ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ಕರ್ಟನ್‌ ರೇಸರ್‌ ಉದ್ಘಾಟಿಸಿದ ಎಂಪಿ ಪ್ರತಾಪ್ ಸಿಂಹ

ನಂದಿನಿ ಮೈಸೂರು

ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ಕಾರ್ಯಕ್ರಮದ ಕರ್ಟನ್‌ ರೇಸರ್‌

ಮೈಸೂರು: ಮೈಸೂರಿನ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಯಾಗಬೇಕು. ಪ್ರವಾಸಿಗರು ಮೈಸೂರಿಗೆ ಬಂದು ಹೆಚ್ಚು ದಿನಗಳ ಕಾಲ ಇರುವಂತಾಗಬೇಕು. ಈ ನಿಟ್ಟಿನಲ್ಲಿ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ಬಹಳಷ್ಟು ಸಹಕಾರಿಯಾಗಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ಅಭಿಪ್ರಾಯಪಟ್ಟರು.

ಮೈಸೂರಿನ ಹೋಟೆಲ್‌ ರಿಯೋ ಮೆರಿಡಿಯನ್‌ನಲ್ಲಿ ಮಂಗಳವಾರ ನಡೆದ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ಕರ್ಟನ್‌ ರೇಸರ್‌ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಹಿಂದೆಂದಿಗಿಂತಲೂ ವೇಗವಾಗಿ ಬೆಳೆಯುತ್ತಿದೆ. ರೈಲು, ರಸ್ತೆ ಹಾಗೂ ವಿಮಾನ ಮಾರ್ಗ ಅಭಿವೃದ್ಧಿಯಾಗುತ್ತಿದೆ. ಆದ್ದರಿಂದ ಈಗ ಮೈಸೂರಿಗೆ ಸಂಪರ್ಕ ಸುಲಭವಾಗಿದೆ. ಈ ಸಮಯದಲ್ಲಿ ಪ್ರವಾಸೋದ್ಯಮ ಇನ್ನಷ್ಟು ಬೆಳೆಯಲು ಬಹಳಷ್ಟು ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮೈಸೂರಿನಲ್ಲಿ ಎಲ್ಲ ವಯೋಮಾನದವರಿಗೂ ಸರಿಹೊಂದುವ ಪ್ರವಾಸಿ ಆಕರ್ಷಣೆಗಳಿವೆ. ಸಣ್ಣ ಮಕ್ಕಳಿಂದ ಮೊದಲುಗೊಂಡು ವಿವಿಧ ಆಸಕ್ತಿಗಳಿರುವ ಎಲ್ಲರಿಗೂ ಮೈಸೂರು ಹೇಳಿಮಾಡಿಸಿದ ಸ್ಥಳ. ಮೈಸೂರಿನಲ್ಲಿ ನೈಟ್‌ ಲೈಫ್‌ ಆರಂಭವಾಗಬೇಕು. ಸ್ಕಾಲ್‌ನಂತ್ ಸಂಸ್ಥೆಗಳಿಂದ ನಮ್ಮ ಊರಿನ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ಸ್ಕಾಲ್‌ನ ಪ್ರಯತ್ನ ಶ್ಲಾಘನೀಯ. ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ಯಶಸ್ವಿಯಾಗಲಿ ಎಂದು ಆಶಿಸಿದರು.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತಾ ಅವರು ಮಾತನಾಡಿ, ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ಪರಿಕಲ್ಪನೆ, ಯೋಜನೆ ಕೇಳಿದರೆ ಖುಷಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು. ಇದಕ್ಕೆ ನಮ್ಮ ಸಹಕಾರ ಇದೆ ಎಂದು ತಿಳಿಸಿದರು.

ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ಚೇರ್‌ಮನ್‌ ಸುದೀಪ್ತಾ ದೇಬ್‌ ಮಾತನಾಡಿ, ಕರ್ನಾಟಕ ಎರಡು ಅತಿದೊಡ್ಡ ನಗರಗಳಾದ ಬೆಂಗಳೂರು ಹಾಗೂ ಮೈಸೂರಿನಲ್ಲಿ ಅಕ್ಟೋಬರ್‌ 4ರಿಂದ 8ರವರೆಗೆ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ನಡೆಯಲಿದೆ. ಸ್ಕಾಲ್‌ನ ಇತಿಹಾಸದಲ್ಲೇ ಇದೊಂದು ವಿನೂತನ ಪ್ರಯತ್ನ. ಎರಡೂ ನಗರಗಳನ್ನು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯನ್ನಾಗಿ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಇದರ ಭಾಗವಾಗಿ ಚರ್ಚೆಗಳು, ಎಕ್ಸಿಬಿಷನ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ಲೋಗೋ, ವೆಬ್‌ಸೈಟ್‌ ಅನ್ನು ಬಿಡುಗಡೆ ಮಾಡಲಾಯಿತು. ಸ್ಕಾಲ್‌ ಇಂಟರ್‌ನ್ಯಾಷನಲ್‌ ಇಂಡಿಯಾದ ಅಧ್ಯಕ್ಷ ಕಾರ್ಲ್‌ ವಾಝ್‌, ಸ್ಕಾಲ್‌ ಬೆಂಗಳೂರು ವಿಭಾಗದ ಅಧ್ಯಕ್ಷ ಅಯ್ಯಪ್ಪ ಸೋಮಯ್ಯ, ಸ್ಕಾಲ್‌ ಮೈಸೂರು ವಿಭಾಗದ ಅಧ್ಯಕ್ಷ ಬಿ.ಎಸ್.ಪ್ರಶಾಂತ್‌, ಸ್ಕಾಲ್‌ ಮೈಸೂರು ವಿಭಾಗದ ಉಪಾಧ್ಯಕ್ಷ ಸಿ.ಎ.ಜಯಕುಮಾರ್‌ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *