ತಿ.ನರಸೀಪುರ :22 ಜನವರಿ 2022
ವರದಿ:ಶಿವು
ಸ್ವಯಂ ಉದ್ಯೋಗ ತರಬೇತಿಯನ್ನು ಪಡೆದುಕೊಳ್ಳುವ ಮಹಿಳೆಯರು ತರಬೇತಿ ಮುಗಿದ ನಂತರ ನಿಗಮಗಳಲ್ಲಿ ನೇರ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಸ್ಥಳೀಯವಾಗಿ ಕಿರು ಕೈಗಾರಿಕೆ ಅಥವಾ ಉದ್ಯಮವನ್ನು ಆರಂಭಿಸಿ ಸಾವಲಂಬಿ ಬದುಕನ್ನು ಕಟ್ಟಿಕೊಳ್ಳ ಬೇಕೆಂದು ವರುಣ ಶಾಸಕ ಡಾ.ಎಸ್.ಯತೀಂದ್ರ ಹೇಳಿದರು.
ತಾಲೂಕಿನ ಹುಣಸೂರು ಗ್ರಾಮದಲ್ಲಿ ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ೨೦೨೦-೨೧ನೇ ಸಾಲಿನ ಕ್ರಿಯಾ ಯೋಜನೆಯಂತೆ ೩೦ ಫಲಾನುಭವಿಗಳಿಗೆ ಹಮ್ಮಿಕೊಂಡಿದ್ದ ಕೌಶಲ್ಯ ಅಭಿವೃದ್ಧಿ ಮತ್ತು ಆದಾಯ ಗಳಿಕೆಗಾಗಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳ ಮಹಿಳೆಯರು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಸೇಮ್ ಉದ್ಯೋಗ ತರಬೇತಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಖಾಲಿ ನಿವೇಶನವಿದ್ದರೆ, ಶಿಥಿಲಗೊಂಡ ಗುಡಿಸಲು ಮನೆಗಳನ್ನು ಹೊಂದಿರುವ ಚರ್ಮಕಾರರಿಗೆ ವಾಸಕ್ಕೆ ಮತ್ತು ಉದ್ಯೋಗ ಮುಂದುವರಿಸಲು ಅನುಕೂಲವಾಗುವಂತೆ ವಸತಿ ನಿರ್ಮಿಸಿಕೊಳ್ಳಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ೨.೫ ಲಕ್ಷ ಸಹಾಯಧನವನ್ನು ನೀಡಲಾಗುವುದು. ಅಲ್ಲದೆ ಬ್ಯಾಂಕಿನಿಂದ ಸಾಲ ಸೌಲಭ್ಯವನ್ನು ಕಲ್ಪಿಸಲಾಗುವುದು. ಅದರಿಂದ ವಸತಿ ರೈತರು ಹಾಗೂ ಶಿಥಿ ಲ ಮನೆಗಳನ್ನು ಹೊಂದಿರುವವರು ವಸತಿ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದು ಎಸ್. ಯತೀಂದ್ರ ಅವರು ಕರೆ ನೀಡಿದರು.
ನಿಗಮದ ಜಿಲ್ಲಾ ಸಂಯೋಜಕರಾದ ಆರ್. ನಾಗರಾಜು ಮಾತನಾಡಿ, ಕೌಶಲ್ಯ ಅಭಿವೃದ್ಧಿ ಮತ್ತು ಆದಾಯ ಗಳಿಕೆಯಾಗಿ ತರಬೇತಿ ಶಿಬಿರದಲ್ಲಿ ಪಾದರಕ್ಷೆ, ಶೂ. ಚರ್ಮ ವಸ್ತುಗಳ ತಯಾರಿಕೆಯಲ್ಲಿ ೬೦ ದಿನಗಳ ಅವಧಿಗೆ ಉನ್ನತ ಮಟ್ಟದ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುವುದು. ಮತ್ತು ಕರ್ನಾಟಕ ಚರ್ಮ ತಾಂತ್ರಿಕ ಸಂಸ್ಥೆಯ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಿಂದ ಪರಿಷ್ಕೃತ ಪಠ್ಯ ದ ಆಧಾರದ ಮೇಲೆ ಬಹುಪಯೋಗಿ ತರಬೇತಿಯನ್ನು ನೀಡಲಾಗುವುದು. ತರಬೇತಿ ನಂತರ ಗುಡಿಕೈಗಾರಿಕೆ ಪ್ರಾರಂಭಿಸಲು ಅವಶ್ಯವಿರುವ ರೂ ೨೨೦೦೦ ಬೆಲೆಬಾಳುವ ಯಂತ್ರೋಪಕರಣಗಳನ್ನು ಅಂದರೆ ಒಂದು ಚರ್ಮದ ಹೊಲಿಗೆ ಯಂತ್ರ ಮತ್ತು ಒಂದು ಉಪಕರಣ ಪಟ್ಟಿಗೆ ಇವುಗಳನ್ನು ಉಚಿತವಾಗಿ ಒದಗಿಸಲಾಗುವುದು. ೬೦೦೦ ವೇತನವನ್ನು ನೀಡಲಾಗುವುದು. ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳು ಅಥವಾ ಕುಶಲಕರ್ಮಿಗಳ ಸ್ವಸಾಯ ಸಂಘಗಳ ಮತ್ತು ಸಹಕಾರ ಸಂಘಗಳು ಪಾರಂಪರಿಕ ವಿಧಾನದಲ್ಲಿ ಪಾದರಕ್ಷೆಗಳನ್ನು ಚರ್ಮ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಇವರು ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸಲು ಮುಂದೆ ಬಂದಲ್ಲಿ ಯಂತ್ರಾಧಾರಿತ ಉತ್ಪನ್ನ ಘಟಕಗಳನ್ನು ಸ್ಥಾಪಿಸಿ ಕೊಟ್ಟು ಸ್ವಯಂ ಉದ್ಯೋಗ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಿರಗಸೂರು ಗ್ರಾ.ಪಂ ಉಪಾಧ್ಯಕ್ಷ ನಾಗರಾಜು, ತಾ. ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಮೇಶ್, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ಮಾಜಿ ಗ್ರಾ. ಪಂ. ಅಧ್ಯಕ್ಷ ಮನ್ನಹುಂಡಿ ಮಹೇಶ್, ಯುವ ಮುಖಂಡ ಕಿರಗಸೂರು ಕಾಂತರಾಜು, ಗ್ರಾ. ಪಂ. ಸದಸ್ಯೆ ಭಾಗ್ಯ ಕೃಷ್ಣ, ಗಾಂಧಿ ಕೃಷ್ಣ, ಚೇತನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.