ನಂದಿನಿ ಮೈಸೂರು
*ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚು ಅವಕಾಶ ಕೊಡಲು ಸಲಹೆ*
*ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಉನ್ನತ ಅಧಿಕಾರಿಗಳ ಜತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚರ್ಚೆ*
ಬೆಂಗಳೂರು/ರಾಮನಗರ: ರಾಜ್ಯದಲ್ಲಿರುವ ಕೈಗಾರಿಕೆಗಳು ಉದ್ಯೋಗ ನೀಡುವಾಗ ಕನ್ನಡಿಗ ಪ್ರತಿಭಾವಂತ ಯುವಜನರನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಲಹೆ ನೀಡಿದರು.
ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಘಟಕಕ್ಕೆ ಇಂದು ಭೇಟಿ ನೀಡಿ ಕಂಪನಿಯ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಅವರು; ಕಂಪನಿಯಲ್ಲಿ ಸ್ಥಳೀಯ ಪ್ರತಿಭಾವಂತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು ಹಾಗೂ ಅನಗತ್ಯವಾಗಿ ಹೊರರಾಜ್ಯದವರನ್ನು ಕರೆತಂದು ತುಂಬಿಸಬಾರದು ಎಂದು ಸಲಹೆ ಮಾಡಿದರು.
ಹೊಸ ಘಟಕ ಸ್ಥಾಪನೆ ಹಾಗೂ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯ ಯುವಕರನ್ನೇ ಪರಿಗಣಿಸಬೇಕು. ಕನ್ನಡಿಗರಿಗೆ ಅನ್ಯಾಯ ಆಗುವುದನ್ನು ಸಹಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ನೇರ ಮಾತುಗಳಲ್ಲಿ ಕಂಪನಿಗಳ ಅಧಿಕಾರಿಗಳಿಗೆ ಹೇಳಿದರು.
ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ವ್ಯವಸ್ಥೆ ಇದ್ದು, ಪ್ರತಿಭಾವಂತ ಮಾನವ ಸಂಪನ್ಮೂಲ ಲಭ್ಯವಿದೆ. ಹೀಗಾಗಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಈ ಮಾತುಕತೆ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಶಾಸಕರಾದ ಮಂಜುನಾಥ್,ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ರಾಜು ಕೆರಕಲೆ ಮತ್ತು ಸ್ವಪ್ನೇಶ್ ಮಾರು, ಉಪಾಧ್ಯಕ್ಷರಾದ ಶಂಕರ್ ಮತ್ತು ವಿನಯ್ ಹಾಗೂ ಕಾರ್ಯನಿರ್ವಾಹಕ ಸಲಹೆಗಾರ ಪರಶುರಾಮ್ ಮುಂತಾದವರು ಉಪಸ್ಥಿತರಿದ್ದರು.
*ಕಾರು ತಯಾರಿಕಾ ಘಟಕ ವೀಕ್ಷಿಸಿದ ಮಾಜಿ ಮುಖ್ಯಮಂತ್ರಿಗಳು:*
ಕಂಪನಿಯ ಅಧಿಕಾರಿಗಳ ಸಭೆಗೂ ಮುನ್ನ ಮಾಜಿ ಮುಖ್ಯಮಂತ್ರಿಗಳು ಟೊಯೊಟಾ ಕಿರ್ಲೋಸ್ಕರ್ ಕಾರು ತಯಾರಿಕಾ ಘಟಕ ವೀಕ್ಷಿಸಿದರು. ಫಾರ್ಚುನರ್, ಇನ್ನೋವಾ ಹಾಗೂ ಟೊಯೊಟಾ ಹೈಬ್ರಿಡ್ ಎಲೆಕ್ಟ್ರಿಕ್ ಕಾರುಗಳ ತಯಾರಿಕೆ ಘಟಕಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ಅಲ್ಲದೆ, ಅಲ್ಲಿನ ತಾಂತ್ರಿಕ ಮಾಹಿತಿ, ಉದ್ಯೋಗಿಗಳಿಗೆ ನೀಡಲಾಗಿರುವ ಸೌಲಭ್ಯಗಳು ಇತ್ಯಾದಿಗಳ ಬಗ್ಗೆ ವಿವರ ಪಡೆದುಕೊಂಡರು.
ಅಲ್ಲದೆ, ಟೊಯೊಟಾ ಕಿರ್ಲೋಸ್ಕರ್ ಕೈಗಾರಿಕಾ ಕ್ಯಾಂಪಸ್ಸಿನಲ್ಲಿ ನಿರ್ಮಿಸಲಾಗಿರುವ ಇಕೋ ಝೋನ್ ಗೂ ಭೇಟಿ ನೀಡಿದರು ಮಾಜಿ ಮುಖ್ಯಮಂತ್ರಿಗಳು.
ಕೊನೆಗೆ ಬಿಡದಿ ಕೈಗಾರಿಕೆ ಸಂಘದ ಕಚೇರಿಗೂ ಅವರು ಭೇಟಿ ನೀಡಿದರು. ಅಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರ ಜತೆ ಮಾಜಿ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದರು.
ನಂದಿನಿ ಮೈಸೂರು