ನಂದಿನಿ ಮೈಸೂರು
ಕನ್ನಡ ಭಾಷೆಯಲ್ಲಿಯೂ ಸಿಆರ್ಪಿಎಫ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು: ಸಿದ್ದರಾಮಯ್ಯ
ಕೇಂದ್ರ ಮೀಸಲು ಪೊಲೀಸ್ ಪಡೆಯ ನೇಮಕಾತಿ ಪರೀಕ್ಷೆಯಲ್ಲಿ ಭಾಷೆಯ ಸಮಸ್ಯೆಯಿಂದಾಗಿ ಜ್ಞಾನ, ಅರ್ಹತೆ ಇರುವ ಕನ್ನಡಿಗರು ಉದ್ಯೋಗವಂಚಿತರಾಗುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಮಧ್ಯಪ್ರವೇಶಿಸಿ ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. ಈ ಸಂಬಂಧ ಅವರ ಪತ್ರಿಕಾ ಹೇಳಿಕೆ ಇಂತಿದೆ:
ಕೇಂದ್ರ ಮೀಸಲು ಪೊಲೀಸ್ ಪಡೆಯ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಿರುವುದನ್ನು ತಕ್ಷಣ ಸಡಿಲಿಸಿ, ಕನ್ನಡ ಭಾಷೆಯಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟು ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಪ್ರಧಾನಿ ಮೋದಿ ಅವರನ್ನು ಆಗ್ರಹಪಡಿಸುತ್ತಿದ್ದೇನೆ.
ಭಾಷೆಯೇ ಜ್ಞಾನ ಅಲ್ಲ, ಅದು ಜ್ಞಾನದ ಸಂವಹನ ಸಾಧನ ಅಷ್ಟೆ. ಕನ್ನಡ ಭಾಷಾ ಮಾಧ್ಯಮದಲ್ಲಿ ಓದಿದ ನಮ್ಮ ಯುವಜನರು ಜ್ಞಾನಿಗಳಾಗಿದ್ದರೂ ಭಾಷೆಯ ಸಮಸ್ಯೆಯಿಂದಾಗಿ ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಇದು ಅನ್ಯಾಯ.
ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಭಾಷಾ ನೀತಿಯಿಂದಾಗಿ ಕೇಂದ್ರದಲ್ಲಿ ಕನ್ನಡಿಗ ಯುವಜನರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ, ಯುವಜನರ ಭವಿಷ್ಯ ಮಂಕಾಗುತ್ತಿದೆ.
ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯ ಭಾಷೆಗಳನ್ನು ಮೂಲೆಗೆ ತಳ್ಳಿ ಹಿಂದಿ ಭಾಷೆಯನ್ನು ನಮ್ಮ ತಲೆ ಮೇಲೆ ಹೇರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಉದ್ಯಮ, ಉದ್ಯೋಗ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಿಂದಿ ಭಾಷೆಯ ಯಜಮಾನಿಕೆ ಹೆಚ್ಚಾಗುತ್ತಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ.
ಈಗಲೂ ಕಾಲ ಮಿಂಚಿಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಮಧ್ಯೆ ಪ್ರವೇಶಿಸಿ ಸಿಆರ್ಪಿಎಫ್ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ರಾಜ್ಯ ಭಾಷೆಗಳಲ್ಲಿ ಬರೆಯಲು ಅನುಕೂಲ ಮಾಡಿಕೊಡಬೇಕು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತು ಬಿಜೆಪಿ ಸಂಸದರು ಇದಕ್ಕಾಗಿ ಪ್ರಧಾನಿಗಳ ಮೇಲೆ ಒತ್ತಡ ಹೇರಬೇಕು.