ನಂದಿನಿ ಮೈಸೂರು
ಮೈಸೂರು: ನಾಳೆ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಶಿವನ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದೇ ರೀತಿಯಲ್ಲಿ ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯದಲ್ಲಿ ಭರದ ಸಿದ್ದತೆ ಕೈಗೊಳ್ಳಲಾಗಿದ್ದು, ಶಿವರಾತ್ರಿ ಮುನ್ನಾ ದಿನವಾದ ಇಂದು ಜಿಲ್ಲಾ ಖಜಾನೆಯಲ್ಲಿರುವ ಚಿನ್ನದ ಕೊಳಗ(ಮುಖವಾಡ) ವನ್ನು ಅರ್ಚಕರಿಗೆ ಹಸ್ತಾಂತರಿಸಲಾಯಿತು.
ಮುಜರಾಯಿ ಇಲಾಖೆಯಿಂದ ದೇವಾಲಯದ ಅರ್ಚಕರಿಗೆ ಹಸ್ತಾಂತರ ಮಾಡಲಾಯಿತು. ಬರೋಬ್ಬರಿ 11ಕೆಜಿ ಅಪರಂಜಿ ಚಿನ್ನದಿಂದ ಕೊಳಗವನ್ನು ಮಾಡಲಾಗಿದೆ. ಶಿವರಾತ್ರಿ ದಿವಸ ಮಾತ್ರ ಶ್ರೀ ತ್ರಿನೇಶ್ವರ ದೇವಾಲಯದ ಶಿವಲಿಂಗಕ್ಕೆ ಕೊಳಗವನ್ನು ಧಾರಣೆ ಮಾಡಲಾಗುತ್ತದೆ.
ರಾಜವಶಂಸ್ಥ ಜಯಚಾಮರಾಜೇಂದ್ರ ಒಡೆಯರ್ ಪುತ್ರ ಸಂತಾನವಾದ ಸಂದರ್ಭದಲ್ಲಿ ದೇವಾಲಯಕ್ಕೆ ಇದನ್ನು ಕೊಡುಗೆಯಾಗಿ ನೀಡಿದ್ದರು ಎನ್ನುವ ಹಿನ್ನೆಲೆ ಇದೆ. ಹೀಗಾಗಿ ಇವತ್ತು ಚಿನ್ನದ ಕೊಳಗವನ್ನು ಬಿಗಿ ಭದ್ರತೆಯ ಮೂಲಕ ದೇಗುಲಕ್ಕೆ ತಂದು ಹಸ್ತಾಂತರ ಮಾಡಲಾಯಿತು. ನಾಳೆ ಮುಂಜಾನೆ ಶಿವಲಿಂಗಕ್ಕೆ ಕೊಳಗವನ್ನು ಧಾರಣೆ ಮಾಡಲಾಗುತ್ತದೆ.
ನಾಳೆ ಸಹಸ್ರಾರು ಮಂದಿ ಭಕ್ತರು ಬರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಪ್ರತಿವರ್ಷ ತ್ರೀನೇಶ್ವರ ದೇವಾಲಯದಲ್ಲಿ ಅದ್ಧೂರಿಯಾಗಿ ಶಿವರಾತ್ರಿ ನಡೆಯಲಿದೆ. ಬೆಳಗ್ಗೆ 6ರಿಂದ ಮಧ್ಯರಾತ್ರಿಯವರೆಗೂ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ 4 ಜಾವಗಳಲ್ಲೂ ವಿಶೇಷ ಪೂಜೆಗಳು ನೆರವೇರಲಿದೆ.