*ಮಣಿಪುರದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಸಮರ್ಥ ತಂತ್ರಗಳನ್ನು ರೂಪಿಸಿದ ಗೃಹ ಸಚಿವ ಅಮಿತ್ ಶಾ*
ಗೃಹ ಸಚಿವರಾಗಿ, ಅಮಿತ್ ಶಾ ಅವರು ತಮ್ಮ ಹಿಂದಿನ ಗೃಹಮಂತ್ರಿಗಳಿಗಿಂತ ತುಂಬಾ ಭಿನ್ನವಾಗಿ ನಿಲ್ಲುತ್ತಾರೆ. ಶಾರವರು ತಮ್ಮ ಸೌಖ್ಯ ವಲಯದಲ್ಲಿ ಕುಳಿತುಕೊಳ್ಳುವ ಬದಲು, ಯಾವುದೇ ಸಂಘರ್ಷವನ್ನು ಎದುರಿಸಲು ಮುಂದೆ ನಿಂತು ಮುನ್ನಡೆಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದಕ್ಕೆ ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರ ಅಥವಾ ಇತ್ತೀಚೆಗೆ ಮಣಿಪುರದಲ್ಲಿ ನಡೆದ ಘಟನೆಗಳೇ ಸಾಕ್ಷಿ.
ಮಣಿಪುರ ಏಕ-ಪೀಠ ಹೈಕೋರ್ಟಿನ ಅಪ್ರಿಯ ಆದೇಶದ ಪರಿಣಾಮವಾಗಿ ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಭುಗಿಲೆದ್ದ ಹಿಂಸಾಚಾರದ ಪರಿಣಾಮವಾಗಿ , ಗೃಹ ಸಚಿವರು ಆರಂಭದಲ್ಲಿ ದೆಹಲಿಯಿಂದಲೇ ಕಾರ್ಯಾಚರಣೆಗೆ ಧುಮುಕಿದರು. ಈ ಕಾರಣ ಚುನಾವಣೆಗೆ ಎದುರಿಸುತ್ತಿದ್ದ ಕರ್ನಾಟಕದಲ್ಲಿ ಮೊದಲೇ ನಿರ್ಧರಿಸಿದ್ದ ಪ್ರಮುಖ ಚುನಾವಣಾ ರ್ಯಾಲಿಗಳನ್ನು ರದ್ದು ಮಾಡಿದರು. ಉದ್ವಿಗ್ನತೆ ಶಮನಗೊಳ್ಳುವ ಯಾವುದೇ ಲಕ್ಷಣಗಳು ಕಾಣದಿದ್ದಾಗ, ಎಲ್ಲಾ ಅಡೆತಡೆಗಳನ್ನು ಧಿಕ್ಕರಿಸಿ ಶಾ ರಾಜ್ಯಕ್ಕೆ ನಾಲ್ಕು ದಿನಗಳ ಭೇಟಿಯನ್ನು ಕೈಗೊಂಡರು. ಮತ್ತು, ನಿರೀಕ್ಷೆಯಂತೆ, ಸಂಘರ್ಷ ಪೀಡಿತ ಮಣಿಪುರದಲ್ಲಿ ಅವರ ವಾಸ್ತವ್ಯದ ಸಮಯದಲ್ಲಿ ಶಾಂತಿ ಪುನಃಸ್ಥಾಪನೆಯಾಯಿತು.
ಸಂಘರ್ಷದ ಕೇಂದ್ರವಾದ ಚುರಚಂದ್‌ಪುರಕ್ಕೆ ತೆರಳುವ ಮುನ್ನ ಶಾ ಅವರು ಪ್ರಮುಖ ವ್ಯಕ್ತಿಗಳು, ಬುದ್ಧಿಜೀವಿಗಳು, ನಿವೃತ್ತ ಸೇನಾ ಅಧಿಕಾರಿಗಳು ಮತ್ತು ನಾಗರಿಕ ಸೇವಕರ ಗುಂಪಿನೊಂದಿಗೆ ಸಂವಾದ ನಡೆಸಿದರು. ನಂತರ ಸಂಜೆ ಇಂಫಾಲದಲ್ಲಿ ಸರ್ವಪಕ್ಷ ಸಭೆ ನಡೆಸಿದರು. ಗೃಹ ಸಚಿವರು ಮಣಿಪುರ ಪೊಲೀಸ್, ಸಿಎಪಿಎಫ್ ಮತ್ತು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮಣಿಪುರದ ಶಾಂತಿ ಮತ್ತು ಸಮೃದ್ಧಿಯನ್ನು ಮರುಸ್ಥಾಪಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ ಅವರು, ಶಾಂತಿ ಕದಡುವ ಯಾವುದೇ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಎದುರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಣಿಪುರಕ್ಕೆ ಭೇಟಿ ನೀಡಿದ ಮೂರನೇ ದಿನದಂದು, ಶಾರವರು ಮೋರೆ ಮತ್ತು ಕಾಂಗ್‌ಪೊಕ್ಪಿಗೆ ಭೇಟಿ ನೀಡಿದರು ಮತ್ತು ನಾಗರಿಕ ಸಮಾಜ ಸಂಘಟನೆಗಳೊಂದಿಗೆ ಚರ್ಚೆ ನಡೆಸಿದರು. ಅವರು ಮೊರೆಯಲ್ಲಿ ಹಿಲ್ ಟ್ರೈಬಲ್ ಕೌನ್ಸಿಲ್, ಕುಕಿ ವಿಧ್ಯಾರ್ಥಿ ಸಂಘ, ಕುಕಿ ಚೀಫ್ಸ್ ಅಸೋಸಿಯೇಷನ್, ತಮಿಳು ಸಂಗಮ್, ಗೂರ್ಖಾ ಸಮಾಜ ಮತ್ತು ಮಣಿಪುರಿ ಮುಸ್ಲಿಂ ಕೌನ್ಸಿಲ್‌ನ ನಿಯೋಗವನ್ನು ಭೇಟಿಯಾದರು. ನಂತರ ಹಿರಿಯ ಅಧಿಕಾರಿಗಳಿಂದ ಭದ್ರತಾ ಪರಿಸ್ಥಿತಿಗಳ ಕುರಿತು ಬ್ರೀಫಿಂಗ್ ಪಡೆದರು. ಇಂಫಾಲ್‌ನಲ್ಲಿ ಮೈತೈ ಸಮುದಾಯದ ಸದಸ್ಯರು ನೆಲೆಸಿರುವ ಪರಿಹಾರ ಶಿಬಿರಕ್ಕೂ ಶಾ ಭೇಟಿ ನೀಡಿ, ಅವರು ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತಗೆದುಕೊಂಡರು.
ಕೇಂದ್ರ ಸರ್ಕಾರವು ಗೃಹ ಸಚಿವ ಶಾರವರ ಮೇಲೆ ನಂಬಿಕೆ ಇಟ್ಟು ಪರಸ್ಪರ ಕಾದಾಡುತ್ತಿರುವ ಸಮುದಾಯಗಳ ಮಧ್ಯೆ ಶಾಂತಿ ಸ್ಥಾಪಿಸುವ ಸೂಕ್ಷ್ಮ ಕೆಲಸವನ್ನು ವಹಿಸಿಕೊಟ್ಟಿತು. ಈ ತರಹದ ಕಷ್ಟದ ಸಂದರ್ಭಗಳಲ್ಲಿ ಭರವಸೆಯ ಕಿರಣಗಳಂತೆ ಕಾಣುವ ಅಮಿತ್ ಶಾ ಈ ಹಿಂದೆಯೂ ಇಂತಹ ಕೃತ್ಯಗಳನ್ನು ಬಗೆಹರಿಸಿದ ಸಾಕಷ್ಟು ನಿದರ್ಶನಗಳಿವೆ. ಎರಡೂ ಕಡೆಯ ಪ್ರತಿನಿಧಿಗಳು ಶಾ ಅವರಲ್ಲಿ ನಂಬಿಕೆಯನ್ನು ತೋರಿಸಿದ್ದರ ಪರಿಣಾಮ, ಅವರು ಅಲ್ಲಿನ ಪರಿಸ್ಥಿತಿಯ ಬಗ್ಗೆ ಎರಡು ಸಮುದಾಯಗಳ ದೃಷ್ಟಿಕೋನಗಳನ್ನು ಯಶಸ್ವಿಯಾಗಿ ಬದಲಾಯಿಸಿದರು. ಜೀವನೋಪಾಯ ಮತ್ತು ಭದ್ರತೆಯ ಕುರಿತಾದ ಅವರ ಕಳವಳಗಳ ಬಗ್ಗೆಯೂ ಶಾ ಚರ್ಚೆ ನಡೆಸಿದರು. ಈ ಪರಿಸ್ಥಿತಿಲ್ಲಿಯೂ ಸಹ ಅಮಿತ್ ಶಾ ,ಶಿಕ್ಷಣ, ನ್ಯಾಯಾಲಯ ಮುಂತಾದ ಸೂಕ್ಷ್ಮ ವಿಷಯಗಳ ಬಗ್ಗೆ ಗಮನ ಹರಿಸಿದ್ದು, ಅವರ ಜನ-ಕೇಂದ್ರಿತ ಆಡಳಿತ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ.
ಮಣಿಪುರ ರಾಜ್ಯಪಾಲರ ನೇತೃತ್ವದಲ್ಲಿ ಶಾಂತಿ ಸಮಿತಿ ರಚಿಸಲಾಗುವುದು. ಪಕ್ಷಪಾತ ಮತ್ತು ತಾರತಮ್ಯವಿಲ್ಲದೆ ತನಿಖೆ ನಡೆಸಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ವಿದ್ಯಾರ್ಥಿಗಳ ನೆರವಿಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಮೃತರ ಕುಟುಂಬ ಸದಸ್ಯರಿಗೆ 10 ಲಕ್ಷ ಪರಿಹಾರ ನೀಡಲಾಗುವುದು. ವಿಶೇಷ ವೈದ್ಯಕೀಯ ಅಧಿಕಾರಿಗಳು ಹಿಂಸಾಚಾರದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಿದ್ದಾರೆ ಎಂದು ಹೇಳಿದರು.