ನಂದಿನಿ ಮೈಸೂರು
ಮೈಸೂರಿನ ಕುಪ್ಪಣ್ಣ ಪಾರ್ಕ್‌ನಲ್ಲಿ ಮೇ ೨೬ ರಿಂದ ೨೮ವರೆಗೆ ಮಾವು ಮೇಳ
ಮೈಸೂರಿನ ಕುಪ್ಪಣ್ಣ ಪಾರ್ಕ್‌ನಲ್ಲಿ ಮೇ ೨೬ ರಿಂದ ೨೮ರವರೆಗೆ ‘ಮಾವಿನ ಮೇಳ ಆಯೋಜಿಸಲಾಗಿದೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಕೆ.ರುದ್ರೇಶ್ ತಿಳಿಸಿದರು.
ಮೈಸೂರಿನ ಕರ್ಜನ್ ಪಾರ್ಕ್‌ನಲ್ಲಿರುವ ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ನೈಸರ್ಗಿಕ ಪದ್ಧತಿಯಲ್ಲಿ ಮಾಗಿಸಿದ ಹಾಗೂ ನೇರವಾಗಿ ರೈತರಿಂದ ವಿವಿಧ ತಳಿಯ ರುಚಿಕರವಾದ ಮಾವಿನಹಣ್ಣನ್ನು ಪೂರೈಸುವುದಕ್ಕಾಗಿ ತೋಟಗಾರಿಕಾ ಇಲಾಖೆ ವತಿಯಿಂದ ಪ್ರತಿವರ್ಷ ಮಾವಿನ ಮೇಳ ಆಯೋಜಿಸುತ್ತಾ ಬಂದಿದ್ದು, ಈ ಬಾರಿ ವಿಧಾನಸಭಾ ಚುನಾವಣೆ ಇದ್ದ ಕಾರಣ
ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಮಾವು ಬೆಳೆಗಾರರ ಸಭೆ ಕರೆದು ಮಾವು ಮೇಳದ ಬಗ್ಗೆ ಚರ್ಚಿಸಿ ಸಹಕಾರ ಕೋರಲಾಗಿತ್ತು.
ಜಿಲ್ಲೆಯಲ್ಲಿ ಬೆಳೆಯುವ ಅನೇಕ ತೋಟಗಾರಿಕೆ ಬೆಳೆಗಳಲ್ಲಿ ಮಾವು ಒಂದು ಪ್ರಮುಖ ತೋಟಗಾರಿಕೆ ಬೆಳೆಯಾಗಿದ್ದು, ಅಂದಾಜು ೭೬೦೦ ಎಕರೆ ವಿಸ್ತೀರ್ಣದಲ್ಲಿ ಬೆಳೆಯಾಗುತ್ತಿದ್ದು, ವಾರ್ಷಿಕ ಉತ್ಪಾದನೆ ಸರಾಸರಿ ೩೦ ರಿಂದ ೩೫ ಸಾವಿರ ಟನ್‌ಗಳಾಗಿದೆ. ಹೀಗಾಗಿ ಮಾವು ಬೆಳೆಯುವ ರೈತರಿಗೆ ಹಾಗೂ ಮಾವು ಸವಿಯುವ ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸಿ ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಹಾಗೂ ಗ್ರಾಹಕರಿಗೆ ಉತ್ತಮ ಬೆಲೆಯಲ್ಲಿ, ಮಾವು ದೊರಕಿಸಿಕೊಡುವ ದೃಷ್ಟಿಯಿಂದ ಈ ಮಾವು ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ೨೦ ಮಂದಿ ಮಾವು ಬೆಳೆಗಾರರು ಪಾಲ್ಗೊಳ್ಳುತ್ತಿದ್ದಾರೆ.
ಈ ಮೇಳದಲ್ಲಿ ೨೪ ಮಳಿಗೆಗಳಿದ್ದು
ಮೈಸೂರು, ಮಂಡ್ಯ, ರಾಮನಗರ, ಕನಕಪುರ ಜಿಲ್ಲೆಗಳಿಂದ ರೈತರು ಭಾಗವಹಿಸಲಿದ್ದಾರೆ.
ಮೇಳದಲ್ಲಿ ರತ್ನಗಿರಿ, ಅಲ್ಫಾನ್ಸೋ, ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಮಲ್ಲಿಕಾ, ಸೆಂದೂರ, ನೀಲಂ, ದಶೇರಿ ಸೇರಿದಂತೆ ವಿವಿಧ ತಳಿಯ ಮಾವಿನಹಣ್ಣುಗಳನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ರೈತರು ಬೆಳೆದ ಮಾವಿನ ಹಣ್ಣನ್ನು ನೈಸರ್ಗಿಕವಾಗಿ ಮಾಗಿಸಿದ ಬಳಿಕವಷ್ಟೇ ಮೇಳದಲ್ಲಿ ಮಾರಾಟ ಮಾಡಲಿದ್ದಾರೆ. ಯಾವುದೇ ರಾಸಾಯನಿಕ ವಸ್ತುಗಳ್ನು ಬಳಸಿ ಮಾಗಿಸಿದ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ನೈಸರ್ಗಿಕ ಪದ್ಧತಿಯಲ್ಲಿ ಹಣ್ಣುಗಳನ್ನು ಮಾಗಿಸುವುದಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಶಿಧರ್, ಸಹಾಯಕ ನಿರ್ದೇಶಕರಾದ ಅಶ್ವಿನಿ, ಸಬೀನಾ ಇದ್ದರು.