲಿನ ಸ್ಥಳೀಯ ಸಮಸ್ಯೆಗಳು ಮತ್ತು ಭಾರತೀಯ ಜನತಾ ಪಕ್ಷದ ಅಧಿಕಾರದ ಅವಧಿಯಲ್ಲಿ ಆ ಪ್ರದೇಶದಲ್ಲಿ ನಡೆದ ಅಭಿವೃದ್ದಿ ಕಾರ್ಯಗಳನ್ನು ಒತ್ತಿ ಹೇಳುವ ಮೂಲಕ ಮತದಾರರ ಮನ ಸೆಳೆಯುತ್ತಿದ್ದಾರೆ.

ಸಹಕಾರದ ಮಂತ್ರದಿಂದ ಮೈಸೂರು ಭಾಗದ ರೈತರ ಸೆಳೆಯಲಿರುವ ಶಾ
ಇದೇ ಮೊದಲ ಬಾರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ `ಸಹಕಾರ` ವಿಷಯವನ್ನು ಕೃಷಿ ಇಲಾಖೆಯಿಂದ ಬೇರ್ಪಡಿಸಿ, ಅದಕ್ಕೆ ಬೇರೆಯದೇ ಆದ ಇಲಾಖೆಯನ್ನು ಸೃಷ್ಟಿ ಮಾಡಿಕೊಟ್ಟಿತು. ಈ ಸಹಕಾರ ಸಚಿವಾಲಯದ ಮೊದಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ಅಮಿತ್ ಶಾ, ಭಾರತದ ಸಹಕಾರ ವಲಯಕ್ಕೆ ಹೊಸ ಮಾರ್ಗಸೂಚಿಯನ್ನು ರೂಪಿಸಿತ್ತಿರುವುದು ಪ್ರಶಂಸನೀಯ. ಇತ್ತೀಚಿಗಷ್ಟೆ ಕೃಷಿ ಉತ್ಪನ್ನಗಳ ರಫ್ತಿಗಾಗಿ ಬಹುರಾಜ್ಯ ರಫ್ತು ಸಂಘ, ಸಾವಯವ ಕೃಷಿ ಉತ್ತೇಜನಕ್ಕಾಗಿ, ಬಹುರಾಜ್ಯ ಸಾವಯವ ಸಂಘ ಮತ್ತು ಅತ್ಯುತ್ತಮ ದೇಶಿಯ ಬೀಜಗಳ ಸಂರಕ್ಷಣೆ ಮತ್ತು ಬಹುರಾಜ್ಯ ಬೀಜ ನಿಗಮಗಳಂತ ರಾಷ್ಟ್ರವ್ಯಾಪಿ ಸಹಕಾರ ಸಂಘಗಳ ಸ್ಥಾಪನೆ ಮಾಡುವ ಮೂಲಕ ದೇಶದ ಕೃಷಿಕರಿಗೆ ಶುಭ ಸುದ್ದಿ ನೀಡಿದ್ದಾರೆ. ಕಳೆದ ಬಾರಿ ಮಂಡ್ಯದಲ್ಲಿ ಮೆಘಾ ಡೈರಿ ಉದ್ಘಾಟನೆ ಮಾಡಿದ್ದ ಅಮಿತ್ ಶಾ ಕರ್ನಾಟಕದ ನಂದಿನ ಮತ್ತು ಗುಜರಾತಿನ ಅಮುಲ್ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ಪ್ರಸ್ತಾಪ ಮಾಡಿದರು. ಕರ್ನಾಟಕ ಹಾಲು ಒಕ್ಕೂಟದ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಹೊಗಳಿ, ನಂದಿನಿ ಬ್ರ್ಯಾಂಡ್ ಅನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು, ಕೇಂದ್ರ ಸರ್ಕಾರದ ಸಹಕಾರ ಇಲಾಖೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯಿಂದ ಇನ್ನಷ್ಟು ನೆರವು ಕೊಡುವ ಭರವಸೆ ನೀಡಿದರು. ಇದು ನೇರವಾಗಿ ಈ ಭಾಗದ ರೈತರನ್ನು ಭಾರತೀಯ ಜನತಾ ಪಕ್ಷದ ಕಡೆಗೆ ವಾಲುವಂತೆ ಮಾಡಲಿದೆ.

ಹಳೆ ಮೈಸೂರು ವಿಭಾಗದಲ್ಲಿ ಭಾರತೀಯ ಜನತಾ ಪಕ್ಷ ಮೊದಲಿನಿಂದಲೂ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮತ ಹಾಕುವ ಈ ಭಾಗದ ಜನರು ಲೋಕಸಭೆಯ ಚುನಾವಣೆಯಲ್ಲಿ ಭಾಜಪದ ಸಂಸದ ಪ್ರತಾಪ್ ಸಿಂಹರಿಗೆ ಮತ ಹಾಕಿದ್ದು ಮತ್ತು ಮಂಡ್ಯ ಕ್ಷೇತ್ರದಲ್ಲಿ ಪಕ್ಷಭೇದ ಮರೆತು ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್‌ರವರನ್ನು ಆಯ್ಕೆ ಮಾಡಿರುವುದು ಈ ಜನರ ಪ್ರಬುದ್ಧತೆಗೆ ಸಾಕ್ಷಿ. ಇದನ್ನು ಅರಿತಿರುವ ಅಮಿತ್ ಶಾ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೂಡ ಈ ಭಾಗದ ಮತದಾರರಿಗೆ ಭಾರತೀಯ ಜನತಾ ಪಕ್ಷ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ಮುಟ್ಟಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಈ ಪ್ರದೇಶದಲ್ಲಿ ಕನಿ‍ಷ್ಠ 25 ಕ್ಷೇತ್ರಗಳನ್ನು ಗೆಲ್ಲಲೇ ಬೇಕು ಎಂದು ರಾಜ್ಯ ನಾಯಕರಿಗೆ ಟಾರ್ಗೆಟ್ ನೀಡಿದ್ದಾರೆ.

ಉತ್ತರ ಕರ್ನಾಟಕಕ್ಕೆ ಮಹದಾಯಿ ಮಂತ್ರ ಪಠಿಸಿದ ಚಾಣಾಕ್ಯ
ಕೆಲ ದಿನಗಳ ಹಿಂದೆ ಹುಬ್ಬಳಿ ಮತ್ತು ಬೆಳಗಾವಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಅಮಿತ್ ಶಾ ಮುಂದಿನ ಚುನಾವಣೆಗೆ ವಿಜಯ ಸಂಕಲ್ಪ ಯಾತ್ರೆಯ ಮೂಲಕ ಚಾಲನೆ ನೀಡಿದರು. ಈ ಭಾಗದ ಜನರು ಕುಡಿಯುವ ನೀರಿನ ಸೌಲಭ್ಯಕ್ಕೆ ಮಹದಾಯಿ ಹೋರಾಟವನ್ನು ಆರಂಭಿಸಿ ದಶಕಗಳೇ ಕಳೆದಿವೆ. ತಮ್ಮ ಭಾಷಣದಲ್ಲಿ ಮಹದಾಯಿ ಸಂಕಷ್ಟಕ್ಕೆ ಗೋವಾ ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚನೆ ನಡೆಯಿಸಿ ಪರಿಹಾರವನ್ನು ಒದಗಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ, 2007 ರಲ್ಲಿ ‘ಕರ್ನಾಟಕದೆಡೆಗೆ ಮಹದಾಯಿ ನೀರನ್ನು ಯಾವುದೇ ಕಾರಣಕ್ಕೂ ಹರಿಯಲು ಬಿಡುವುದಿಲ್ಲ’ ಎಂದು ಸೋನಿಯಾ ಗಾಂಧಿಯವರು ಹೇಳಿದ ಭಾಷಣವನ್ನು ಮತ್ತು 2022 ರಲ್ಲಿ ಗೋವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ‘ ಮಹದಾಯಿಯ ಒಂದು ಹನಿ ನೀರು ಕರ್ನಾಟಕಕ್ಕೆ ಸಿಗದ ಹಾಗೇ ಕಾಂಗ್ರೆಸ್ ಸುನಿಶ್ಚಿತ’ ಮಾಡಲಾಗುವುದು ಎಂದು ಹೊರಡಿಸಿದ್ದ ಘೋಷಣಾ ಪತ್ರವನ್ನು ನೆನಪಿಸಿದರು. ಈ ವಿಷಯದಲ್ಲಿ ಕಾಂಗ್ರೆಸ್‌ನ ಇಬ್ಬಂದಿತನ ಧೋರಣೆಯನ್ನು ಪ್ರಶ್ನಿಸಿದ ಅಮಿತ್ ಶಾ, ಉತ್ತರ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕೊಡುಗೆಯನ್ನು ಪ್ರಶ್ನಿಸಿದರು. ಹಾಗೇ ಅಮಿತ್ ಶಾ ಮುಂದಿನ ಚುನಾವಣೆಗೆ ಕಿತ್ತೂರಿನ ವೀರ ಭೂಮಿಯ ಮೂಲಕ ವಿಜಯ ಸಂಕಲ್ಪ ಯಾತ್ರೆಯನ್ನು ಹೊರಡಿಸಿದ್ದು ವಿಶೇಷ. ಹಾಗೇ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೈಗೊಂಡ ಹಲವು ಯೋಜನೆಗಳನ್ನು ಜನರ ಮುಂದೆ ತೆರೆದಿಟ್ಟರು.

ಕರಾವಳಿ ನಾಡಿನಲ್ಲಿ ಟಿಪ್ಪು ಮತ್ತು ಅಬ್ಬಕ್ಕನ ಆರಾಧಕರ ವ್ಯತ್ಯಾಸ ಬಿಚ್ಚಿಟ್ಟ ಅಮಿತ್ ಶಾ
ಕ್ಯಾಂಪ್ಕೊದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಮಿತ್ ಶಾ, ಟಿಪ್ಪು ಸುಲ್ತಾನ್ ಆರಾಧಕರಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರಿಂದ ದೇಶದ ಅಭಿವೃದ್ಧಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲವೆಂದರು. PFI ನಂತಹ ಉಗ್ರಗಾಮಿ ಸಂಘಟನೆಗಳ ಮೇಲಿನ 1700 ಕೇಸ್‌ಗಳನ್ನು ಹಿಂಪಡೆದ ಟಿಪ್ಪುವಿನ ಅನುಯಾಯಿಗಳಿಂದ ದೇಶದ ಸುರಕ್ಷೆ ನಿರೀಕ್ಷಿಸುವುದು ಮೂರ್ಖತನವೆಂದರು. ರಾಣಿ ಅಬ್ಬಕ್ಕಳನ್ನು ಸ್ಮರಿಸುತ್ತಾ ದೇಶಭಕ್ತ ಪಕ್ಷಕ್ಕೆ ಅಧಿಕಾರ ನೀಡಬೇಕೆಂದು ಮನವಿ ಮಾಡಿದರು. ಭೀಷಣ ಭೌಗೋಳಿಕ ಪರಿಸ್ಥಿತಿ ಹೊಂದಿದ್ದರೂ, ಕೃಷಿಯ ಮೂಲಕ ದೇಶವನ್ನು ಸಮೃದ್ಧಗೊಳಿಸಿರುವ ಈ ಪ್ರದೇಶ ಬಗ್ಗೆ ಶಾ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೇ ಈ ಪ್ರದೇಶದಲ್ಲಿ ಬೆಳೆಯುವ ಅಡಿಕೆ ಹೇಗೆ ಕರ್ನಾಟಕ ಮತ್ತು ಗುಜರಾತ್ ಮಧ್ಯೆ ವ್ಯವಹಾರಿಕ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.

ಕರ್ನಾಟಕ ಭಾಜಪಕ್ಕೆ ಶಾ ಅನಿವಾರ್ಯತೆ
ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ, ಬಿ.ಎಸ್.ಯಡಿಯೂರಪ್ಪನವರನ್ನು ಹೊರತು ಪಡಿಸಿ ರಾಜ್ಯವ್ಯಾಪಿ ಪ್ರಭಾವ ಬೀರಬಲ್ಲ ನಾಯಕರಿಲ್ಲ. ಯಡಿಯೂರಪ್ಪನವರು ಕೂಡ ಈ ಬಾರಿ ತುಂಬಾ ಬಳಲಿದವರಂತೆ ಕಾಣುತ್ತಿದ್ದು, ಅಷ್ಟು ಚುರುಕಾಗಿ ಕಾಣುತ್ತಿಲ್ಲ. ಬಿ.ಎಸ್.ಬೊಮ್ಮಾಯಿವರಿಗೆ ತಮ್ಮದೇ ಸಮುದಾಯದ ಮೀಸಲಾತಿ ಹೋರಾಟ ತೊಡಕಾಗುತ್ತಿರುವುದು ವಿಷಾದ. ಈ ಸಂದರ್ಭದಲ್ಲಿ ಕೇಂದ್ರ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕರ್ನಾಟಕ ಚುನಾವಣೆ ಸಾರಥ್ಯ ವಹಿಸುವುದು ಅನಿವಾರ್ಯ. ತಮ್ಮ ರಾಜಕೀಯ ತಂತ್ರಗಾರಿಕೆಗಳಿಗೆ ಹೆಸರುವಾಸಿಯಾಗಿರುವ ಅಮಿತ್ ಶಾ ಈ ಬಾರಿ ಮುಂಚೂಣಿಯಲ್ಲಿ ನಿಂತು ಪಕ್ಷವನ್ನು ಮುನ್ನೆಡುಸುವುದು ಅನಿವಾರ್ಯವಾಗಿದೆ.

Leave a Reply

Your email address will not be published. Required fields are marked *