ಸಂಗೀತ ರಸಿಕರನ್ನು ಪರವಶಗೊಳಿಸಿದ ಹಂಸಲೇಖರ ನಾಲ್ವಡಿ- ನಲ್ನುಡಿ ಸಂಗೀತ ಕಾರ್ಯಕ್ರಮ

 

 

ಮೈಸೂರು:9ಅಕ್ಟೋಬರ್ 2021

ನ@ದಿನಿ

                         ತಣ್ಣನೆಯ ತಿಳಿಗಾಳಿ, ಅಲ್ಲಲ್ಲಿ ವರುಣನ ಸಿಂಚನ, ಝಗಮಗಿಸುವ ದೀಪಗಳ ನಡುವೆ ಹೊಂಬೆಳಕಿನಿಂದ ಕಂಗೊಳಿಸುತ್ತಿರುವ ಮೈಸೂರು ಅರಮನೆ ಆವರಣದಲ್ಲಿ ಸುಶ್ರಾವ್ಯ, ಸುಮಧುರವಾಗಿ ಕೇಳಿಬರುತ್ತಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಸಂಯೋಜಿಸಿದ ಸಂಗೀತದ ಅಲೆಗಳು ಸಂಗೀತ ರಸಿಕರ ಮನತಣಿಸಿತು.

                        ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ ಮೂರನೇ ದಿನವಾದ ಶನಿವಾರದಂದು ನಾದಬ್ರಹ್ಮ ಹಂಸಲೇಖ ಅವರ ಸಂಗೀತ ಕಾರ್ಯಕ್ರಮವು ನೆರೆದಿದ್ದ ಸಂಗೀತ ಪ್ರಿಯರ ಮನಸೂರೆಗೊಳಿಸಿತು.

                         ಮೊದಲಿಗೆ ರಾಜ ಮಹಾರಾಜ ಜನಗಳ ರಾಜ ಎಂದು ರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರನ್ನು ಸ್ಮರಿಸುತ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಂಡವು, ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆಯನ್ನು ಹಾಡುತ್ತಾ ಅರಮನೆ ಅಂಗಳದಲ್ಲಿ ಸುಮಧುರ ಗೀತೆಗಳ ಸುರಿಮಳೆಯನ್ನೇ ಸುರಿಸಿದರು.

                          ಗಾಯಕಿ ಪೃಥ್ವಿ ಅವರ ಸುಮಧುರ ಧ್ವನಿಯಲ್ಲಿ ಮೂಡಿಬಂದ ಓ ನನ್ನ ಚೇತನ ಆಗು ನೀ ಅನಿಕೇತನ, ಶ್ರೀ ಚಾಮುಂಡೇಶ್ವರಿ ಕುರಿತಾದ ಶ್ರೀ ಚಾಮುಂಡಿ ಮಹಾಮಾಯಾ, ಗಾಯಕ ನಿತಿನ್ ರಾಜಾರಾಮ್ ಶಾಸ್ತ್ರಿ ಅವರ ಕಂಠಸಿರಿಯಲ್ಲಿ ಮೂಡಿಬಂದ ಓಂ ಮಹಾಪ್ರಾಣ ದೀಪಂ ಶಿವಂ ಗೀತೆಯು ವೀಕ್ಷಕರನ್ನು ಭಕ್ತಿಯ ಕಡಲಲ್ಲಿ ತೇಲಿಸಿತು.

                      ನಮದೊಂದೆ ಭಾರತಂ ಗೀತೆಯನ್ನು ಹಾಡಿ ಸಭಿಕರೆಲ್ಲರಲ್ಲಿ ದೇಶಭಕ್ತಿ ಮೂಡಿಸಿದರು. ನಂತರ ಸರಿಗಮಪ ಚಾಂಪಿಯನ್ ಶಿಪ್‌ನ ಪುಟ್ಟಗಾಯಕಿ ಜ್ಞಾನ ಆಗೋ ಕರ್ನಾಟಕ… ಎಂಬ ಸೊಗಸಾದ ಗೀತೆಯು ಸೂಜಿಗಲ್ಲಿನ ಹಾಗೆ ಎಲ್ಲರ ಗಮನ ಸೆಳೆಯಿತು.

                         ಗಾಯಕ ಚಿನ್ಮಯ್ ಆತ್ರೇಯಾ ಅವರು ಹಾಡಿದ ಈ ಭೂಮಿ ಬಣ್ಣದ ಬುಗುರಿ ಗೀತೆಯು ಪ್ರತಿಯೊಬ್ಬರು ತಲೆದೂಗುವಂತೆ ಮಾಡಿತು. ಬಳಿಕ ನೆನಪಿರಲಿ ಚಿತ್ರದ ಕೂರಕ್ಕುಕ್ಕರಹಳ್ಳಿ ಕೆರೆ ಗೀತೆಯು ನೆರೆದಿದ್ದ ಯುವ ಮನಸುಗಳು ಹೆಜ್ಜೆಹಾಕುವಂತೆ ಮೋಡಿ ಮಾಡಿತು.

                           ಬಾಲ ಗಾಯಕ ಜ್ಞಾನೇಶ್ ಅವರು ಪ್ರಸ್ತುತ ಪಡಿಸಿದ ಪುಟ್ಟರಾಜ ಗವಾಯಿಗಳ ಗೀತೆಯು ಎಲ್ಲಾ ಪ್ರೇಕ್ಷಕರಿಂದಲೂ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿತು. ಗಾಯಕ ಮೋಹನ್ ಕೃಷ್ಣ ಅವರು ಹಾಡಿದ ಈ ಕನ್ನಡ ಮಣ್ಣನು ಮರಿಬೇಡ… ಓಂ ಬ್ರಹ್ಮಾನಂದ ಓಂಕಾರ… ಹಾಗೂ ಲತಾ ಹಂಸಲೇಖ ಅವರು ಪ್ರಸ್ತುತ ಪಡಿಸಿದ ಎಲೆ ಹೊಂಬಿಸಿಲೆ.. ಮುಂತಾದ ಗೀತೆಗಳು ನೆರೆದಿದ್ದವರನ್ನು ರೋಮಾಂಚನಗೊಳಿಸಿತು.

                            ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾ.ಪು.ಸಿದ್ಧಲಿಂಗಸ್ವಾಮಿ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿ.ಇ.ಓ ಎ.ಎಂ ಯೋಗೀಶ್, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಚೆನ್ನಪ್ಪ ಸೇರಿತಂತೆ ಇನ್ನಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *