ಸ್ಟೋರಿ:ನಂದಿನಿ ಮೈಸೂರು
ವಿಶೇಷ ಮಾಸ ಶಕ್ತಿ ದೇವತೆಗಳನ್ನು ಆರಾಧಿಸುವ ಮಾಸ ಅದುವೇ ಆಷಾಢ ಮಾಸ. ಹೌದು ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆಗೆ ಮುಂಜಾನೆ 3:30 ರಿಂದ ರುದ್ರಾಭಿಷೇಕಾ,ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.ನಂತರ ವಿವಿಧ ಪೂಜಾ ಕೈಂಕರ್ಯ ಜರುಗಿದವು. ನಾಗಲಕ್ಷ್ಮೀ ಅಲಂಕಾರದಲ್ಲಿ ನಾಡ ಅಧಿದೇವತೆ ಕಂಗೊಳಿಸುತ್ತಿದ್ದಳು.ದೇವಾಲಯದ ಸುತ್ತ ಎಳನೀರು ತೆಂಗಿನ ಕಾಯಿ,ಕಬ್ಬು ಸೇರಿದಂತೆ ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಸಂಪೂರ್ಣವಾಗಿ ದೇವಾಲಯ ಫಲ ತಾಂಬೂಲ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು.
ಆಶಾಢ ಮಾಸದಲ್ಲಿ ಯಾವುದೇ ಮದುವೆ ,ಸಮಾರಂಭಗಳು ಜರುಗುವುದಿಲ್ಲ. ವಿಶೇಷವಾಗಿ ಶಕ್ತಿ ದೇವರನ್ನ ಪೂಜಿಸುವ ಮಾಸ ಈ ಆಷಾಢ ಮಾಸ.ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ತಾಯಿ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಲಿದೆ. ಇಂದು ಚಾಮುಂಡಿ ಬೆಟ್ಟದಲ್ಲಿ ನಾಡ ದೇವತೆಗೆ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿದೆ.ಮುಂಜಾನೆಯಿಂದಲೇ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಮುಂದಿನ 3 ಆಷಾಢ ಶುಕ್ರವಾರ ಹಾಗೂ ವರ್ಧಂತಿ ದಿನ ವಿಶೇಷ ಪೂಜೆ ಜರುಗಲಿದೆ.ಭಕ್ತರ ದರ್ಶನಕ್ಕಾಗಿ ಮೈಸೂರು ಜಿಲ್ಲಾಡಳಿತದಿಂದ ಸುರಕ್ಷಿತ ವ್ಯವಸ್ಥೆ ಮಾಡಲಾಗಿದೆ ಎಂದು ಚಾಮುಂಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದರು.
ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ಅನೇಕ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಧರ್ಮ ದರ್ಶನದ ವ್ಯವಸ್ಥೆ, 300 ರೂ ಟಿಕೇಟ್ ವ್ಯವಸ್ಥೆ.50 ರೂಗಳ ಟಿಕೇಟ್ ವ್ಯವಸ್ಥೆ ಮಾಡಲಾಗಿದೆ.ಹಿರಿಯ ನಾಗರೀಕರಿಗೆ ಉಚಿತ ಪ್ರವೇಶ ಕಲ್ಪಸಲಾಗಿದೆ.
ಇಂದು ಮುಂಜಾನೆಯಿಂದಲೇ ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡು ಹರಿದು ಬಂದಿದ್ದು ಮಹಿಳೆಯರು ಹೆಚ್ಚು ಹೆಚ್ಚು ಬರುತ್ತಿರುವುದು ವಿಶೇಷವಾಗಿದೆ.ದೇವಸ್ಥಾನಕ್ಕೆ ಆಗಮಿಸಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.ಹೆಚ್ಚಿನ ಬಸ್ ವ್ಯವಸ್ಥೆಗೂ ಅವಕಾಶ ಮಾಡಿಕೊಡಲಾಗಿದೆ.
ಕುಡಿಯುವ ನೀರು,ಶೌಚಾಲಯ ವ್ಯವಸ್ಥೆ, ಪ್ರಸಾದ ವಿತರಣೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ತಿಳಿಸಿದರು.
ಇನ್ನೂ ಭದ್ರತಾ ದೃಷ್ಟಿಯಿಂದ 1 ಸಾವಿರಕ್ಕೂ ಹೆಚ್ಚು ಪೋಲಿಸರನ್ನ ನಿಯೋಜಿಸಲಾಗಿದೆ.ಜನ ಜಂಗುಳಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಾರೆ ಆದ್ದರಿಂದ ಭಕ್ತರ ಸುರಕ್ಷೆಗಾಗಿ ನೂರಕ್ಕೂ ಹೆಚ್ಚು ಪೋಲೀಸರು ಮಫ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೋಟೆಡ್ ,ಕೆಎಸ್ ಆರ್ ಪಿ ,ಸಿ ಆರ್ ,ಅಶ್ವದಳ ಸೇರಿದಂತೆ ಒಟ್ಟು 1500 ಪೋಲೀಸರನ್‌ನ ನಿಯೋಜಿಸಲಾಗಿದೆ.ಶಕ್ತಿ ಯೋಜನೆ ಜಾರಿ ಹಿನ್ನೆಲೆ ಜಿಲ್ಲೆ,ರಾಜ್ಯಗಳಿಗೆ ಮಹಿಳೆಯರು ಆಗಮಿಸುತ್ತಾರೆ ಅವರ ರಕ್ಷಣೆಗಾಗಿ ಮಹಿಳಾ ಪೋಲಿಸರನ್ನ ನೇಮಿಸಲಾಗಿದೆ ಎನ್ನುತ್ತಾರೆ ಡಿಸಿಪಿ ಮುತ್ತುರಾಜ್.
ಸಿನಿ ಗಣ್ಯರ ಆಗಮನ:
ಚಾಮುಂಡೇಶ್ವರಿಯ ದರ್ಶನ ಪಡೆಯಲು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ರು. ಚಾಮುಂಡೇಶ್ವರಿ ತಾಯಿಗೆ ಸೀರೆ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು.
ಭಕ್ತರಿಗೆ ಪ್ರಸಾದ ವಿತರಣೆ:
ದೇವಿ ದರ್ಶನ ಪಡೆದು ಹೊರ ಬರುತಿದ್ದಂತೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ನೂರಡಿ ರಸ್ತೆಯ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿಯಿಂದ ಬಾಳೆ ಎಲೆ ಊಟ ಹಾಗೂ ಈ ಬಾರಿ ಮ್ಯಾಂಗೋ ಬರ್ಫಿ ವಿತರಿಸಿದ್ದಾರೆ.
ದೇವರ ದರ್ಶನ ಪಡೆದು ಬಂದ ಭಕ್ತರು ಈ ಬಾರಿ ಸುಗಮವಾಗಿ ಚಾಮುಂಡೇಶ್ವರಿ ದರ್ಶನ ಮಾಡಿದೆವು .ಉತ್ತಮ ರೀತಿಯಲ್ಲಿ ಮೈಸೂರು ಜಿಲ್ಲಾಡಳಿದ ವ್ಯವಸ್ಥೆ ಮಾಡಿದೆ.ಎಲ್ಲಿಯೂ ನೂಕು ನುಗ್ಗಲು ಇರಲಿಲ್ಲ.ಸರಾಗವಾಗಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದೆವು ಜಿಲ್ಲಾಡಳಿತಕ್ಕೆ ಒಂದು ಥ್ಯಾಂಕ್ಸ್ ಹೇಳುತ್ತೇನೆ ಎನ್ನುತ್ತಿದ್ದಾರೆ ಭಕ್ತರು.
ಪಾಸ್ ವ್ಯವಸ್ಥೆಗೆ ಬ್ರೇಕ್ ಹಾಕಿದ ಕಾಂಗ್ರೆಸ್ ಸರ್ಕಾರ:
ಹೌದು ಪ್ರತಿ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನಕ್ಕೆ ವಾಹನದಲ್ಲಿ ಬರುವವರಿಗೆ ವಿವಿಐಪಿ,ವಿವಿಪಿ ಸೇರಿದಂತೆ ಇತರೆ ಪಾಸ್ ಗಳನ್ನು ನೀಡಲಾಗುತ್ತಿತ್ತು.ಇದರಿಂದ ಗೊಂದಲ ಗಲಾಟೆಗಳು ಏರ್ಪಡುತ್ತಿತ್ತು. ಆದರೆ ಈ ಬಾರಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಲ್ಲಾ ರೀತಿಯ ಪಾಸ್ ವ್ಯವಸ್ಥೆಗೆ ಬ್ರೇಕ್ ಹಾಕಿ ಆದೇಶ ಹೊರಡಿಸಿದೆ.