ಪಿರಿಯಾಪಟ್ಟಣ:21 ಜುಲೈ 2022
ಸತೀಶ್ ಆರಾಧ್ಯ / ನಂದಿನಿ ಮೈಸೂರು
ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಎ.ರವಿಶಂಕರ್ ತಿಳಿಸಿದರು.
ತಾಲ್ಲೂಕಿನ ಕೊಪ್ಪ ಗ್ರಾಮದ ಭಾರತಮಾತಾ ವಿದ್ಯಾಸಂಸ್ಥೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ನಡೆದ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಗಾಂಜಾ ಅಫೀಮು ಕೊಕೇನ್ ಸೇರಿದಂತೆ ಇತರೆ ಮಾದಕ ವಸ್ತುಗಳ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಮಾದಕ ವಸ್ತು ವ್ಯಸನಿಗಳು ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸುವಂತೆ ತಿಳಿಸಿದರು.
ಹುಣಸೂರು ಉಪವಿಭಾಗ ಅಧೀಕ್ಷಕರಾದ ಕೆ.ಟಿ ವಿಜಯ್ ಕುಮಾರ್ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಕಲಿಕೆಗೆ ಹೆಚ್ಚು ಒತ್ತು ನೀಡಿ ಮಾದಕ ವಸ್ತುಗಳ ಸೇವನೆಯಿಂದ ದೂರವಿರುವಂತೆ ತಿಳಿಸಿದರು.
ಪಿರಿಯಾಪಟ್ಟಣ ವಲಯ ನಿರೀಕ್ಷಕ ಎಂ.ಎ ಧರ್ಮರಾಜ್ ಅವರು ಮಾತನಾಡಿ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕರಿಸುವಂತೆ ಕೋರಿದರು.
ಭಾರತ್ ಮಾತಾ ವಿದ್ಯಾಸಂಸ್ಥೆಯ ಉಪನ್ಯಾಸಕ ಜ್ಞಾನೇಶ್, ಫಾದರ್ ಥೊಮಸ್ ಮಾತನಾಡಿದರು, ಕಲಾ ತಂಡದಿಂದ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿತೆ ನೀಡಿ ಅರಿವು ಹಾಗೂ ಮಾದಕ ವಸ್ತುಗಳಿಂದ ದೂರವಿರುವಂತೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸಂದರ್ಭ ಹುಣಸೂರು ಉಪವಿಭಾಗ ಕಚೇರಿ ನಿರೀಕ್ಷಕಿ ಸುಧಾರಾಣಿ, ವಲಯ ನಿರೀಕ್ಷಕ ನಾಗಲಿಂಗಸ್ವಾಮಿ, ಉಪ ನಿರೀಕ್ಷಕ ಸುರೇಶ್, ಪಿರಿಯಾಪಟ್ಟಣ ವಲಯದ ಉಪ ನಿರೀಕ್ಷಕರಾದ ಎಂ.ಜೆ ರಘು, ಎಚ್.ಎಸ್ ಲಕ್ಷ್ಮಿ, ಸಿಬ್ಬಂದಿ ಸ್ವಾಮಿಗೌಡ, ಶ್ರೀನಿವಾಸ್ ಮೂರ್ತಿ, ಕೃಷ್ಣ, ಹರೀಶ್, ಆಸಿಫ್, ಚನ್ನಕೇಶವ, ಭಾಸ್ಕರ್ ಹಾಗು ವಿದ್ಯಾರ್ಥಿಗಳು ಇದ್ದರು.