ಯಾರೇ ಆದರೂ ಒಬ್ಬರಿಗೆ ಒಂದೇ ಟಿಕೆಟ್: ಡಿ.ಕೆ. ಶಿವಕುಮಾರ್

ನಂದಿನಿ ಮೈಸೂರು

ಬೆಂಗಳೂರು:ಈ ಬಾರಿ ಚುನಾವಣೆಯಲ್ಲಿ ಯಾರೇ ಆದರೂ ಒಬ್ಬರಿಗೆ ಒಂದೇ ಟಿಕೆಟ್ ‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು ಅರ್ಜಿ ಸಲ್ಲಿಸುವಾಗ ಆಕಾಂಕ್ಷಿಗಳಿಂದ ದೇಣಿಗೆ ಸಂಗ್ರಹ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಇದು ನಮ್ಮ ಪಕ್ಷದಲ್ಲಿ ಹೊಸತಲ್ಲ. ಈ ಹಿಂದೆಯೂ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ. ಆಗ ಹೆಚ್ಚು ಸುದ್ದಿ ಆಗಿರಲಿಲ್ಲ. ಆದರೆ ಈ ಬಾರಿ ಆಗಿದೆ. ಚುನಾವಣಾ ತಯಾರಿ, ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಸೇರಿದಂತೆ ಹಲವು ವಿಚಾರವಾಗಿ ಆರ್ಥಿಕ ಶಕ್ತಿ ಅಗತ್ಯವಿದೆ. ಕಚೇರಿ ನಿರ್ಮಾಣಕ್ಕೆ ಕಾರ್ಯಕರ್ತರು ಆರ್ಥಿಕ ನೆರವು ಕೇಳಿದಾಗ ನಾವು ಹಣ ಸಹಾಯ ಮಾಡುತ್ತೇವೆ. ಕಾರ್ಯಕರ್ತರಿಗೆ ತೊಂದರೆ ಆದಾಗ ಅವರಿಗೆ ಸಹಾಯ ಮಾಡಲು ಹಣದ ಅಗತ್ಯವಿದೆ. ಹೀಗಾಗಿ ದೇಣಿಗೆಯನ್ನು ಸಂಗ್ರಹಿಸಲಾಗಿದೆ ‘ ಎಂದರು.

ಅರ್ಜಿ ಸಲ್ಲಿಕೆ ನಂತರ ಆಕಾಂಕ್ಷಿಗಳು ಸಿದ್ದರಾಮಯ್ಯ ಹಾಗೂ ನಿಮ್ಮ ಮನೆಗೆ ಭೇಟಿ ನೀಡುತ್ತಿರುವುದರಿಂದ ತೊಂದರೆ ಆಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ, ‘ ಯಾರೇ ಆಗಲಿ ಒಬ್ಬರಿಗೆ ಒಂದೇ ಟಿಕೆಟ್. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಪಕ್ಷ ಮೊದಲು ಅಧಿಕಾರಕ್ಕೆ ಬರಬೇಕು. ಅಧಿಕಾರಕ್ಕೆ ಬಂದಾಗ ಎಲ್ಲರಿಗೂ ಅಧಿಕಾರ ಸಿಗುತ್ತದೆ. ಎಲ್ಲರಿಗೂ ಅವರದೇ ಆದ ಶಕ್ತಿ ಇರುತ್ತದೆ. ಯಾರ ಶಕ್ತಿ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬರಿಗೆ 100 ಬೂತ್ ನಿಭಾಯಿಸುವ ಶಕ್ತಿ ಇದ್ದರೆ, ಮತ್ತೆ ಕೆಲವರಿಗೆ 50, ಇನ್ನೂ ಕೆಲವರಿಗೆ 10 ಬೂತ್ ನಿಭಾಯಿಸುವ ಶಕ್ತಿ ಇರುತ್ತದೆ ‘ ಎಂದು ಹೇಳಿದರು.

ಇಂದಿನ ಸಭೆಯಲ್ಲಿ ಯಾವ ವಿಚಾರವಾಗಿ ಚರ್ಚೆ ಮಾಡಲಾಗುವುದು ಎಂದು ಕೇಳಿದ ಪ್ರಶ್ನೆಗೆ, ‘ ಇಂದು ಯಾವುದೇ ಚರ್ಚೆ ಇರುವುದಿಲ್ಲ. ನಮ್ಮ ನಾಯಕರಿಗೆ ಕೆಲವು ಮಾರ್ಗದರ್ಶನ ನೀಡಲಾಗುವುದು ‘ ಎಂದು ತಿಳಿಸಿದರು.

Leave a Reply

Your email address will not be published. Required fields are marked *