ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ವತಿಯಿಂದ ಮಾಧ್ಯಮ ಮತ್ತು ಸಂವಹನ ಬಿ.ಎ (ಆನರ್ಸ್) ಆರಂಭ

 

 

ಮಂಗಳೂರು:10 ಆಗಸ್ಟ್ 2021

ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ನಿಟ್ಟೆ ಸಂವಹನ ಸಂಸ್ಥೆಯು ೨೦೨೧-೨೨ನೇ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗುವಂತೆ ಮಾಧ್ಯಮ ಮತ್ತು ಸಂವಹನ ಬಿ.ಎ (ಆನರ್ಸ್) ಆರಂಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕೋರ್ಸನ್ನು ಮೊದಲ ಬಾರಿಗೆ ಪರಿಚಯಿಸುತ್ತಿರುವ ಹೆಗ್ಗಳಿಕೆ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ್ದಾಗಿದೆ.
ಪ್ರಾಯೋಗಿಕ ಹಾಗೂ ಪಠ್ಯ ಆಧಾರಿತ ಸಮತೋಲಿತ ಕಲಿಕೆಗೆ ಈ ಹೊಸ ಬಿ.ಎ (ಆನರ್ಸ್) ಕೋರ್ಸ್‌ನಲ್ಲಿ ಅವಕಾಶವಿದ್ದು, ಉದ್ಯಮದ ಅಗತ್ಯಗಳಿಗೆ ತಕ್ಕಂತೆ ವೃತ್ತಿಪರ ತರಬೇತಿ ಸಿಗಲಿದೆ. ಅನಿಮೇಷನ್, ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್, ಕಿರುಚಿತ್ರ ನಿರ್ಮಾಣ, ಫೋಟೋಗ್ರಫಿ, ವಿಎಫ್‌ಎಕ್ಸ್ ಪರಿಚಯ, ದತ್ತಾಂಶ ಪತ್ರಿಕೋದ್ಯಮ, ಜಾಹೀರಾತು, ಇವೆಂಟ್ ಮ್ಯಾನೇಜ್‌ಮೆಂಟ್ ಸೇರಿದಂತೆ ಹಲವು ಇತರ ವಿಷಯಗಳನ್ನು ಕಲಿಸಲಾಗುತ್ತದೆ.
ಒಟ್ಟು ೮ ಸೆಮಿಸ್ಟರ್‌ಗಳು ಈ ಕೋರ್ಸ್‌ನಲ್ಲಿ ಇರಲಿವೆ. ಮೂರು ಹಾಗೂ ಆರನೇ ಸೆಮಿಸ್ಟರ್‌ಗಳಲ್ಲಿ ಮೌಲ್ಯವರ್ಧಿತ ಕೋರ್ಸ್‌ಗಳು ಇರಲಿವೆ. ಏಳು ಹಾಗೂ ಎಂಟನೇ ಸೆಮಿಸ್ಟರ್‌ಗಳಲ್ಲಿ ಆಯ್ಕೆ ಆಧಾರಿತ ಕೋರ್ಸ್‌ಗಳು ಇರಲಿವೆ. ಈ ಕೋರ್ಸ್‌ನ ಒಂದು, ಎರಡು ಮತ್ತು ಮೂರನೇ ವರ್ಷದ ಕೊನೆಗೆ ಕೋರ್ಸ್‌ನಿಂದ ನಿರ್ಗಮಿಸುವ ಅವಕಾಶ ವಿದ್ಯಾರ್ಥಿಗಳಿಗೆ ಇರುವುದು ವಿಶೇಷ.

ಕೋರ್ಸ್‌ನಿಂದ ನಿರ್ಗಮಿಸಬಹುದಾದ ಆಯ್ಕೆಯ ಅವಕಾಶಗಳು ಈ ಕೆಳಗಿನಂತಿವೆ:

ಮೊದಲ ಎರಡು ಸೆಮಿಸ್ಟರ್‌ಗಳ ನಂತರ ನಿರ್ಗಮಿಸಿದರೆ ವಿದ್ಯಾರ್ಥಿಗೆ (ಕನಿಷ್ಠ ಸಿಜಿಪಿಎ ಹೊಂದುವುದು ಕಡ್ಡಾಯ) ಮಾಧ್ಯಮ ಮತ್ತು ಸಂವಹನ ವಿಷಯದಲ್ಲಿ ಪ್ರಮಾಣಪತ್ರ ಸಿಗಲಿದೆ.
ನಾಲ್ಕು ಸೆಮಿಸ್ಟರ್‌ಗಳನ್ನು ಪೂರ್ಣಗೊಳಿಸಿದರೆ (ಕನಿಷ್ಠ ಸಿಜಿಪಿಎ ಹೊಂದುವುದು ಕಡ್ಡಾಯ) ಮಾಧ್ಯಮ ಮತ್ತು ಸಂವಹನ ವಿಷಯದಲ್ಲಿ ಡಿಪ್ಲೊಮಾ ಪ್ರಮಾಣಪತ್ರ ಸಿಗಲಿದೆ.

ಆರು ಸೆಮಿಸ್ಟರ್‌ಗಳನ್ನು ಪೂರ್ಣಗೊಳಿಸಿದರೆ (ಕನಿಷ್ಠ ಸಿಜಿಪಿಎ ಹೊಂದುವುದು ಕಡ್ಡಾಯ) ಮಾಧ್ಯಮ ಮತ್ತು ಸಂವಹನ ವಿಷಯದಲ್ಲಿ ಪದವಿ ಪ್ರಮಾಣಪತ್ರ ಸಿಗಲಿದೆ.
ವಿಶ್ವವಿದ್ಯಾನಿಲಯದ ನಿಟ್ಟೆ ಸಂವಹನ ಸಂಸ್ಥೆಯು ೨೦೧೨ರಲ್ಲಿ ಪ್ರಾರಂಭವಾಗಿದ್ದು, ಕಳೆದ ೯ ವರ್ಷಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಬಿ.ಎ ಹಾಗೂ ಎಂ.ಎ. ಪದವಿಗಳನ್ನು ನಡೆಸಿಕೊಟ್ಟಿದೆ. ಪ್ರತಿವರ್ಷವೂ ಸಂಸ್ಥೆಯು ನಿಟ್ಟೆ ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ಆಯೋಜಿಸಿಕೊಂಡು ಬರುತ್ತಿದೆ. ಸಂಸ್ಥೆಯು ಆಯೋಜಿಸುವ ವಿವಿಧ ಕಾರ್ಯಾಗಾರಗಳಲ್ಲಿ ಉದ್ಯಮದ ಖ್ಯಾತನಾಮ ಪರಿಣಿತರು ಭಾಗವಹಿಸಿ ಮಾರ್ಗದರ್ಶನ ನೀಡುವುದು ವಿಶೇಷವಾಗಿದೆ.

ತರಗತಿಗಳು ಅಕ್ಟೋಬರ್ ಮೊದಲ ವಾರದಿಂದ ಆರಂಭಗೊಳ್ಳಲಿವೆ. ಕಾಲೇಜು ಹಾಗೂ ಕೋರ್ಸ್ ಬಗೆಗಿನ ಹೆಚ್ಚಿನ ಮಾಹಿತಿಗೆ ಪ್ರೊ.ರವಿರಾಜ್, ಮುಖ್ಯಸ್ಥರು, ನಿಟ್ಟೆ ಸಂವಹನ ಸಂಸ್ಥೆ, ಇವರನ್ನು ಮೊಬೈಲ್ ನಂಬರ್ ೭೦೨೨೪ ೯೪೨೦೨ ಸಂಖ್ಯೆಗೆ ಸಂಪರ್ಕಿಸಬಹುದು. ಸಂಸ್ಥೆಯ ವೆಬ್‌ಸೈಟ್ nico.nitte.edu.in ಗೆ ಭೇಟಿ ನೀಡಬಹುದು.

Leave a Reply

Your email address will not be published. Required fields are marked *