ರೈತರ ಜಮೀನಿನ ಮರಗಳಿಗೆ ರೈತರೇ ಒಡೆಯರು, ಯಾವುದೇ ಮರ ಕಡಿಯಲು ಅನುಮತಿ ಬೇಕಿಲ್ಲ : ಶೋಭಾ ಕರಂದ್ಲಾಜೆ

 

ಹುಣಸೂರು:18 ಆಗಸ್ಟ್ 2021

ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಯಾವುದೇ ಜಾತಿಯ ಮರಗಳನ್ನು ಅನುಮತಿ ಇಲ್ಲದೆ ಕಟಾವು ಮಾಡಿಕೊಳ್ಳಲು ಅನುಕೂಲವಾಗುವಂತೆ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಕರಿಗೆ ನೆರವಾಗಲು ಸರಕಾರ ಮುಂದಾಗಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ತಾಲೂಕಿನ ಬಿಳಿಕೆರೆಯಲ್ಲಿ ಪಕ್ಷದ ಜನಾಶೀರ್ವಾದ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರದ ಮೋದಿ ಸರಕಾರವು ಕೃಷಿ ಉತ್ಪನ್ನಗಳ ಉತ್ಪಾದನೆಗೆ ಹಾಗೂ ಸೂಕ್ತ ಮಾರುಕಟ್ಟೆ ಕಲ್ಪಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಪ್ರತಿವರ್ಷ ರೈತನ ಖಾತೆಗೆ ೬ ಸಾವಿರ ಹಾಗೂ ರಾಜ್ಯದ ಬಿಜೆಪಿ ಸರಕಾರ ಸಹ ೪ ಸಾವಿರ ಸೇರಿದಂತೆ ೧೦ ಸಾವಿರ ರೂಗಳ ಪ್ರೋತ್ಸಾಹಧನ ನೀಡುತ್ತಿದೆ. ಅಲ್ಲದೆ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಸೌಲಭ್ಯ ಕಲ್ಪಿಸಿದೆ. ಹನಿ ನೀರಾವರಿ ಯೋಜನೆ, ಮಣ್ಣಿನ ಪರೀಕ್ಷೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ.
ಆಹಾರ, ಹಾಲಿಗೂ ಯೂರಿಯಾ ಬೆರೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರವು ಲೈಮ್ ಕೋಟೆಡ್ ಯೂರಿಯಾ ವಿತರಿಸುತ್ತಿದ್ದು, ಇದೀಗ ಕಲಬೆರಕೆ ಯೂರಿಯಾ ಪೂರೈಕೆಗೆ ಕಡಿವಾಣ ಬಿದ್ದಿದೆ. ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಣೆ ಸೇರಿದಂತೆ ಹಲವು ಬಗೆಯ ಯೋಜನೆ ರೂಪಿಸಿದೆ. ಕೋಲ್ಡ್ ಸ್ಟೋರೇಜ್ ನಿರ್ಮಾಣ ಹಾಗೂ ರೈತ ಉತ್ಪಾದಕರ ಸಂಘ ಸ್ಥಾಪಿಸಲು ಕ್ರಮವಹಿಸಲಾಗಿದೆ ಎಂದರು.
ವಿರೋಧ ಪಕ್ಷಗಳು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಸಚಿವರ ಪರಿಚಯಕ್ಕೂ ಅವಕಾಶ ಕೊಡದಿದ್ದರಿಂದಾಗಿ ಸದನ ಮುಂದೂಡಿದ್ದರಿಂದ ಮೋದಿಯವರ ಸೂಚನೆಯಂತೆ ಜನಾಶೀರ್ವಾದ ಕಾರ್ಯಕ್ರಮದ ಮೂಲಕ ಆಯಾ ರಾಜ್ಯಗಳಲ್ಲಿ ಸುತ್ತಾಡಿ ಸರಕಾರದ ಕಾರ್ಯಕ್ರಮಗಳನ್ನು ಹಾಗೂ ತಮ್ಮನ್ನು ಪರಿಚಯಿಸಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಸಚಿವರನ್ನು ಹಾಗೂ ಸಂಸದ ಪ್ರತಾಪಸಿಂಹರನ್ನು ಅಭಿನಂದಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಾಮಾಜಿಕ ಅಂತರ ಮರೆತು ಸ್ವಾಗತಿಸಿದರು.


ಶಾಸಕ ನಾಗೇಂದ್ರ, ಜಿಲ್ಲಾಧ್ಯಕ್ಷೆ ಮಂಗಳಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಯೋಗಾನಂದಕುಮಾರ್, ನಗರಸಭೆ ಸದಸ್ಯ ವಿವೇಕಾನಂದ, ಜಿಲ್ಲಾ ಪ್ರಭಾರಿ ಮೈ.ವಿ.ರವಿಶಂಕರ್, ರೈತಘಟಕದ ಜಿಲ್ಲಾಧ್ಯಕ್ಷ ರಮೇಶಕುಮಾರ್, ತಾಲೂಕು ಅಧ್ಯಕ್ಷ ನಾಗಣ್ಣಗೌಡ, ನಗರ ಪ್ರಧಾನ ಕಾರ್ಯದರ್ಶಿ ಹರವೆ ರವಿಕುಮಾರ್, ಹುಡಾ ಅಧ್ಯಕ್ಷ ಗಣೇಶಕುಮಾರಸ್ವಾಮಿ, ಮುಖಂಡರಾದ ಮಂಜುನಾಥ್, ಕಮಲಪ್ರಕಾಶ್, ಗಣಪತಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *