ಮಹದೇವ / ನಂದಿನಿ ಮೈಸೂರು
ತಿ.ನರಸೀಪುರ.ಡಿ.21 -ತಾಲ್ಲೂಕಿನಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬುಧವಾರ ಸಹ ಕೂಲಿ ಕಾರ್ಮಿಕನೊಬ್ಬನ ಮೇಲೆ ದಾಳಿ ನಡೆಸಿ ಗಾಯ ಗೊಳಿಸಿರುವ ಘಟನೆ ತಾಲೂಕಿನ ಗೊರವನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ತಾಲೂಕಿನ ಬನ್ನೂರು ಹೋಬಳಿ ಗೊರವನಹಳ್ಳಿ ಗ್ರಾಮದ ನಿಂಗೇಗೌಡ ಬಿನ್ ಜವರೇಗೌಡ (55) ಎಂಬ ವ್ಯಕ್ತಿ ಚಿರತೆ ದಾಳಿಯಿಂದ ಗಾಯಗೊಂಡಿದ್ದು,ಪ್ರಾಣಪಾಯದಿಂದ ಪಾರಾಗಿದ್ದಾನೆ.
ಕೂಲಿ ಕಾರ್ಮಿಕನಾದ ಈತ ಲಿಂಗರಾಜು ಎಂಬುವರ ಕಬ್ಬಿನ ಗದ್ದೆಯಲ್ಲಿ ಕಬ್ಬಿನ ಗದ್ದೆಯ ಸೋಗಿಗೆ ಬೆಂಕಿ ಹಾಕಲು ಹೋಗಿದ್ದ ಸಮಯದಲ್ಲಿ ಮಾವಿನ ತೋಪಿನ ಕಡೆಯಿಂದ ಏಕಾ ಏಕಿ ಚಿರತೆ ದಾಳಿ ನಡೆಸಿದೆ.ಚಿರತೆ ದಾಳಿಯಿಂದ ಧೃತಿಗೆಡದ ನಿಂಗೇಗೌಡ
ಕೈಯಲ್ಲಿದ್ದ ಕುಡುಗೋಲಿನಿಂದ ಚಿರತೆಗೆ ಹೊಡೆದು ಚಿರತೆಯನ್ನು ಹಿಮ್ಮೆಟ್ಟಿಸಿದ್ದಾನೆ.
ಚಿರತೆ ದಾಳಿಯಿಂದ ಅಲ್ಪ ಸ್ವಲ್ಪ ಗಾಯಗಳಾದ ಈತನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬನ್ನೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ,ಹೆಚ್ವಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿ ಚಿರತೆಯ ಹೆಜ್ಜೆ ಗುರುತು ಪತ್ತೆಹಚ್ಚಲು ಮುಂದಾದರಾದರೂ ಯಾವುದೇ ಸುಳಿವು ದೊರಕಲಿಲ್ಲ.ಒಟ್ಟಾರೆ ತಾಲೂಕಿನಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜನತೆ ಜೀವ ಭಯದಿಂದ ತತ್ತರಿಸಿಹೋಗಿದ್ದಾರೆ.ಅಕ್ಟೋಬರ್31 ರಂದು ಮೊದಲ ಬಾರಿಗೆ ವಿದ್ಯಾರ್ಥಿ ಮಂಜುನಾಥ್ ಎಂಬಾತನನ್ನು ಎಂ.ಎಲ್.ಹುಂಡಿ ಮಲ್ಲಪ್ಪನ ಬೆಟ್ಟದ ರಸ್ತೆಯಲ್ಲಿ ಬಲಿ ಪಡೆದಿದ್ದ ಚಿರತೆ,ಡಿಸೆಂಬರ್ 1 ರಂದು ಎಸ್.ಕೆಬ್ಬೇಹುಂಡಿ ಗ್ರಾಮದ ವಿದ್ಯಾರ್ಥಿನಿ ಮೇಘನಾಳನ್ನು ಅವರ ಮನೆಯ ಹಿತ್ತಲಿನಲ್ಲೇ ಕೊಂದು ಹಾಕಿತ್ತು.ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಬೋನುಗಳನ್ನು ಅಳವಡಿಸಿ,ಡ್ರೋಣ್ ಕ್ಯಾಮರಾ ಮೂಲಕ ಆಧುನಿಕ ತಂತ್ರಜ್ಞಾನ ಬಳಸಲಾಗಿತ್ತಾದರೂ ಚಿರತೆ ಸೆರೆ ಸಿಗದೇ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಮನುಷ್ಯ ಹಾಗು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವುದರಿಂದ ಅರಣ್ಯಾಧಿಕಾರಿಗಳು ಹಾಗು ತಾಲೂಕಿನ ಜನತೆಯ ನಿದ್ದೆಗೆಡುವಂತೆ ಮಾಡಿದೆ.