ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಇನ್ನಿಲ್ಲ

ನಂದಿನಿ ಮೈಸೂರು

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಇನ್ನಿಲ್ಲ.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ (62)ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಥಿಸಲು ತಯಾರಿ ನಡೆಸುತ್ತಿದ್ದರು.ಮೈಸೂರಿನ ಡಿಆರ್ ಎಂ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು ಸಹ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.31 ಜುಲೈ 1961 ರಂದು ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ಜನಿಸಿದ್ದ ದ್ರುವನಾರಾಯಣ್ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು ನಂತರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ ಪಡೆದುಕೊಂಡಿದ್ದರು.1983ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ದ್ರುವನಾರಾಯಣ್ ಕಾಂಗ್ರೇಸ್ ಪಕ್ಷದ ಕಾರ್ಯಕರ್ತನಾಗಿ ಸೇರಿಕೊಂಡರು.1999ರಲ್ಲಿ ಸಂತೇಮರಳ್ಳಿಯಿಂದ ಸ್ಪರ್ಧಿಸಿದ್ದರು.2004ರಲ್ಲಿ ಕೃಷ್ಣಮೂರ್ತಿರವರ ವಿರುದ್ದ 1 ಮತದಿಂದ ಗೆದ್ದಿದ್ದರು.ಎರಡು ಬಾರಿ ಶಾಸಕರಾಗಿದ್ದರು.2009-2014 ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಇನ್ನಿಲ್ಲ

ಆರ್.ಧ್ರುವನಾರಾಯಣ್ ಅವರು ರಾಜ್ಯ ರಾಜಕಾರಣದಲ್ಲಿ ಧ್ರುವತಾರೆಯಾಗಿ ಮಿನುಗುತ್ತಿದ್ದವರು. ಅವರ ಅಕಾಲಿಕ ನಿಧನ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಅವರ ನಿಧನಕ್ಕೆ ಸಂತಾಪವನ್ನು ಸೂಚಿಸುತ್ತ, ಧ್ರುವನಾರಾಯಣ್ ಅವರು ರಾಜಕೀಯವಾಗಿ ನಡೆದು ಬಂದ ಹಾದಿಯನ್ನೊಮ್ಮೆ ಅವಲೋಕಿಸೋಣ.

ಚಾಮರಾಜನಗರ ತಾಲ್ಲೂಕಿನ ದಲಿತ ಮುಖಂಡರಾಗಿದ್ದ ಹೆಗ್ಗವಾಡಿ ಗ್ರಾಮದ ದಿ.ರಂಗಸ್ವಾಮಿಯವರ ಪುತ್ರರಾಗಿ
ಆರ್.ಧ್ರುವನಾರಾಯಣ್ ಅವರು 1961 ಜುಲೈ 31ರಂದು ಜನಿಸಿದರು.ದ್ರುವನಾರಾಯಣ್ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು ನಂತರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ ಪಡೆದುಕೊಂಡಿದ್ದರು. ವಿದ್ಯಾರ್ಥಿಯಾಗಿರುವಾಗಲೇ ನಾಯಕರಾಗಿ ಹೊರಹೊಮ್ಮಿದ್ದರು. 1983 ರಲ್ಲಿ ಬೆಂಗಳೂರು ಕೃಷಿ ವಿವಿ ವಿದ್ಯಾರ್ಥಿ ನಾಯಕರಾಗಿದ್ದ ಧ್ರುವನಾರಾಯಣ್ ಅವರು NSUI ಅಧ್ಯಕ್ಷರಾದರು. 1986 ರಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದರು. 1993 ರಲ್ಲಿ ದಿವಂಗತ ಬಿ.ಬಸಲಿಂಗಪ್ಪ ಅವರು ನಿಧನರಾದಾಗ ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದರು. ಇವರ ಪರವಾಗಿ ಆಸ್ಕರ್ ಫರ್ನಾಂಡೀಸ್, ಬಿ.ಬಸಲಿಂಗಪ್ಪ ಪುತ್ರ ಪ್ರಸನ್ನಕುಮಾರ್ ಪರವಾಗಿ ಜಾಫರ್ ಷರೀಫ್ ಅವರು ತೀವ್ರ ಪ್ರಯತ್ನ ನಡೆಸಿದ್ದರು. ಅಂತಿಮವಾಗಿ ಬಸಲಿಂಗಪ್ಪ ಅವರ ಪುತ್ರ ಪ್ರಸನ್ನಕುಮಾರ್ ಅವರಿಗೆ ಟಿಕೆಟ್ ದೊರೆತು ಗೆಲುವನ್ನೂ ಸಾಧಿಸಿದರು.

ಆದಾಗ್ಯೂ ಧ್ರುವನಾರಾಯಣ್ ಅವರು 1996 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ಗೆ ಪ್ರಯತ್ನಿಸಿ ವಿಫಲರಾದರು. 1999 ರ ವಿಧಾನಸಭಾ ಚುನಾವಣಾ ವೇಳೆಗೆ ತಮ್ಮ ರಾಜಕೀಯ ಗುರುಗಳಾದ ಎಂ.ರಾಜಶೇಖರ ಮೂರ್ತಿ ಅವರನ್ನು ಹಿಂಬಾಲಿಸಿ ಬಿಜೆಪಿ ಸೇರ್ಪಡೆಗೊಂಡು, ಆ ಪಕ್ಷದಿಂದ ಸಂತೆಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದರು. ಆ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿದ್ದ ಎ.ಆರ್.ಕೃಷ್ಣಮೂರ್ತಿ ಅವರ ವಿರುದ್ಧ 5906 ಮತಗಳಿಂದ ಪರಾಭವಗೊಂಡರು. 2004 ರ ವೇಳೆಗೆ ಮತ್ತೆ ಕಾಂಗ್ರೆಸ್ ಸೇರ್ಪಡೆಗೊಂಡ ಧ್ರುವನಾರಾಯಣ್ ಅವರು, ಸಂತೆಮರಹಳ್ಳಿ ಕ್ಷೇತ್ರದಿಂದಲೇ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಧ್ರುವನಾರಾಯಣ್ ಅವರು 40752 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಜೆಡಿಎಸ್ ನ ಎ.ಆರ್.ಕೃಷ್ಣಮೂರ್ತಿ 40751 ಮತಗಳನ್ನು ಪಡೆದು ಸೋತರು. ಈ ಫಲಿತಾಂಶ ಇಡೀ ರಾಷ್ಟ್ರದಲ್ಲೇ ದೊಡ್ಡ ಸಂಚಲನ ಮೂಡಿಸಿತ್ತು. 2008 ರ ಚುನಾವಣಾ ವೇಳೆಗೆ ಸಂತೆಮರಹಳ್ಳಿ ಕ್ಷೇತ್ರ ವಿಂಗಡಣೆಯಾಗಿದ್ದರಿಂದ ಧ್ರುವನಾರಾಯಣ್ ಕೊಳ್ಳೇಗಾಲ ಕ್ಷೇತ್ರದತ್ತ ಮುಖ ಮಾಡಿದರು. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. 2009 ರ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ, ವಿ.ಶ್ರೀನಿವಾಸಪ್ರಸಾದ್ ಹಾಗೂ ಎಂಟು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಶಾಸಕರ ಒತ್ತಾಯದ ಮೇರೆಗೆ ಲೋಕಸಭೆಗೆ ಸ್ಪರ್ಧಿಸಿ ಎದುರಾಳಿಯಾಗಿದ್ದ ಬಿಜೆಪಿ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಸೋಲಿಸಿ ಸಂಸದರಾದರು. 2014 ರ ಲೋಕಸಭಾ ಚುನಾವಣೆಯಲ್ಲಿಯೂ ಗೆದ್ದರು. 2018 ರಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ 2000 ಮತಗಳ ಅಂತರದಿಂದ ಸೋಲನುಭವಿಸಿದ್ದರು.
ಆದರೂ ಕಾಂಗ್ರೆಸ್ ಪಕ್ಷ ಇವರನ್ನು ಸಂಘಟನೆಯ ದೃಷ್ಟಿಯಿಂದ ವಕ್ತಾರರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಿಸಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಎರಡು ಸಲ ಶಾಸಕರಾಗಿ(ಒಮ್ಮೆ ಒಂದು ವರ್ಷದ ಅವಧಿಗೆ ಕೊಳ್ಳೇಗಾಲ ಶಾಸಕರು) ಎರಡು ಬಾರಿ ಸಂಸದರಾಗಿದ್ದು ಮಾತ್ರವಲ್ಲದೆ, ಬೆಂಗಳೂರು ಕೃಷಿ ವಿವಿ ಸಿಂಡಿಕೇಟ್ ಸದಸ್ಯರಾಗಿ, ಕಾವೇರಿ ಗ್ರಾಮೀಣ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರಾಗಿ, ಯುಪಿಎ-೨ ಅವಧಿಯಲ್ಲಿ ವಿವಿಧ ಇಲಾಖೆಗಳ ಹಲವು ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.ನೆನ್ನೆ ಬೆಳಗ್ಗೆಯಿಂದ ರಾತ್ರಿ 9 ಗಂಟೆಯವರಗೆ ನಂಜನಗೂಡಿನಲ್ಲಿ ಸಭೆ ನಡೆಸಿದ್ದ ಆರ್.ದ್ರುವನಾರಾಯಣ್ ರವರು ಇಂದು ಮುಂಜಾನೆ ಇಲ್ಲವಾಗಿದ್ದು ಬೇಸರದ ಸಂಗತಿ.

ಸಂಸದರಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ದಿಕ್ಕಿನತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಅವರನ್ನು ಹತ್ತಿರದಿಂದ ಬಲ್ಲವರು, ಸ್ವತಃ ಫೈಲ್ ಗಳನ್ನು ಕೈಯಲ್ಲಿಡಿದು ಸಂಸತ್ ನ ಕಚೇರಿಗಳಿಗೆ ಅಲೆದು ಕೆಲಸ ಮಾಡಿಸುತ್ತಿದ್ದರು ಎಂದು ಸ್ಮರಿಸುತ್ತಾರೆ. ಯಾವುದೇ ದುಶ್ಚಟಗಳಿಲ್ಲದ, ಸದಾ ಸದಭಿರುಚಿ ಚಿಂತನೆ ಮೈಗೂಡಿಸಿಕೊಂಡಿದ್ದ, ಅಭಿವೃದ್ಧಿ ವಿಚಾರದಲ್ಲಿ ದೂರದೃಷ್ಟಿ ಹೊಂದಿದ್ದ, ಪಾದರಸದಂತಹ ವ್ಯಕ್ತಿತ್ವದ ಧೃವನಾರಾಯಣ್ ಅವರ ಅಗಲಿಕೆಯಿಂದ ರಾಜಕೀಯ ಕ್ಷೇತ್ರ ಪ್ರತಿಭಾವಂತ ಪ್ರತಿನಿಧಿಯೊಬ್ಬರನ್ನು ಕಳೆದುಕೊಂಡಂತಾಗಿದೆ.

 

Leave a Reply

Your email address will not be published. Required fields are marked *