ನಂದಿನಿ ಮೈಸೂರು
ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರ್ನಾಟಕ ವಿಧಾನಸಭಾ ಚುನಾವಣೆಯ ಕೊನೆಯ ಚುನಾವಣಾ ಪ್ರಚಾರ ಮೇ 7 ರಂದು ನಂಜನಗೂಡು ತಾಲ್ಲೂಕಿನ ಎಲಚಿಗೆರೆ ಬೋರೆ ಗ್ರಾಮದಲ್ಲಿ ನಡೆಯಲಿದೆ ಎಂದು ಬಿಜೆಪಿ ಮೈಸೂರು ವಿಭಾಗ ಪ್ರಭಾರಿ ಮೈ.ವಿ ರವಿಶಂಕರ್ ತಿಳಿಸಿದರು.
ಶುಕ್ರವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರಿನ ವಿಭಾಗ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಸಂಜೆ 4 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೆಲಿಕಾಪ್ಟರ್ ಮೂಲಕ ಸಾರ್ವಜನಿಕ ಸಭೆ ನಡೆಯಲಿರುವ ಸ್ಥಳಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಭೆಯಲ್ಲಿ ಮೈಸೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳು ಹಾಗೂ ಚಾಮರಾಜನಗರ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಒಟ್ಟು 11 ಕ್ಷೇತ್ರಗಳಿಂದ ಸುಮಾರು ಒಂದು ಲಕ್ಷ ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುಮಾರು 2000 ಮಂದಿ ಪಕ್ಷದ ಕಾರ್ಯಕರ್ತರು ನಂಜನಗೂಡು ಹಾಗೂ ಗುಂಡ್ಲುಪೇಟೆಯಿಂದ ಬೈಕ್ ರ್ಯಾಲಿಯ ಮೂಲಕ ಮೋದಿ ಅವರ ಪ್ರಚಾರ ಸಭೆಗೆ ಆಗಮಿಸಲಿದ್ದಾರೆ ಎಂದು ಹೇಳಿದರು. ನಾನು ಜಿಲ್ಲೆ ಯಾದ್ಯಂತ ಪ್ರವಾಸ ಮಾಡಿದ್ದೇನೆ. ಎಲ್ಲಾ ಕಡೆ ಬಿಜೆಪಿಗೆ ಉತ್ತಮವಾದ ವಾತಾವರಣವಿದೆ ಬಿಜೆಪಿ ಮೈಸೂರು ನಗರದಲ್ಲಿ ಮಾತ್ರ ಇದೆ ಗ್ರಾಮೀಣ ಪ್ರದೇಶದಲ್ಲಿ ಇಲ್ಲ ಎಂದು ಕೆಲವರು ಹೇಳುತ್ತಿದ್ದರು. ಆದರೆ, ಈಗ ಗ್ರಾಮೀಣ ಪ್ರದೇಶದಲ್ಲೂ ಕೂಡ ಬಿಜೆಪಿಗೆ ಉತ್ತಮವಾದ ವಾತಾವರಣವಿದೆ. ಕಾರ್ಯಕರ್ತರಲ್ಲಿ ಉತ್ಸಾಹ ಇದೆ.ಬಿಜೆಪಿ ಅಭ್ಯರ್ಥಿಗಳಿಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಹೇಳಿದರು. ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಸಚಿವ ವಿ ಸೋಮಣ್ಣನವರು ಗೆಲುವು ಸಾಧಿಸುವುದು ನಿಶ್ಚಿತ. ವಿಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕ್ಷೇತ್ರದಲ್ಲಿ ಸೋಲಿನ ಛಾಯೆ ಇದೆ. ಸಿದ್ದರಾಮಯ್ಯನವರು ಇಲ್ಲಿಯತನಕ ಚುನಾವಣೆಗಳಲ್ಲಿ ತಮ್ಮ ಪರವಾಗಿ ಯಾವುದೇ ಚಿತ್ರನಟರನ್ನು ಕರೆದುಕೊಂಡು ಬಂದು, ಚುನಾವಣಾ ಪ್ರಚಾರವನ್ನು ನಡೆಸಿರಲಿಲ್ಲ.ಆದರೆ ಈಗ ಚಿತ್ರನಟರನ್ನು ಕರೆದುಕೊಂಡು ಬಂದು, ತಮ್ಮ ಪರವಾಗಿ ಚುನಾವಣಾ ಪ್ರಚಾರವನ್ನು ಮಾಡಿಸುತ್ತಿದ್ದಾರೆ.ಅಲ್ಲದೆ ತಮ್ಮ ಕುಟುಂಬದವರನ್ನು ಕೂಡ ಚುನಾವಣಾ ಪ್ರಚಾರಕ್ಕೆ ಇಳಿಸಿದ್ದಾರೆ. ಇದೆಲ್ಲ ನೋಡಿದರೆ ಅವರಿಗೆ ಸೋಲಿನ ಭೀತಿ ಆವರಿಸಿದೆ ಎಂದು ಗೊತ್ತಾಗುತ್ತಿದೆ. ಬಿಜೆಪಿಗೆ ವರುಣ ಕ್ಷೇತ್ರದಲ್ಲಿ ಎಲ್ಲಾ ಸಮಾಜ ವರ್ಗದವರು ವರ್ಗದ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.ವಿ ಸೋಮಣ್ಣನವರು ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದಂತೆ ವರುಣ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಾರೆ. ಹಾಗಾಗಿ ಅವರನ್ನು ಗೆಲ್ಲಿಸಿ ಕೊಡಬೇಕೆಂದು ಮನವಿ ಮಾಡಿದರು. ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ.ಪಕ್ಷದ ಅಭ್ಯರ್ಥಿ ಸಂದೇಶ್ ಸ್ವಾಮಿಯವರು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಕೂಡ ಪಕ್ಷದ ಅಭ್ಯರ್ಥಿಗೆ ಜನರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.ಕೆಆರ್ ಕ್ಷೇತ್ರ ಹಾಗೂ ಚಾಮರಾಜ ಕ್ಷೇತ್ರದಲ್ಲೂ ಕೂಡ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನವರು ತಮ್ಮ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿರುವುದು ಹಿಂದುಗಳನ್ನು ಹಾಗೂ ಬಜರಂಗದಳದವರನ್ನು ಕೆರಳಿಸಿದೆ. ಬಜರಂಗದಳದವರು ಯಾವುದೇ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡಿಲ್ಲ. ಸಮಾಜ ಘಾತುಕ ಕೆಲಸ ಕಾರ್ಯಗಳನ್ನು ಮಾಡಿಲ್ಲ ಹೀಗಿದ್ದರೂ ಕಾಂಗ್ರೆಸ್ ನವರು ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿರುವುದು ಮುಠಾಳತನದ ಕೆಲಸವಾಗಿದೆ. ಜನರು ಅವರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ. ಶ್ರೀರಾಮ ಹಾಗೂ ಹನುಮಾನ ನಾಡಿನಲ್ಲಿ ಅವರ ಭಕ್ತರ ಮೇಲೆ ಕಾಂಗ್ರೆಸ್ ನವರು ಈ ರೀತಿಯ ನಿಷೇಧದ ಧೋರಣೆ ತರುತ್ತಿರುವುದು ಸರಿ ಇಲ್ಲ,ಅದರ ಪರಿಣಾಮವನ್ನು ಈ ಚುನಾವಣೆಯಲ್ಲಿ ಅವರು ಎದುರಿಸಲಿದ್ದಾರೆ ಎಂದರು. ಬಿಜೆಪಿಯರು ಶಾಂತಿ ಪ್ರಿಯರು. ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸದ ಮೇಲೆ ಮತ ಕೇಳುತ್ತಿದ್ದಾರೆ. ಹೀಗಿದ್ದರೂ ಕೂಡ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು, ವರುಣ ಕ್ಷೇತ್ರದಲ್ಲಿ ದಲಿತ ಯುವಕನ ಕೊಲೆ ಮಾಡಿ, ಬಿಜೆಪಿಯವರು ವೋಟು ಪಡೆಯಲು ಹೊರಟಿದ್ದಾರೆ ಎಂದು ಹೇಳಿಕೆ ನೀಡಿರುವುದು, ಕ್ಷೇತ್ರದಲ್ಲಿ ಶಾಂತಿ ಕದಡುವ ಪ್ರಯತ್ನವಾಗಿದೆ. ಇದು ಬಿಜೆಪಿ ವಿರುದ್ಧ ಮಾಡುತ್ತಿರುವ ಕುತಂತ್ರ ಹಾಗೂ ಅಪಪ್ರಚಾರವಾಗಿದೆ. ಅವರ ಈ ಹೇಳಿಕೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು ಎಚ್. ವಿಶ್ವನಾಥ್ ಬಿಜೆಪಿಯಿಂದ ವಿಧಾನ ಪರಿಷತ್ ಸ್ಥಾನಮಾನವನ್ನು ಪಡೆದಿದ್ದಾರೆ. ಆದರೂ ಕೂಡ ಅವರು ಪಕ್ಷದ ಪರವಾಗಿ ಇಲ್ಲ. ಪಕ್ಷ ವಿರೋಧಿ ಚಟುವಟಿಕೆಗಳನ್ನೇ ಮಾಡುತ್ತಿದ್ದಾರೆ, ಹಾಗಾಗಿ ಪಕ್ಷ ಬಿಟ್ಟು ಹೋಗಲಿ ಎಂದು ಹೇಳಿದರು .
ಸುದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಸಹ ವಕ್ತಾರ ಡಾ. ಕೆ ವಸಂತಕುಮಾರ್ ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಸಹ ವಕ್ತಾರ ಕೇಬಲ್ ಮಹೇಶ್ ಉಪಸ್ಥಿತರಿದ್ದರು.