ನಂದಿನಿ ಮೈಸೂರು
ಮೈಸೂರು: ಮೈಸೂರು ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಾದ ವಂಚನೆ ಪ್ರಕರಣ ಮತ್ತು ಮನೆಗೆ ನುಗ್ಗಿ ಚಿನ್ನಾಭರಣವನ್ನು ದೋಚಿದ್ದ ಕಳ್ಳರನ್ನು ಹೆಡೆಮುರಿ ಕಟ್ಟಿದ ಪೊಲೀಸರು ಬಂಧಿತರಿಂದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೀಮಾ ಲಾಟ್ಕರ್ ತಿಳಿಸಿದರು .
ಈ ಕುರಿತು ಮಾಹಿತಿ ನೀಡಿದ ಅವರು ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಯುವತಿ ಹಿಮಶ್ವೇತಾ ಎಂಬವರು ಸೆನ್ ಪೊಲೀಸ್ ಠಾಣೆಯಲ್ಲಿ ತನಗೆ ಇನ್ಸ್ಟಾ ಗ್ರಾಂನಲ್ಲಿ ಪರಿಚಯವಾದ ರೋಬರ್ಟ್ ಎಡ್ಗರ್ ಎಂಬವರು ವಾಟ್ಸ್ ಆಯಪ್ ಚಾಟ್ ನಲ್ಲಿ ತಾನು ಯುಕೆಯಲ್ಲಿರುವುದಾಗಿ ತಿಳಿಸಿದ್ದು ಐಫೋನ್ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಗಿಫ್ಟ್ ಕಳುಹಿಸುತ್ತಿರುವುದಾಗಿ ತಿಳಿಸಿದ್ದ. ಡೆಲ್ಲಿ ಏರ್ ಪೋರ್ಟ್ ನಿಂದ ಕರೆ ಮಾಡಿದ್ದು ಹಣವನ್ನು ಹಾಕಿ ಬಿಡಿಸಿಕೊಳ್ಳುವಂತೆ ತಿಳಿಸಿದ್ದರು. ಅದರಂತೆ ಹಿಮಶ್ವೇತಾ ೪,೭೭,೦೦೦ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗೆ ಹಾಕಿದ್ದು ಯಾವುದೇ ಗಿಫ್ಟ್ ಬಂದಿಲ್ಲ ಎಂದು ನಂಜನಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತಮ್ಮ ಸೂಚನೆಯಂತೆ ಅಪರ ಪೊಲೀಸ್ ಅಧೀಕ್ಷಕಿ ಡಾ.ನಂದಿನಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಶಬ್ಬೀರ್ ಹುಸೇನ್ ಅವರ ತಂಡವು ಮಾಹಿತಿ ಸಂಗ್ರಹಿಸಿ ಅಸ್ಸಾಂ ರಾಜ್ಯದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ೨ಕೀ ಪ್ಯಾಡ್, ೪ಸ್ಮಾರ್ಟ್ ಮೊಬೈಲ್ ಫೋನ್, ೨ಬ್ಯಾಂಕ್ ಪಾಸ್ ಬುಕ್ ಗಳು, ೧ ಮನೆ ಬಾಡಿಗೆ ಕರಾರು ಪತ್ರ, ೨೬,೦೦೦ರೂ.ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ ರಾಜ್ಯದ ಕರೀಂ ಗಂಜ್ ಜಿಲ್ಲೆಯ ಬಾಲಿಪಿಪಿಲ ನೂರ್ಕಪುಂಜಿ ಗ್ರಾಮದ ಸಿಯಂಪುಯ್ ಹಾಲಂ ಬಿನ್ ಲಾಲಜಮ್ಮುಲ್ ಹಾಲಂ ಎಂಬವಳು ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ನೈಜಿರಿಯಾ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡು ಆತನು ಈಕೆಯ ದೂರದ ಸಂಬಂಧಿಕರು ಹಾಗೂ ನೆರೆ ಹೊರೆಯ ಗ್ರಾಮದವರಾದ ಆರೋಪಿಗಳನ್ನು ಬೆಂಗಳೂರಿಗೆ ಬರಮಾಡಿಕೊಂಡು ಅವರುಗಳ ಆಧಾರ್ ಕಾರ್ಡ್ ನ್ನು ಬೆಂಗಳೂರಿನ ವಿಳಾಸಸಕ್ಕೆ ಬದಲಾಯಿಸಿ ಆರೋಪಿತಳಾದ ಸಿಯಂಪುಯ್ ಹಾಲಂ ಬೇರೆ ಬೇರೆ ಹೆಸರಿನಲ್ಲಿ ೩೯ವಿವಿಧ ಬ್ಯಾಂಕ್ ಗಳಲ್ಲಿ ಖಾತೆಯನ್ನು ತೆರೆಸಿ ಅದಕ್ಕೆ ಸಂಬಂಧಪಟ್ಟ ಎಟಿಎಂ ಕಾರ್ಡ್ , ಪಾಸ್ ಪುಸ್ತಕವನ್ನು ನೈಜಿರಿಯಾ ಪ್ರಜೆಯು ಪಡೆದುಕೊಂಡು ಹಣವನ್ನು ಸಹ ಇವರ ಕಡೆಯಿಂದಲೇ ಡ್ರಾ ಮಾಡಿಸುತ್ತಿರುವುದು ಹಾಗೂ ಆರೋಪಿಗಳ ಹೆಸರಿನಲ್ಲಿ ಹಲವಾರು ಸಿಮ್ ಗಳನ್ನು ಪಡೆದು ಅವುಗಳನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿರುವುದು ಕೂಡ ವಿಚಾರಣೆಯಿಂದ ತಿಳಿದು ಬಂದಿದೆ. ಬಂಧಿಸಿರುವ ಆರೋಪಿಗಳೆಲ್ಲರೂ ಅಸ್ಸಾಂ ರಾಜ್ಯದ ಕರೀಂ ಗಂಜ್ ಜಿಲ್ಲೆಯವರಾಗಿದ್ದು ಇನ್ನೂ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
ಪತ್ತೆಕಾರ್ಯದಲ್ಲಿ ಪೊಲೀಸ್ ನಿರೀಕ್ಷಕ ಶಬ್ಬೀರ್ ಹುಸೇನ್, ಉಪನಿರೀಕ್ಷಕ ಲೋಕೇಶ್, ಸಿಬ್ಬಂದಿಗಳಾದ ಮಂಜುನಾಥ ರಂಗಸ್ವಾಮಿ, ಮಂಜುನಾಥ ಬಿವಿ, ಮಹದೇವಸ್ವಾಮಿ, ವೆಂಕಟೇಶ್, ಪುಷ್ಪಲತಾ, ಮಹೇಶ್, ಮಹೇಶಕುಮಾರ್, ಅಭಿಷೇಕ್, ಆದರ್ಶ, ಸಿಂಧು ಭಾಗಿಯಾಗಿದ್ದರು.
ಇನ್ನೊಂದು ಪ್ರಕರಣದಲ್ಲಿ ತನ್ನ ಮನೆಯ ಡಿಜಿಟಲ್ ಲಾಕರ್ ನಲ್ಲಿದ್ದ ಸುಮಾರು ೩ಕೆ.ಜಿ.೨೫೦ಗ್ರಾಂ ವಿವಿಧ ಮಾದರಿಯ ಚಿನ್ನದ ಒಡವೆಗಳು, ೧೨ಕೆ.ಜಿ ಬೆಳ್ಳಿಗಟ್ಟಿ, ೩೦ಲಕ್ಷರೂ. ನಗದು ಹಣವನ್ನು ಯಾರೋ ಕಳ್ಲರು ಕದ್ದೊಯ್ದಿದ್ದಾರೆಂದು ಟಿ.ನರಸೀಪುರ ಪಟ್ಟಣದಲ್ಲಿರುವ ಶ್ರೀನಿಧಿ ಡಿಸ್ಟ್ರಿಬ್ಯೂಟರ್ಸ್ ಮಾಲೀಕರಾದ ಶ್ರೀನಿವಾಸ ಎಂಬವರು ಟಿ.ನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪತ್ತೆಕಾರ್ಯಾಚರಣೆಗೆ ತಮ್ಮ ನಿರ್ದೇಶನದಲ್ಲಿ ಅಪರ ಪೊಲೀಸ್ ಅಧೀಕ್ಷಕಿ ಡಾ.ನಂದಿನಿ ಮಾರ್ಗದರ್ಶನದಲ್ಲಿ ನಂಜನಗೂಡು ಉಪವಿಭಾಗ ಡಿಎಸ್ ಪಿ ಗೋವಿಂದರಾಜು ನೇತೃತ್ವದಲ್ಲಿ ಸಾಲಿಗ್ರಾಮ ಠಾಣೆಯ ಪಿಐ ಶ್ರೀಕಾಂತ್, ನಂಜನಗೂಡು ಪಟ್ಟಣ ವೃತ್ತದ ಸಿಪಿಐ ಲಕ್ಷ್ಮಿಕಾಂತ್ ತಳವಾರ್, ಟಿ.ನರಸೀಪುರ ಪೊಲೀಸ್ ಠಾಣೆಯ ಪಿಎಸ್ ಐ ಮಹೇಶ್ ಕುಮಾರ್, ಅಂತರಸಂತೆ ಪೊಲೀಸ್ ಠಾಣೆಯ ಪಿಎಸ್ ಐ ಜಯಪ್ರಕಾಶ್ ಅವರನ್ನೊಳಗೊಂಡ ತಂಡ ರಚಿಸಲಾಗಿದ್ದು ಪಿಎಸ್ ಐ ಮಹೇಶ್ ಕುಮಾರ್ ಅವರ ತಂಡವು ಆಂಧ್ರಪ್ರದೇಶದ ಹಿಂದುಪುರ, ಬತ್ತಲಪಲ್ಲಿ, ಪೆನುಕೊಂಡ, ಪುಟ್ಪಪರ್ತಿ, ಪರಿಗಿ, ಧರ್ಮಾವರಂ, ಅನಂತಪುರ , ಹೈದ್ರಾಬಾದ್ ಕಡೆಗಳಲ್ಲಿ ಮಾಹಿತಿ ಕಲೆ ಹಾಕಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಆರೋಪಿಯು ತಾನು ಹಾಸನ ಜೈಲಿನಲ್ಲಿರುವ ಆರೋಪಿಯೊಂದಿಗೆ ಹಾಗೂ ತನ್ನ ಇನ್ನಿಬ್ಬರು ಸಹಚರರೊಂದಿಗೆ ಟಿ.ನರಸೀಪುರ ಟೌನ್ ಗೆ ಬಂದು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಮುಂದಿನ ಕಾನೂನು ಕ್ರಮದಂತೆ ಆರೋಪಿಯಿಂದ ೭೯,೫೧೦ಗ್ರಾಂ ಚಿನ್ನ , ೪೯೯.೨೬೦ ಗ್ರಾಮಮ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಕಳ್ಳತನದ ಆರೋಪಿಗಳ ತಂಡವು ಗದಗ ಜಿಲ್ಲೆ, ಬೈಲಹೊಂಗಲಗಳಲ್ಲೂ ಕಳ್ಳತನ ಮಾಡಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದ್ದು ಟಿ.ನರಸೀಪುರದ ಎರಡು ಪ್ರಕರಣಗಳು, ಗದಗ ಜಿಲ್ಲೆಯ ಒಂದು ಪ್ರಕರಣ, ಬೈಲಹೊಂಗಲದಲ್ಲಿ ಒಂದು ಪ್ರಕರಣ, ನಿಪ್ಪಾಣಿಯ ಒಂದು ಪ್ರಕರಣ ಪತ್ತೆಯಾಗಿದ್ದು ಒಟ್ಟು ಐದು ಪ್ರಕರಣಗಳಲ್ಲಿ ಈ ಆರೋಪಿ ಭಾಗಿಯಾಗಿರುವುದು ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆ ಮಾಡಲಾಗುವುದು. ಆರೋಪಿಗಳ ಪೈಕಿ ಓರ್ವ ಹಾಸನ ಜೈಲಿನಲ್ಲಿದ್ದು ಉಳಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆಂದು ತಿಳಿಸಿದರು.
ಪತ್ತೆಕಾರ್ಯದಲ್ಲಿ ಪಿಎಸ್ ಐ ಆರತಿ, ಎಎಸ್ ಐ ಸತೀಶ್, ಪೊಲೀಸ್ ಸಿಬ್ಬಂದಿಗಳಾದ ಭಾಸ್ಕರ್, ಅಶೋಕ್, ವಸಂತಕುಮಾರ್, ಜಯಕುಮಾರ್, ಅಶ್ವಿತಾ, ಅವರುಗಳು ಭಾಗವಹಿಸಿದ್ದು ಅವರ ಕಾರ್ಯವನ್ನು ಶ್ಲಾಘಿಸಿದರಲ್ಲದೇ, ಬಹುಮಾನವನ್ನು ಘೋಷಿಸಿದರು.