ನಂದಿನಿ ಮೈಸೂರು
*ಮೈಸೂರು ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ*
ಮೈಸೂರು, ಆ.5: ರಾಜ್ಯದ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ‘ಗೃಹ ಜ್ಯೋತಿ’ ಯೋಜನೆಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ನಗರದ ಕಲಾಮಂದಿರದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶೂನ್ಯ ದರದ ವಿದ್ಯುತ್ ಬಿಲ್ ನೀಡುವ ಮೂಲಕ ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಚುನಾವಣೆಯ ಸಂದರ್ಭದಲ್ಲಿ ನಾವು ಪ್ರಣಾಳಿಕೆಯಲ್ಲಿ ಹಲವಾರು ಆಶ್ವಾಸನೆ ನೀಡಿದ್ದೇವು. ಅದರಲ್ಲೂ ಸರ್ಕಾರ ಬಂದ ಕೂಡಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಮಾಡುವುದಾಗಿ ಸಹಿ ಮಾಡಿದ ಗ್ಯಾರಂಟಿ ಕಾರ್ಡ್ ಹಂಚಿದ್ದೇವು. ಅದರಂತೆ ಒಂದಾಂದಾಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎಷ್ಟಿದ್ದರೂ ಕೂಡ, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಮೊದಲನೇ ಸಂಪುಟದಲ್ಲೆ ಗ್ಯಾರಂಟಿ ಈಡೇರಿಸಲು ತೀರ್ಮಾನ ಮಾಡಲಾಗಿತ್ತು. ಅದರಂತೆ ಮೊದಲಿಗೆ ಶಕ್ತಿ ಯೋಜನೆ ಜಾರಿ ಮಾಡಲಾಯಿತು. ಈ ಯೋಜನೆಯಡಿ ಮಹಿಳೆಯರು ಪ್ರೇಕ್ಷಣೀಯ, ಧಾರ್ಮಿಕ ಕ್ಷೇತ್ರಗಳು, ನೆಂಟರಿಷ್ಟರ ಮನೆಗೆ ಸಂತೋಷದಿಂದ ತೆರಳುತ್ತಿದ್ದಾರೆ. ಇದರಿಂದ ದೇಶ ಸುತ್ತಿ ಕೋಶ ಓದಬೇಕು ಎಂಬ ಮಾತು ನಿಜವಾಗುತ್ತಿದೆ ಎಂದರು.
ಹಸಿವು ಮುಕ್ತ ಕರ್ನಾಟಕಕ್ಕಾಗಿ ಅನ್ನಭಾಗ್ಯ ಯೋಜನೆ ಜಾರಿಮಾಡಲಾಗಿದೆ. ಈ ಯೋಜನೆಯಡಿ ಪಡಿತರ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಅದರಂತೆ ಏಷ್ಯಾದಲ್ಲೆ ಮೊದಲನೇ ಬಾರಿಗೆ ವಿದ್ಯುತ್ ಶಕ್ತಿ ಉತ್ಪಾದನೆಯನ್ನು ನಮ್ಮ ರಾಜ್ಯದಲ್ಲಿ ಪ್ರಾರಂಭಿಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸುವ ಮೂಲಕ ಸಾಮಾನ್ಯ ಜನರು ಕತ್ತಲೆಯಿಂದ ಬೆಳಕಿನಡೆಗೆ ತರುವ ಕೆಲಸವನ್ನು ನಮ್ನ ಸರ್ಕಾರ ಮಾಡಿದೆ ಎಂದರು.
ಮುಂದಿನ ದಿನಗಳಲ್ಲಿ ಉಳಿದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಸಂವಿಧಾನ, ಪಜಾಪ್ರಭುತ್ವದ ಬಲವರ್ಧನೆಯ ಮುಖಾಂತರ ಜನರ ನೆಮ್ಮದಿಯುತ ಜೀವನಕ್ಕೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ದೇಶದಲ್ಲೇ ನುಡಿದಂತೆ ನಡೆದ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವಾಗಿದೆ ಎಂದು ತಿಳಿಸಿದರು.
ಈ ಯೋಜನೆಗಳು ಪ್ರತಿಯೊಂದು ಕುಟುಂಬವು ಆರ್ಥಿಕ ಸ್ವಾವಲಂಬನೆಯ ಬದುಕಿಗೆ ಸದೃಢವಾದ ಹೆಜ್ಜೆ ಇಡಲು ಸಹಕಾರಿಯಾಗಲಿದೆ. ದೇಶದಲ್ಲೇ ಐತಿಹಾಸಿಕವಾದ ಈ ಯೋಜನೆಯಡಿ ನೋಂದಾಯಿತ 1.41 ಕೋಟಿ ಮನೆಗಳಿಗೆ ಜುಲೈ ತಿಂಗಳ ವಿದ್ಯುತ್ ಬಳಕೆಯ ಶೂನ್ಯ ದರದ ವಿದ್ಯುತ್ ಬಿಲ್ ದೊರೆಯಲಿದೆ. ಜಿಲ್ಲೆಯಲ್ಲಿ ಶೇ.70 ಕುಟುಂಬಗಳು ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಉಳಿದ ಎಲ್ಲಾ ಕುಟುಂಬಳು ಗೃಹಜ್ಯೋತಿಯ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಅವರು ಮಾತನಾಡಿ, ಬಡವರಿಗಾಗಿ ರೂಪಿಸಿರುವ ಅತ್ಯುತ್ತಮ ಕಾರ್ಯಕ್ರಮ ಇದಾಗಿದೆ. ನಮ್ಮ ಸರ್ಕಾರವು ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾಪೌರರಾದ ಶಿವಕುಮಾರ್, ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಮರಿತಿಬ್ಬೇಗೌಡ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಉಪ ಮಹಾಪೌರರಾದ ಡಾ.ಜಿ.ರೂಪ, ಚಾ.ವಿ.ಸ.ನಿ.ನಿ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶ್ರೀಧರ್, ಪ್ರಧಾನ ವ್ಯವಸ್ಥಾಪಕರಾದ ಪಿ.ರವಿಕುಮಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.