ನೀರು‌ ಅತ್ಯಮೂಲ್ಯ ಪೂಜಿಸಿ, ಸಂರಕ್ಷಿಸಿ:ಡಾ.ಡಿ ವಿರೇಂದ್ರ ಹೆಗ್ಗಡೆ

ನಂದಿನಿ ಮೈಸೂರು

*ನೀರು‌ ಅತ್ಯಮೂಲ್ಯ ಪೂಜಿಸಿ, ಸಂರಕ್ಷಿಸಿ*: *ಡಾ.ಡಿ ವಿರೇಂದ್ರ ಹೆಗ್ಗಡೆ*

ನೀರು ನಮ್ಮ ಜೀವನಾಡಿ, ನೀರನ್ನು ಪೂಜಿಸಿ, ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ: ಡಿ ವಿರೇಂದ್ರ ಹೆಗ್ಗಡೆ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತದ ವತಿಯಿಂದ ತ್ರಿವೇಣಿ ಸಂಗಮದಲ್ಲಿ ಆಯೋಜಿಸಲಾಗಿದ್ದ ಮಹಾ ಕುಂಭಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಬಹಳಷ್ಟು ವಸ್ತುಗಳು‌ ನಮ್ಮ ಜೀವನದಲ್ಲಿ ಸಹಕರಿಯಾಗಿರುತ್ತದೆ. ಆಯುಧ ಪೂಜೆಯಲ್ಲಿ ಆಯುಧಗಳು ಹಾಗೂ ಮನೆಯಲ್ಲಿ ಉಪಯೋಗಿಸುವ ವಸ್ತುಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ನೀರನ್ನು ಕೃಷಿ, ಕೈಗಾರಿಕೆ, ಪ್ರತಿನಿತ್ಯದ ಕೆಲಸಕ್ಕೆ ಬೇಕು.
ಅನಾವೃಷ್ಠಿಯನ್ನು ಅನುಭವಿಸಿದ ಸಂದರ್ಭದಲ್ಲಿ ಪ್ರತಿ ಹನಿ ನೀರಿನ ಬೆಲೆ ತಿಳಿದಿದೆ. ಪ್ರತಿ ದಿನ ನಲ್ಲಿಯಲ್ಲಿ ಸದಾ ಸರಬರಾಜು ಆಗುತ್ತಿದ್ದ ನೀರು ನಿಗಧಿತ ಸಮಯಕ್ಕೆ ಸೀಮಿತವಾಗುತ್ತಿದೆ. ಇದು ನೀರನ್ನು ಉಳಿಸಿ ಎಂದು ಪರಿಸರ ನಮಗೆ ನೀಡಿರುವ ಎಚ್ಚರಿಕೆ ಗಂಟೆ ಎಂದರು.

ಕೆ.ಆರ್.ಪೇಟೆಯಲ್ಲಿ ಕಾವೇರಿ, ಲಕ್ಷ್ಮಣ ತೀರ್ಥ ಹಾಗೂ ಹೇಮಾವತಿ ನದಿಗಳು ಸೇರಿ ತ್ರಿವೇಣಿ ಸಂಗಮವಾಗಿದೆ. ಇಲ್ಲಿ‌ ನೀರನ್ನು ಪೂಜಿಸಿ, ಅರಾಧಿಸಲು ಕುಂಭ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಪುಣ್ಯ ಸ್ನಾನ ಮಾಡಿ ಎಂದರು.

ಇದೇ ವೇಳೆ *ರೇಷ್ಮೆ,ಯುಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಡಾ.ಕೆ.ಸಿ.ನಾರಾಯಣ ಗೌಡ* ಅವರು ಮಾತನಾಡಿ ಕಾವೇರಿ,ಹೇಮಾವತಿ, ಲಕ್ಷ್ಮಣತೀರ್ಥ ಮೂರು ನದಿಗಳು ಸಮಾಗಮವಾಗುವ ಈ ತ್ರಿವೇಣಿ ಸಂಗಮದಲ್ಲಿ ಜಗದ್ಗುರುಗಳ ದಿವ್ಯ ಸಾನಿಧ್ಯ ದಲ್ಲಿ ಮಹಾ ಕುಂಭಮೇಳ ಆಚರಣೆಯನ್ನು ಮಾಡುತ್ತಿದ್ದೇವೆ ಎಂದರು.

ಮಂಡ್ಯ,ಮೈಸೂರು,ಚಾಮರಾಜನಗರ, ಬೆಂಗಳೂರು ಹಾಗೂ ಇನ್ನಿತರ ಜಿಲ್ಲೆಗಳಿಂದ ಭಕ್ತಾಧಿಗಳು ಮಹಾ ಕುಂಭ ಮೇಳದಲ್ಲಿ ಪಾಲ್ಗೊಂಡು ಶ್ರೀ ಮಲೈ ಮಹದೇಶ್ವರ ಸ್ವಾಮಿಗೆ ಪೂಜೆಯನ್ನು ಸಲ್ಲಿಸಿ ಪುಣ್ಯ ಸ್ನಾನವನ್ನು ಮಾಡಿ ಅದರ ಫಲವನ್ನು ಭಕ್ತಾಧಿಗಳು ಪಡೆದುಕೊಳ್ಳಿ ಎಂದರು.

ದಕ್ಷಿಣ ಕರ್ನಾಟಕದಲ್ಲಿ ಮೂರು ನದಿಗಳು ಸಂಗಮವಾಗಿದೆ ಎಂದರೆ ಅದು ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ಆಗಾಗಿ ಈ ಸ್ಥಳ ಮುಂದಿನ ದಿನಮಾನದಲ್ಲಿ ದೊಡ್ಡ ತೀರ್ಥ ಸ್ಥಾನವಾಗಿ ಬೆಳೆಯಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಇದಕ್ಕೆ ಜಗದ್ಗುರುಗಳ ಸಹಕಾರ ನೀಡಬೇಕು. ಮಹಾ ಕುಂಭಮೇಳ ಮಹೋತ್ಸವಕ್ಕೆ ಆಗಮಿಸಿರುವ ಎಲ್ಲಾ ಭಕ್ತಾದಿಗಳಿಗೆ ಹೃದಯ ಪೂರ್ವಕ ಅಭಿನಂದನೆಗಳು ಎಂದರು.

*ಕರ್ನಾಟಕದಲ್ಲೂ ಧಾರ್ಮಿಕ ಕಾರಿಡಾರ್‌ಗಳ ಅಭಿವೃದ್ದಿಯತ್ತ ಚಿಂತನೆ: ಸಚಿವೆ ಶಶಿಕಲಾ ಅ ಜೊಲ್ಲೆ*

– ಧಾರ್ಮಿಕ ಕಾರಿಡಾರ್‌ಗಳ ಅಭಿವೃದ್ದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳ ಬಸವರಾಜ ಬೊಮ್ಮಾಯಿ ಒಲವು

– ಕೆ ಆರ್‌ ಪೇಟೆಯಲ್ಲಿನ ಶ್ರೀಶ್ರೀಶ್ರೀ ಮಲೆ ಮಹದೇಶ್ವರ ಮಹಾಕುಂಭ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ
– ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರದ ವತಿಯಿಂದ ವಿಶೇಷ ಕಾರ್ಯಕ್ರಮಗಳು

ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ದೇಶದಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸುತ್ತಿರುವಂತೆ ಕರ್ನಾಟಕ ರಾಜ್ಯದಲ್ಲೂ ಧಾರ್ಮಿಕ ಕಾರಿಡಾರ್‌ ಗಳ ಅಭಿವೃದ್ದಿಗೆ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಒಲವು ತೋರಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ವರದಿ ನೀಡುವಂತೆ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು *ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಅ ಜೊಲ್ಲೆ* ಅವರು ತಿಳಿಸಿದರು.

ಕೆ ಆರ್‌ ಪೇಟೆಯಲ್ಲಿ ದಕ್ಷಿಣ ಭಾರತದ ಮಹಾಕುಂಭಮೇಳವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಮಲೆ ಮಹದೇಶ್ವರರು ಶ್ರೀಶೈಲದಿಂದ ಬಂದಾಗ ಪಾದಸ್ಪರ್ಶ ಮಾಡಿದ್ದ ಪವಿತ್ರ ಸ್ಥಳದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಬಹಳ ವಿಶೇಷ. ಪೂಜ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಮೂಲ ಧಾರ್ಮಿಕ ಸಂಸ್ಕೃತಿಯನ್ನ ಜನ ಮಾನಸದಲ್ಲಿ ಬಿತ್ತಿ ಬೆಳೆಸುವ ಕಾರ್ಯ ನಡೆಸಲಾಗುತ್ತಿದೆ. ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ನಮ್ಮ ಸರಕಾರವೂ ಚಿಂತನೆ ನಡೆಸಿದ್ದು, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

2014 ರಲ್ಲಿ ಭಾರತದ ಪ್ರಧಾನಿ ಸ್ಥಾನ ವಹಿಸಿಕೊಂಡಾಗಿನಿಂದಲೂ ನರೇಂದ್ರ ಮೋದಿಯವರು ಹಲವಾರು ಹಿಂದೂ ದೇವಾಲಯಗಳ ಗತ ವೈಭವ ಮರಳುವಂತೆ ಕ್ರಮವಹಿಸಿದ್ದಾರೆ. ಪ್ರಖ್ಯಾತ ದೇವಸ್ಥಾನಗಳ ಜೀರ್ಣೋದ್ದಾರವೂ ನಡೆಸಲಾಗಿದೆ. ಕಾಶಿ ವಿಶ್ವನಾಥ ಧಾಮ, ಶ್ರೀ ಮಹಾಕಾಲ್‌ ಲೋಕ, ಕೇದಾರನಾಥ್‌ ದೇವಾಲಯ, ಸೋಮನಾಥ ದೇವಾಲಯ, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದಾಗಿನಿಂದ ಅಲ್ಲೂ ದೇವಸ್ಥಾನಗಳ ಜೀರ್ಣೋದ್ದಾರ ನಡೆಸಲಾಗುತ್ತಿದೆ. ಇದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಧಾರ್ಮಿಕ ಕಾರಿಡಾರ್‌ಗಳನ್ನು ಅಭಿವೃದ್ದಿಗೊಳಿಸುವತ್ತ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

*ರಾಜ್ಯದಲ್ಲಿ ಧಾರ್ಮಿಕ ಕಾರಿಡಾರ್‌ಗೆ ಸಿಎಂ ಒಲವು:*

ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನ ನೀಡುವ ಮೂಲಕ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಮುಜರಾಯಿ ಇಲಾಖೆಗೆ ಮಹತ್ವ ನೀಡಿದೆ. ಇದರಿಂದಾಗಿ 10 ಹಲವು ವಿಶೇಷ ಯೋಜನೆಗಳನ್ನು ಪ್ರಾರಂಭಿಸಲು ಸಾಧ್ಯವಾಗಿದೆ. ರಾಜ್ಯದಲ್ಲೂ ಕಾಶಿ, ಉಜ್ಜೈನಿ ನಂತಹ ಕಾರಿಡಾರ್‌ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತಮ್ಮ ಒಲವು ವ್ಯಕ್ತಪಡಿಸಿದ್ದಾರೆ. ವಿಜಯನಗರ ಜಿಲ್ಲೆಯ ಪ್ರವಾಸ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮುತುವರ್ಜಿಯಲ್ಲಿ ಅಭಿವೃದ್ದಿಗೊಳಿಸಲಾದ ಕಾರಿಡಾರ್‌ ಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಲ್ಲದೇ ರಾಜ್ಯದಲ್ಲೂ ಇಂತಹ ಅಭಿವೃದ್ದಿಯನ್ನು ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ದೇವಸ್ಥಾನಗಳ ಸಮಗ್ರ ಅಭಿವೃದ್ದಿಯ ಕನಸನ್ನ ಸಾಕಾರಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಮಹಾಕುಂಭ ಮೇಳದ ಕೀರ್ತಿ ಮನೆ ಮನೆಗಳಲ್ಲಿ, ದೇಶ ವಿದೇಶಗಳಿಗೆ ತಿಳಿಯಬೇಕು. ಮೂರು ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಮಾಡಿ ಭಗವಂತನ ಆಶೀರ್ವಾದವನ್ನು ಪಡೆಯೋಣ ಎಂದು *ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ* ಅವರು ತಿಳಿಸಿದರು.

ರೇಷ್ಮೆ ಸಚಿವ ನಾರಾಯಣ ಗೌಡ ಅವರು ಜನಪರ ಕಾರ್ಯಕ್ರಮವನ್ನು ಮಾಡುತ್ತಾರೆ. ಈ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಮಾಡಿ, ಸಮಾಜದಲ್ಲಿ ಶಾಂತಿಯುತವಾಗಿ,ಉತ್ತಮ ನಾಗರಿಕರಾಗಿ ಜೀವನವನ್ನು
ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು ಸ್ವಾಮಿ ಮುಕ್ತಿದಾನಂದ ಜೀ ಮಹಾರಾಜ್, ಕಾಗಿನೆಲೆ ಕನಕಗುರು ಪೀಠ ಶ್ರೀ ಶ್ರೀ ಶಿವಾನಂದಪುರಿ ಸ್ವಾಮೀಜಿ, ಬೇಬಿ ಮಠ ಮತ್ತು ಚಂದ್ರವನ ಆಶ್ರಮ ಶ್ರೀ ಶ್ರೀ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಶ್ರೀ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಪೀಠಾಧ್ಯಕ್ಷರು ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು,ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೆ.ಗೋಪಾಲಯ್ಯ, , ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ. ಸಿಇಒ ಶಾಂತ ಎಲ್. ಹುಲ್ಮನಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು, ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ತಹಶೀಲ್ದಾರ್ ರೂಪ, ಕುಂಭ ಮೇಳ ಸಂಯೋಜಕ ಸಣ್ಣ ಸ್ವಾಮಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *