ನಂದಿನಿ ಮೈಸೂರು
ಸ್ವಚ್ಛತೆ ಇದ್ದೆಡೆ ಆರೋಗ್ಯಭಾಗ್ಯ ಇರುತ್ತದೆ : ಸಾಹಿತಿ ಬನ್ನೂರು ರಾಜು
ಮೈಸೂರು: ನಮ್ಮ ಸುತ್ತಲಿನ ಪರಿಸರ ಸರ್ವರೀತಿಯಲ್ಲೂ ಸ್ವಚ್ಛವಾಗಿದ್ದಲ್ಲಿ, ಪರಿಶುದ್ಧವಾಗಿ ದ್ದಲ್ಲಿ ಆರೋಗ್ಯಲಕ್ಷ್ಮಿ ಇರುತ್ತಾಳೆಂದೂ ಎಲ್ಲ ಭಾಗ್ಯ ಗಳಿಗಿಂತಲೂ ಆರೋಗ್ಯಭಾಗ್ಯ ದೊಡ್ಡದೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಠಿತ ಕಾರ್ಮಿಕ ಸಂಘಟನೆಗಳಲ್ಲೊಂದಾದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ಆಷಾಢ ಮಾಸದ ಅಂಗವಾಗಿ ಇಂದು ಬುಧವಾರ ಮುಂಜಾನೆ 6-30 ರಲ್ಲಿ ಚಾಮುಂಡಿ ಬೆಟ್ಟದ ಪಾದದ ಬಳಿ ಆಯೋಜಿಸಿದ್ದ ಬೆಟ್ಟದ ಸಾವಿರ ಮೆಟ್ಟಿಲುಗಳ ಸ್ವಚ್ಛತೆ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವನ್ನು ನಾಲ್ವಡಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಾವು ಜೀವಿಸುವ ಪರಿಸರ, ಸೇವಿಸುವ ಆಹಾರ, ಕುಡಿಯುವ ನೀರು, ಹಾಗೂ ಉಸಿರಾಡುವ ಗಾಳಿ ಇದೆಲ್ಲವೂ ಶುದ್ಧವಾಗಿದ್ದು ನಾವೆಲ್ಲರೂ ಆರೋಗ್ಯವಾಗಿರಬೇಕೆಂದರೆ ಪ್ರತಿಯೊಬ್ಬರಲ್ಲೂ ಸ್ವಚ್ಛತೆಯ ಪರಿಸರ ಪ್ರಜ್ಞೆ ಇರಬೇಕೆಂದರು.
ಗಾಂಧೀಜಿ ಅವರಿಂದ ರಾಜರ್ಷಿಯೆಂದು ಕರೆಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರೂ ಕೂಡ ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡಿದ್ದರು.ಇದು ಇವತ್ತಿಗೂ ನಮ್ಮನ್ನು ಆಳುವವರಿಗೆ ಆದರ್ಶವಾಗಬೇಕಿದೆ. ಸ್ವಚ್ಛತೆ ಎಂದರೆ ಕೇವಲ ಕಸ ತೆಗೆಯುವುದಷ್ಟೇ ಅಲ್ಲ. ಜಲಮಾಲಿನ್ಯ, ಭೂ ಮಾಲಿನ್ಯ, ವಾಯುಮಾಲಿನ್ಯ, ಹಾಗೂ ಶಬ್ದಮಾಲಿನ್ಯ ಸೇರಿದಂತೆ ಪ್ರತಿಯೊಂದು ಮಾಲಿನ್ಯವನ್ನೂ ತೊಡೆದು ಹಾಕುವುದರ ಜೊತೆಗೆ ಮನುಷ್ಯನ ಮನೋಮಾಲಿನ್ಯವನ್ನು ಸ್ವಇಚ್ಛೆಯಿಂದ ಅವರಿಗವರೇ ಶುದ್ಧೀಕರಿಸಿ ಕೊಳ್ಳಬೇಕು. ಏಕೆಂದರೆ ಇಂದು ರಾಜಕಾರಣ ಸೇರಿದಂತೆ ಪ್ರತಿಯೊಂದು ಸಾರ್ವಜನಿಕ ಕ್ಷೇತ್ರಗಳು ಕೂಡ ಬಹುಪಾಲು ಅಶುಚಿತ್ವದಿಂದ ಕೂಡಿ ರೋಗಗ್ರಸ್ಥವಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಚ್ಛ ಪರಿಸರದ ಮಹತ್ವವನ್ನು ಅರಿತು ಮೊದಲು ತಮ್ಮನ್ನು ತಾವು ಶುದ್ಧೀಕರಿಸಿ ಕೊಂಡರೆ ಇಡೀ ಪರಿಸರ ಸ್ವಚ್ಛವಾಗುತ್ತದೆಂದ ಅವರು, ಈ ದಿಸೆಯಲ್ಲಿ ಇಂತಹ ಸ್ವಚ್ಛತೆಯ ಕೈಂಕರ್ಯಕ್ಕೆ ಕೈಜೋಡಿಸಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ಇತರೆ ಸಂಘಟನೆಗಳಿಗೆ ಮಾದರಿಯಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರದ ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಒಳಚರಂಡಿ ವಿಭಾಗದ ವಿಶ್ರಾಂತ ಇಂಜಿನಿಯರ್ ಕೆಂಪೇಗೌಡ ಹಾಗೂ ಕಾನೂನು ಸಲಹೆಗಾರ ಸುಂದರ್ ರಾಜ್ ಅವರು ಕಾರ್ಯಕ್ರಮ ಕುರಿತು ಮಾತನಾಡಿ, ಸಂಘದ ಸ್ವಚ್ಚ ಪರಿಸರದ ಬಗೆಗಿನ ಕಾಳಜಿಯನ್ನು ಮತ್ತು ಪ್ರಾಮಾಣಿಕ ಸೇವೆಯನ್ನು ಮನಸಾರೆ ಶ್ಲಾಘಸಿ ಇದನ್ನು ಇತರರೂ ಅನುಸರಿಸಬೇಕೆಂದ ಅವರು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆಯಲ್ಲಿ ಇಂಥಾ ಸಾರ್ಥಕವಾದ ಕಾರ್ಯಕ್ರಮ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯ ನುಡಿಗಳನ್ನು ಆಡಿದ ಸಂಘದ ಅಧ್ಯಕ್ಷ ಜಯನಗರ ಎಸ್. ಮಹೇಶ್ ಅವರು, ಮೈಸೂರಿನ ಹಿರಿಮೆ ಎನಿಸಿರುವ ತಾಯಿ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಪ್ರತೀ ವರ್ಷ ಆಷಾಡ ಮಾಸದಲ್ಲಿ ನಮ್ಮ ಸಂಘದಿಂದ ಸ್ವಚ್ಛ ಮಾಡುವ ಸೇವಾ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದೇವೆ. ಅದೇ ರೀತಿಯಲ್ಲಿ ಈ ವರ್ಷವೂ ಮಾಡುತ್ತಿದ್ದೇವೆ.ಹಾಗೆಯೇ ನಮ್ಮ ಸಂಘವು ಅನೇಕ ರೀತಿಯ ಸಮಾಜಮುಖಿ ಸೇವಾ ಕೈಂಕರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದು ಇದಕ್ಕಾಗಿ ಎಲ್ಲರ ಒಗ್ಗೂಡುವಿಕೆ ಮತ್ತು ಪ್ರೋತ್ಸಾಹವನ್ನು ನಿರೀಕ್ಷಿಸುತ್ತೇವೆ ಎಂದರು. ಪ್ರಾರಂಭದಲ್ಲಿ ನಿರ್ದೇಶಕ ಚಂದ್ರೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಬನ್ನೂರು ಕೆ.ರಾಜು ಮತ್ತು ವಿಶ್ರಾಂತ ಇಂಜಿನಿಯರ್ ಕೆಂಪೇಗೌಡ ಹಾಗೂ ಕಾನೂನು ಸಲಹೆಗಾರ ಸುಂದರ್ ರಾಜ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರವಿ ಕುಮಾರ್, ಸಹ ಕಾರ್ಯದರ್ಶಿ ಎಸ್.ಪಳನಿಸ್ವಾಮಿ, ಖಜಾಂಚಿ ಎಂ. ಪ್ರಕಾಶ್, ನಿರ್ದೇಶಕರಾದ ಚಂದ್ರೇಗೌಡ, ರುದ್ರಸ್ವಾಮಿ, ಮೊಹಮದ್ ಜಾಕಿರ್ ಹುಸೇನ್, ಶಿವರಾಜ್, ಯೋಗೇಶ್ ಹೆಬ್ಬಾಳು ಹಾಗೂ ಹಿರಿಯ ಸದಸ್ಯರಾದ ಬಸವರಾಜು, ಕುಮಾರ್, ಸಿದ್ದರಾಜು, ಕಾಳೇಗೌಡ, ಮುನಿರತ್ನ, ಮಹದೇವು, ಕೃಷ್ಣ ಹಾಗೂ ಛಾಯಾಗ್ರಾಹಕ ಅನಿಲ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.
ವೇದಿಕೆಯ ಕಾರ್ಯಕ್ರಮದ ನಂತರ ನೂರಕ್ಕೂ ಹೆಚ್ಚು ಮಂದಿ ಸದಸ್ಯರು ಚಾಮುಂಡಿ ಬೆಟ್ಟದಲ್ಲಿನ ಸಾವಿರ ಮೆಟ್ಟಿಲುಗಳನ್ನೂ ಸ್ವಚ್ಚಗೊಳಿಸಿ ಭಕ್ತಾದಿಗಳ ಹಾಗೂ ಸಾರ್ವಜನಿಕರ ಪ್ರಸಂಶೆಗೆ ಪಾತ್ರರಾದರು.