ಮೈಸೂರು:15 ಅಕ್ಟೋಬರ್ 2021
ನ@ದಿನಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಮೈಮೇಲೆ ವರ್ಣರಂಜಿತ ಚಿತ್ರಗಳು ಕಲಾವಿದರ ಕುಂಚದಲ್ಲಿ ಸುಂದರವಾಗಿ ಮೂಡಿಬಂದಿವೆ.
ಕಲಾವಿದರಾದ ನಾಗಲಿಂಗಪ್ಪ ಬಡಿಗೇರಿ, ಅಣ್ಣ ನಾರಾಯಣ ಬಡಿಗೇರಿ, ತಮ್ಮ ಅರುಣ್ ಬಡಿಗೇರಿ, ಸ್ನೇಹಿತರಾದ ಮಧು, ರವಿ 2004ರಿಂದ ನಿರಂತರವಾಗಿ ಗಜಪಡೆಯ ದೇಹದ ಮೇಲೆ ಸಾಂಪ್ರದಾಯಿಕ ಚಿತ್ರಕಲೆಯನ್ನು ಬಿಡಿಸುತ್ತಿದ್ದಾರೆ.ಈಟಿವಿ ಭಾರತದ ಜೊತೆ ಮಾತನಾಡಿದ ಕಲಾವಿದ ನಾಗಲಿಂಗಪ್ಪ ಬಡಿಗೇರಿ, ’ಆನೆಗಳ ದೇಹದ ಗಾತ್ರಕ್ಕೆ ಅನುಗುಣವಾಗಿ ಚಿತ್ರ ಬಿಡಿಸಲಾಗುತ್ತದೆ. ಮುಖದ ಮಧ್ಯದಲ್ಲಿ ಗಂಡಭೇರುಂಡ, ಹಣೆಯ ಭಾಗಕ್ಕೆ ನಾಮ, ಕಿವಿಗೆ ಶಂಖ ಮತ್ತು ಚಕ್ರ, ಸೊಂಡಿಲಿಗೆ ಹೂ ಬಳ್ಳಿ, ಹಾರುವ ಪಕ್ಷಿ, ದಂತದ ಮೇಲ್ಭಾಗ, ನಾಲ್ಕು ಕಾಲುಗಳು ಮತ್ತು ಬಾಲ ಸೇರಿದಂತೆ ಅವುಗಳ ಅಕ್ಕಪಕ್ಕದಲ್ಲಿ ವಿವಿಧ ಚಿತ್ತಾರಗಳನ್ನು ಬಿಡಿಸಿದ್ದೇವೆ’ ಎಂದು ವಿವರಿಸಿದರು.ಬೊಂಬಿನಿಂದ ಮಾಡಿದ ವಿಶೇಷ ಬ್ರಷ್ ಬಳಕೆ:ಆನೆಗಳಿಗೆ ಸ್ನಾನ ಮಾಡಿಸಿದ ಬಳಿಕ ಸಂಪೂರ್ಣವಾಗಿ ದೇಹ ಒಣಗಲು ಬಿಟ್ಟು, ಆ ನಂತರ ಮೈಮೇಲಿನ ಬಿಳಿ ಚುಕ್ಕಿಗಳನ್ನು ಕಪ್ಪು ಬಣದಿಂದ ಮುಚ್ಚಲಾಗುತ್ತದೆ. ಆ ಚುಕ್ಕಿಗಳು ಸೊಂಡಿಲು ಮತ್ತು ಕಿವಿ ಭಾಗದಲ್ಲಿ ಹೆಚ್ಚಾಗಿರುತ್ತವೆ. ಪ್ರತಿ ಆನೆಯ ಗಾತ್ರಕ್ಕೆ ತಕ್ಕಂತೆ ಚಿತ್ರಗಳು ಹಾಗೂ ಬಣ್ಣಗಳನ್ನು ಬಳಸಲಾಗುತ್ತದೆ. ಬಣ್ಣ ಬಳಿಯಲು ಬೊಂಬಿನಿಂದ ಮಾಡಿದ ವಿಶೇಷ ‘ಬ್ರಷ್’ ಬಳಸಲಾಗುತ್ತದೆ.
ಅಂಬಾರಿ ಹೊರುವ ಆನೆಯನ್ನು ಐವರು ಕಲಾವಿದರು ಶೃಂಗರಿಸುತ್ತಾರೆ. ಇದಕ್ಕೆ ಕನಿಷ್ಟ 3 ರಿಂದ 4 ಗಂಟೆ ಸಮಯಾವಕಾಶ ಬೇಕಾಗುತ್ತದೆ. ಆನೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಿತ್ರ ಬಿಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಆನೆಗಳು ಗಂಭೀರವಾಗಿ ವರ್ತಿಸುವುದು ವಿಶೇಷ.ಬೆಳಗಿನ ಜಾವದಿಂದಲೇ ಅಲಂಕಾರ ಆರಂಭ:ಗಜಪಡೆಗೆ ಅಲಂಕಾರ ಮಾಡುವ ಕೆಲಸ ಜಂಬೂಸವಾರಿಯ ದಿನ ಬೆಳಗಿನ ಜಾವ 3 ಗಂಟೆಗೆ ಆರಂಭವಾಗುತ್ತದೆ. ಬೆಳಿಗ್ಗೆ 10 ಗಂಟೆಯ ಒಳಗೆ ಎಲ್ಲ ಆನೆಗಳನ್ನು ಸಂಪೂರ್ಣವಾಗಿ ಅಲಂಕರಿಸಬೇಕು.
ನೈಸರ್ಗಿಕವಾಗಿ ಸಿದ್ಧಪಡಿಸಿದ ವಿವಿಧ ಬಣ್ಣಗಳಿಂದ ಆನೆಗಳನ್ನು ಅಲಂಕಾರ ಕಾರ್ಯ ನಡೆಯುತ್ತದೆ. ಅದಕ್ಕಾಗಿ 5 ರಿಂದ 7 ಕೆಜಿ ಬಣ್ಣ ಬಳಸಲಾಗುತ್ತದೆ. ಬಣ್ಣದ ಪುಡಿಯನ್ನು ಮರದ ಅರಗಿಗೆ (ಅಂಟು) ಮಿಶ್ರಣ ಮಾಡಿ 3 ರಿಂದ 4 ದಿನ ನೆನೆ ಹಾಕಿ ಹದ ಮಾಡಲಾಗುತ್ತದೆ. ಬಳಿಕ, ಆನೆಗಳ ಮೈಮೇಲೆ ಬಳಿಯಲಾಗುತ್ತದೆ. ಮರದ ಅಂಟು ಮಿಶ್ರಣದಿಂದ ಆನೆಗಳ ಮೈಮೇಲಿನ ಬಣ್ಣವು ಒಂದು ವಾರವಾದರೂ ಉಳಿಯುತ್ತದೆ.