ಬುದ್ದ, ಬಸವ, ಅಂಬೇಡ್ಕರರು ಪ್ರಜಾಪ್ರಭುತ್ವದ ದೊಡ್ಡ ಪ್ರತಿಪಾದಕರು: ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ

ನಂದಿನಿ ಮೈಸೂರು

 

*ಬುದ್ದ, ಬಸವ, ಅಂಬೇಡ್ಕರರು ಪ್ರಜಾಪ್ರಭುತ್ವದ ದೊಡ್ಡ ಪ್ರತಿಪಾದಕರು: ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ*

ಹೆಚ್.ಡಿ.ಕೋಟೆ, ಜುಲೈ.15: ಸನಾತನವಾದ ಶ್ರಮಿಕ ವರ್ಗವನ್ನು ದ್ವೀತಿಯ ದರ್ಜೆಯನ್ನಾಗಿಟ್ಟಿತ್ತು. ಈ ತಾರತಮ್ಯದ ವಿರುದ್ಧ ಹೋರಾಡಿದ ಬುದ್ಧ, ಬಸವ, ಅಂಬೇಡ್ಕರರು ಪ್ರಜಾಪ್ರಭುತ್ವದ ದೊಡ್ಡ ಪ್ರತಿಪಾದಕರು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು‌.

ತಾಲ್ಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಜೆ.ಎಸ್.ಎಸ್ ಮಂಗಳಮಂಟಪ ಆವರಣದಲ್ಲಿ ಶನಿವಾರ ನಡೆದ ಶ್ರೀ ಬಸವೇಶ್ವರರ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತಾನಾಡಿದರು.

ಬಲಾಢ್ಯರಿಂದ ಬಲಹೀನರನ್ನು ಬಲವಾಗಿ ರಕ್ಷಿಸುವುದೇ ಪ್ರಜಾಪ್ರಭುತ್ವದ ಆಶಯ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಪರಿಕಲ್ಪನೆಯ ಮ‌ೂಲಕ ಈ ಜಗತ್ತಿಗೆ ಪ್ರಜಾಪ್ರಭುತ್ವದ ಸಂದೇಶ ಸಾರಿದ್ದಾರೆ. ಅಸಮಾನತೆ, ಅಸ್ಪೃಶ್ಯತೆ, ತಾರತಮ್ಯದ ವಿರುದ್ಧ ಹೋರಾಡುವುದೇ ಬವಸ ತತ್ವವಾಗಿದೆ ಎಂದು ಪ್ರತಿಪಾದಿಸಿದರು.

ವರ್ಣಾಶ್ರಮ ಪದ್ಧತಿ ವಿರುದ್ಧ ಬಲವಾಗಿ ಹೋರಾಟ ಮಾಡಿದ ಬಸವಣ್ಣ, ಕಾಯಕವೇ ಕೈಲಾಸವೆಂಬ ಸಂದೇಶ ಸಾರಿದರು. ಮೂಢ ನಂಬಿಕೆಯನ್ನು ಧಿಕ್ಕರಿಸಿ ಇಷ್ಟ ಲಿಂಗಪೂಜೆಯ ಪರಿಕಲ್ಪನೆ ಜಾರಿಗೆ ತಂದರು. ಅದರಂತೆ ಇಂದಿನ ಯುವಕರು ಮೂಢನಂಬಿಕೆಯನ್ನು ವಿರೋಧಿಸಿ ವೈಜ್ಞಾನಿಕ ಮಾರ್ಗದಲ್ಲಿ ಸಾಗಬೇಕು ಎಂದು ಕರೆ ನೀಡಿದರು.

ಸಮಸಮಾಜ ನಿರ್ಮಾಣ ಆಗದಿದ್ದರೆ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ. ಅಸಮಾನತೆಯು ಪ್ರಜಾಸತ್ತಾತ್ಮಕ ನಿಲುವು ಮತ್ತು ನಡವಳಿಕೆಗೆ ವಿರುದ್ಧವಾದವು. ವಿವಿಧತೆಯಲ್ಲಿ ಏಕತೆಯಿಂದ ಬದುಕುವುದು ಭಾರತೀಯರ ನೈಜ ಸಂಸ್ಕೃತಿಯಾಗಿದೆ ಎಂದರು.

ವ್ಯಕ್ತಿಪೂಜೆ ಸರ್ವಾಧಿಕಾರಕ್ಕೆ ರಹದಾರಿ. ಸರ್ವಾಧಿಕಾರ ಪ್ರಜಾಪ್ರಭುತ್ವವನ್ನು ನಾಶಮಾಡುತ್ತದೆ‌. ಹಾಗಾಗಿ ಸರ್ವಾಧಿಕಾರದ ಆಡಳಿತಕ್ಕೆ ಅವಕಾಶ ಮಾಡಿಕೊಡಬಾರದು ಸರ್ವರೂ ಸಮಾನವಾಗಿ ಬದುಕಬೇಕೆಂಬ ಬಸವ ತತ್ವವನ್ನು ನಾವೆಲ್ಲರೂ ಪಾಲಿಸದಿದ್ದರೆ ದೊಡ್ಡ ಗಂಡಾಂತರ ಎದುರಾಗಲಿದೆ ಎಂದು ಹೇಳಿದರು.

ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಮಾತಾನಾಡಿ, ಜಾತಿ ಮತ್ತು ಧರ್ಮರಹಿತ ಸಮಸಮಾಜದ ನಿರ್ಮಾಣವು ವಿಶ್ವಗುರು ಬಸವಣ್ಣ ಅವರ ಕನಸಾಗಿತ್ತು. ಸಾಮಾಜಿಕ ನ್ಯಾಯವನ್ನು ವಿಶ್ವಕ್ಕೆ ಪರಿಚಯಿಸಿದ ಬಸವೇಶ್ವರರು ವೈಚಾರಿಕ, ವೈಜ್ಞಾನಿಕ ತಳಹದಿಯ ಮೇಲೆ ಸಮಸಮಾಜ ನಿರ್ಮಾಣದ ಆಲೋಚನೆ ಹಚ್ಚಿದರು. ಅವರ ಎಲ್ಲಾ ಆಶಯವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದರು‌.

ಪ್ರಸ್ತುತ ಪರಿಸರದಲ್ಲಿ ಹೆಚ್ಚಿನ ಮಾಲಿನ್ಯ ಉಂಟಾಗುತ್ತಿದ್ದು, ಮರ, ಗಿಡಗಳನ್ನು ಸಂರಕ್ಷಿಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕಿದೆ. ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ಹಿತದೃಷ್ಟಿಯಿಂದ ಪ್ರಕೃತಿ ಸಂಪತ್ತನ್ನು ಕಾಪಾಡಬೇಕಿದೆ ಎಂದು ಹೇಳಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್‌ರ ಜಯಂತ್ಯುತ್ಸವ ಆಚರಣೆ ಮಾಡುವ ಮೂಲಕ ಅವರ ತತ್ವ, ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಿದೆ. ತಾಲ್ಲೂಕಿನಲ್ಲಿ ಬಸವ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಿಕೊಡಬೇಕು ಎಂದು ಸಚಿವರನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಅವರು, ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು. ನಂಜನಗೂಡು ಶಾಸಕ ದರ್ಶನ್ ಧ್ರುವನಾರಯಣ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಮಾಜಿ ಸಚಿವ ಎಂ. ಶಿವಣ್ಣ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮೊತ್ತ ಬಸವರಾಜಪ್ಪ, ದೇವನೂರು ಮಹಾಂತಸ್ವಾಮಿ, ಪಡುವಲುವಿರಕ್ತಮಠ ಬಿಡುಗಲು ಮಹದೇಶ್ವರ ಸ್ವಾಮಿ, ಬೀಚನಹಳ್ಳಿ ಮಠ ನಾಗೇಂದ್ರಸ್ಬಾಮಿ, ಕುದೇರುಮಠ ಗುರುಶಾಂತಸ್ವಾಮಿ, ಸಿದ್ದಮಲ್ಲೇಶ್ವರ ಪಟ್ಟದಮಠ ಚನ್ನಬಸವಸ್ವಾಮಿ, ಷಡಕ್ಷರಿಸ್ವಾಮಿ, ಚಂದ್ರಶೇಖರ ಸ್ವಾಮಿ, ತೊಂಟದಾರ್ಯಸ್ವಾಮಿ,ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಮಲ್ಲಿಕಾರ್ಜುನಸ್ವಾಮಿ,ವರುಣಾ ಮಹೇಶ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *