ಹುಣಸೂರು:23 ಆಗಸ್ಟ್ 2021
ಜಮೀನಿನ ಖಾತೆ ಮಾಡಿಕೊಡಲು ರೈತನಿಂದ ಲಂಚ ಪಡೆಯುತ್ತಿದ್ದ ವೇಳೆಯೇ ಗ್ರಾಮಲೆಕ್ಕಿಗನೋರ್ವ ಬ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿ ಬಿದ್ದಿರುವ ಹುಣಸೂರಿನಲ್ಲಿ ಶನಿವಾರ ಸಂಜೆ ನಡೆದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಹುಣಸೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮಲೆಕ್ಕಾಧಿಕಾರಿ ಮಂಜುನಾಥ್ ಬಂದಿತ ಆರೋಪಿ. ತಾಲೂಕಿನ ಕಸಬಾ ಹೋಬಳಿಯ ಮಧುಗಿರಿ ಕೊಪ್ಪಲಿನ ಲೇ.ಶಿವನಂಜಾಚಾರಿ ಪುತ್ರ ಬೋಗಾಚಾರಿ ದೂರು ನೀಡಿರುವ ರೈತ.
ಆಗಿರೋದಿಷ್ಟು: ಬೋಗಾಚಾರಿಯವರು ಜು.೨ ರಂದು ಬನ್ನಿಕುಪ್ಪೆ ಗ್ರಾಮದಲ್ಲಿನ ತಮ್ಮ ೨.೮ ಎಕರೆ ಜಮೀನಿನ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಗೆ ಸಂಬಂಧಿಸಿದಂತೆ ಗ್ರಾಮಲೆಕ್ಕಾಧಿಕಾರಿ ಮಂಜುನಾಥರನ್ನು ಜು.೨೩ ರಂದು ಭೇಟಿ ಮಾಡಿದ ವೇಳೆ ದಾಖಲಾತಿಗಳು ಹಾಜರು ಪಡಿಸುವಂತೆ ತಿಳಿಸಿ, ಅಂದೇ ವಿ.ಎ.ಮಂಜುನಾಥ್ ಬೋಗಾಚಾರಿಯವರಿಂದ ೨ ಸಾವಿರ ಹಣ ಪಡೆದಿದ್ದರು.
ಖಾತೆ ಆಗದಿದ್ದರಿಂದ ಆ.೧೮ ರಂದು ಮತ್ತೆ ಭೇಟಿ ಮಾಡಿ ಜಮೀನಿನ ಖಾತೆ ಮಾಡಿಕೊಡುವಂತೆ ಬೋಗಾಚಾರಿಯವರು ಕೋರಿದಾಗ ೧೦ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ನಂತರ ೭ ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಿ ಬೋಗಾಚಾರಿಯವರು ಮೈಸೂರು ಎಸಿಬಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆ.೨೧ ರಂದು ತಾಲೂಕು ಕಚೇರಿ ಬಳಿ ರೈತ ಬೋಗಾಚಾರಿಯವರಿಂದ ೭ ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಬಿ ಎಸ್.ಪಿ. ಅರಣಾಂಶುಗಿರಿಯವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಪರಶುರಾಮಪ್ಪ, ಇನ್ಸ್ ಪೆಕ್ಟರ್‌ಗಳಾದ ಕರೀಂರಾವತರ್, ಮೋಹನಕೃಷ್ಣ, ಸಿಬ್ಬಂದಿಗಳಾದ ಗುರುಪ್ರಸಾದ್, ಪುಷ್ಪಲತಾ, ಯೋಗೀಶ್, ಮಂಜುನಾಥ್, ನಾಗೇಶ್, ಚೇತನ್ ಭಾಗವಹಿಸಿದ್ದರು.