ಬಾಡಿಗೆದಾರರಿಗೂ ಉಚಿತ ವಿದ್ಯುತ್ ಅನ್ವಯ ಸಿಎಂ ಸಿದ್ದರಾಮಯ್ಯ ಸ್ಪಷ್ಟ

ನಂದಿನಿ ಮೈಸೂರು

*ಬಾಡಿಗೆದಾರರಿಗೂ ಉಚಿತ ವಿದ್ಯುತ್ ಅನ್ವಯ* *ಮುಖ್ಯಮಂತ್ರಿ ಸಿದ್ದರಾಮಯ್ಯ*

ಬೆಂಗಳೂರು, ಜೂನ್ 06 : ಇನ್ನೂರು ಯೂನಿಟ್ ಗಳ ಒಳಗೆ ವಿದ್ಯುತ್ ಬಳಕೆ ಮಾಡುವ ಬಿಲ್ ಕಟ್ಟುವ ಅಗತ್ಯವಿಲ್ಲ. ಬಾಡಿಗೆದಾರರಿಗೂ ಇದು ಅನ್ವಯವಾಗುತ್ತದೆ. ವಾಣಿಜ್ಯ ಕಟ್ಟಡಗಳಿಗೆ ಮಾತ್ರ ಇದು ಅನ್ವಯಿಸುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಅವರು ಇಂದು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ 41 ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

*ನಾಡು ಕಂಡ ಮುತ್ಸದಿ ರಾಜಕಾರಣಿ*

ದೇವರಾಜ ಅರಸು ಅವರು ನಾಡು ಕಂಡ ಮುತ್ಸದಿ ರಾಜಕಾರಣಿ. ಸರ್ಕಾರ ಗೌರವಯುತವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರ ಸ್ಮರಣೆ ಮಾಡಿದೆ.
ಅವರು ಮುಖ್ಯ ಮಂತ್ರಿಯಾಗಿ ಹಾಗೂ ಅವರ ಜೀವಿತ ಕಾಲದಲ್ಲಿ ಮಾಡಿದ ಕೆಲಸ ನಮಗೆ ಸ್ಪೂರ್ತಿ. ಸಾಮಾಜಿಕ ನ್ಯಾಯದ ಹರಿಕಾರ. ಅನೇಕ ಸಾಮಾಜಿಕ, ಕ್ರಾಂತಿಕಾರಿ ತೀರ್ಮಾನಗಳನ್ನು ಕೈಗೊಂಡಿದ್ದರು. ಭೂ ಸುಧಾರಣಾ ಕಾಯ್ದೆ, ಜೀತಪದ್ಧತಿ ಮುಕ್ತಿ, ಮಲಹೊರುವ ಪದ್ಧತಿಯನ್ನು ನಿಲ್ಲಿಸಿದ್ದು, ರೈತರ ಸಾಲ ವಿಮೋಚನಾ ಕಾಯ್ದೆ, ಹಾವನೂರು ಆಯೋಗ ರಚಿಸಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ, ಧ್ವನಿಯಿಲ್ಲದ ಜನರ ದನಿಯಾದರು ಎಂದರು.

*ರಾಜಕೀಯ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ*
ಅನೇಕ ಜನರನ್ನು ಶಾಸಕರನ್ನಾಗಿಸಿ ಅವರಿಗೆ ಪ್ರಾತಿನಿಧ್ಯ ನೀಡುವ ಕೆಲಸ ಮಾಡಿದರು. ರಾಜಕೀಯ ವ್ಯವಸ್ಥೆಯಲ್ಲಿಯೂ ಸಾಮಾಜಿಕ ನ್ಯಾಯ ತರಲು ಶ್ರಮಿಸಿದರು. ಅಧಿಕಾರ ಎಲ್ಲರಿಗೂ ದೊರೆಯಬೇಕೆಂಬ ನಂಬಿಕೆ ಉಳ್ಳವರಾಗಿದ್ದರು. ಉಳುವುವವನೆ ಭೂಮಿ ಒಡೆಯ ಎಂಬ ಕ್ರಾಂತಿಕಾರಿ ತೀರ್ಮಾನಗಳನ್ನು ಮಾಡಿದವರು. ಅವರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.

ದೇವರಾಜ ಅರಸು ಅವರು ಕಾಂಗ್ರೆಸ್ ಪಕ್ಷದಿಂದ 1982 ರಿಂದ 80 ರವರೆಗೆ ಮುಖ್ಯಮಂತ್ರಿಯಾಗಿ ಮಾಡಿದ ಕೆಲಸಗಳು ಜನರ ಮನಸ್ಸಿನಲ್ಲಿ ಸದಾ ಉಳಿದಿವೆ ಎಂದು ತಿಳಿಸಿದರು.

 

Leave a Reply

Your email address will not be published. Required fields are marked *