ಕರ್ನಾಟಕದಲ್ಲಿ ಭಾಜಪ ಪೂರ್ಣ ಬಹುಮತದೊಂದಿಗೆ ಅಭೂತಪೂರ್ವ ಜಯ ಸಾಧಿಸಲಿದೆ – ಅಮಿತ್ ಶಾ

*ಕರ್ನಾಟಕದಲ್ಲಿ ಭಾಜಪ ಪೂರ್ಣ ಬಹುಮತದೊಂದಿಗೆ ಅಭೂತಪೂರ್ವ ಜಯ ಸಾಧಿಸಲಿದೆ – ಅಮಿತ್ ಶಾ*

ಮೇ 10 ರಂದು ನಡೆಯಲಿರುವ 224 ಸ್ಥಾನಗಳ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ರಾಜ್ಯದಲ್ಲಿ ಸತತ ಎರಡನೇ ಅವಧಿಗೆ ಸರ್ಕಾರ ರಚಿಸುವ ಮೂಲಕ ದಾಖಲೆ ಬರೆಯುವ ಭರವಸೆಯಲ್ಲಿದ್ದಾರೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ, ಚುನಾವಣಾ ಪೂರ್ವದಲ್ಲಿ ಅಥವಾ ನಂತರದಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಚುನಾವಣಾ ಚಾಣಕ್ಯ ಅಮಿತ್ ಶಾ ಸ್ಪಷ್ಟವಾಗಿ ಸ್ಪಷ್ಟಪಡಿಸಿದರು.

ಅಮಿತ್ ಶಾರವರು “ಕರ್ನಾಟಕದಲ್ಲಿ ನಾನು ಒಂಬತ್ತು ದಿನಗಳನ್ನು ಕಳೆದಿದ್ದೇನೆ. ರಾಜ್ಯದ ಐದೂ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಆದ್ದರಿಂದ ಅರ್ಧದಷ್ಟು ಕ್ಷೇತ್ರಗಳಿಗಿಂತ ಹೆಚ್ಚು ಗೆದ್ದು ರಾಜ್ಯದಲ್ಲಿ ಸಂಪೂರ್ಣ ಬಹುಮತ ಸಾಧಿಸಲಿದ್ದೇವೆ ಎಂದು ವಿಶ್ವಾಸದಿಂದ ಹೇಳಬಲ್ಲೆ. ಇದು ಮೋದಿ ನಾಯಕತ್ವದಲ್ಲಿಯೇ ನಡೆಯುತ್ತದೆ. ಚಿಂತಿಸಬೇಡಿ,” ಎಂದು ಖಾಸಗಿ ವಾಹಿನಿಯಲ್ಲಿ ಆಯೋಜಿಸಿದ್ದ ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಹೇಳಿದರು.

ಜೆಡಿಎಸ್ ಜೊತೆಗಿನ ಯಾವುದೇ ಮೈತ್ರಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಶಾ, ಕರ್ನಾಟಕದ ಎಲ್ಲಾ 224 ಸ್ಥಾನಗಳಲ್ಲಿ ಭಾಜಪ ಸ್ವಂತ ಬಲದಿಂದಲೇ ಸ್ಪರ್ಧಿಸಲಿದೆ ಮತ್ತು ರಾಜ್ಯದಲ್ಲಿ ನಮ್ಮ ಪಕ್ಷವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನೋಡುತ್ತಿಲ್ಲ, ನಮ್ಮ ಪಕ್ಷ ಕಳೆದ ಚುನಾವಣೆಯಲ್ಲಿ ಗಳಿಸಿದ 104 ಸ್ಥಾನಗಳಿಗಿಂತ ಹೆಚ್ಚು ಕ್ಷೇತ್ರಗಳನ್ನು ಜಯಿಸುವ ವಿಶ್ವಾಸವಿದೆ.

“ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ,” ಎಂದ ಶಾ , “ಲಕ್ಷಾಂತರ ಕಾರ್ಯಕರ್ತರೊಂದಿಗೆ” ಚರ್ಚೆಯ ನಂತರ ನಮ್ಮ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಹೊರತರಲಿದೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿವೆ.

ಮಾಜಿ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವ್ಯಂಗ್ಯವಾಡಿದ ಶಾ, ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅವರನ್ನು ಪ್ರಧಾನಿ ಮೋದಿ ಇದಿರು ತಂದು ಹೋರಾಡಿದರೆ, ಬಿಜೆಪಿಗೆ ಅದಕ್ಕಿಂತ ಉತ್ತಮ ಗೆಲುವಿನ ಸೂತ್ರವಿಲ್ಲವೆಂದು ಹೇಳಿದರು.

”ಅವರು ಕರ್ನಾಟಕ ಚುನಾವಣೆಯನ್ನು ‘ಮೋದಿ v/s ಗಾಂಧಿ’ ಹೋರಾಟ ಎಂದು ಬಿಂಬಿಸಿದರೆ, ನಮಗೇನು ಅಭ್ಯಂತರವಿಲ್ಲ. ವಾಸ್ತವವಾಗಿ, ಬಿಜೆಪಿಗೆ ಇದಕ್ಕಿಂತ ಉತ್ತಮವಾದ ಗೆಲುವಿನ ಸೂತ್ರ ಸಿಗಲು ಸಾಧ್ಯವಿಲ್ಲವೆಂದು” ಶಾ ನ್ಯೂಸ್ 18 ರೈಜಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಹೇಳಿದಾಗ ಪ್ರೇಕ್ಷಕರು ನಗುವಿನ ಅಲೆಗಳಲ್ಲಿ ತೇಲಿದರು.

ದೆಹಲಿಯ ರಾಜಕೀಯ ಪಂಡಿತರ ಒಂದು ವಿಭಾಗದ ಪ್ರಕಾರ ಹಳೆಯ ಭವ್ಯವಾದ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸಲು, ಕಾಂಗ್ರೆಸ್‌ಗೂ ಒಬ್ಬ ಅಮಿತ್ ಶಾ ತುಂಬಾ ಅಗತ್ಯವಿದೆ ಎಂದು ನಂಬುತ್ತಾರೆ. ಅವರ ಇನ್ನೊಂದು ಅಭಿಪ್ರಾಯವೆಂದರೆ, ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯ ಭವಿಷ್ಯವನ್ನು ಬೇರೆಯವರಿಗಿಂತ ಉತ್ತಮವಾಗಿಸಲು ರಾಹುಲ್ ಗಾಂಧಿ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಹಲವು ಚುನಾವಣೆಗಳಲ್ಲಿ ಗಾಂಧಿ ಪ್ರಚಾರ ಮಾಡಿದಲ್ಲೆಲ್ಲಾ ಕಾಂಗ್ರೆಸ್ ತುಂಬಾ ಕಳಪೆ ಪ್ರದರ್ಶನವನ್ನು ನೀಡಿದೆ.

ಕರ್ನಾಟಕದಲ್ಲಿ ಒಬಿಸಿ ವರ್ಗದಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ಜಾರಿಗೆ ತಂದಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಬಿಜೆಪಿ ಸರ್ಕಾರವು ಇತ್ತೀಚೆಗೆ ಅದನ್ನು ರದ್ದುಪಡಿಸಿ ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತರಿಗೆ ಹಂಚಿಕೆ ಮಾಡಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಅಸಂವಿಧಾನಿಕ ಕ್ರಮ. ಇದನ್ನು ಮೊದಲೇ ತೆಗೆದು ಹಾಕಬೇಕಿತ್ತು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅಮಿತ್ ಶಾ ಅಷ್ಟಕ್ಕೇ ನಿಲ್ಲದೆ, ಲೋಕಸಭೆಯಿಂದ ರಾಹುಲ್ ಗಾಂಧಿಯವರ ಅನರ್ಹತೆ ಮತ್ತು ನಂತರ ಕಾಂಗ್ರೆಸ್ ಸೃಷ್ಟಿಸುತ್ತಿರುವ ಗದ್ದಲದ ಬಗೆಗಿನ ಪ್ರಶ್ನೆಗೆ ಶಾ, “ಗಾಂಧಿ ಕುಟುಂಬವು ತನಗಾಗಿ ಪ್ರತ್ಯೇಕ ಕಾನೂನನ್ನು ಏಕೆ ಬಯಸುತ್ತದೆ? ಒಂದು ಕುಟುಂಬಕ್ಕೆ ಪ್ರತ್ಯೇಕ ಕಾನೂನು ಬೇಕೇ ಎಂಬುದನ್ನು ಭಾರತದ ಜನತೆಯೇ ನಿರ್ಧರಿಸಬೇಕು ಎಂದರು.

“ಮೋದಿ” ಸಮುದಾಯದ ಬಗೆಗಿನ ಅವಹೇಳನಕಾರಿ ಹೇಳಿಕೆಗಾಗಿ ಸೂರತ್ ಕೋರ್ಟ್ ಇತ್ತೀಚಿಗೆ ರಾಹುಲ್ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಇದರ ಆಧಾರದ ಮೇಲೆ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿತು. ತರುವಾಯ, ರಾಹುಲ್‌ಗೆ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಲಾಯಿತು. ಈ ಇಡೀ ಸಂಚಿಕೆಯನ್ನು ತನ್ನ ನಾಯಕನ ವಿರುದ್ಧದ ಪಿತೂರಿ ಎಂದು ಬಿಂಬಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಮತ್ತು ವಿವಿಧ ರಾಜ್ಯಗಳಲ್ಲಿನ ನಿರ್ಣಾಯಕ ಚುನಾವಣೆಗಳ ಮುನ್ನ ಇದರಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಆದರೆ ಶಿಕ್ಷೆಯ ವಿರುದ್ಧ ಇದುವರೆಗೆ ಯಾವುದೇ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿಲ್ಲ.

ಪ್ರಧಾನಿಯನ್ನು ದೂಷಿಸುತ್ತಾ ಕೂರುವ ಬದಲು, ದೋಷಾರೋಪಣೆಯ ವಿರುದ್ಧ ಉನ್ನತ ನ್ಯಾಯಾಲಯಗಳಿಗೆ ತೆರಳುವಂತೆ ಗಾಂಧಿಗೆ ಸೂಚಿಸಿದ ಶಾ, ರಾಹುಲ್ ಗಾಂಧಿಯವರ ದುರಹಂಕಾರವೇ ಅವರಿಗೆ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸದಂತೆ ತಡೆಯುತ್ತಿದೆ ಎಂದು ಹೇಳಿದರು. “ಇವರಿಗೆ ಈ ದುರಹಂಕಾರ ಎಲ್ಲಿಂದ ಬರುತ್ತದೆ? ಇಲ್ಲಿಯವರೆಗೆ ಲಾಲೂ ಪ್ರಸಾದ್ ಯಾದವ್, ಜೆ ಜಯಲಲಿತಾ ಮತ್ತು ರಶೀದ್ ಆಳ್ವಿ ಸೇರಿದಂತೆ 17 ಜನರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ, ಆದರೆ ಯಾರೂ ಇವರಂತೆ ಗದ್ದಲ ಸೃಷ್ಟಿಸಲಿಲ್ಲ ”ಎಂದು ಶಾ ಕಾಂಗ್ರೆಸ್‌ನ ಕಿವಿ ಹಿಂಡಿದರು.

ಎಡಪಂಥೀಯ ಉಗ್ರವಾದದ (Left Wing Extremism) ಕುರಿತಾದ ಪ್ರಶ್ನೆಗೆ ಉತ್ತರಿಸಿದ ಶಾ, ಕೇಂದ್ರದಲ್ಲಿನ ಕಳೆದ ಒಂಬತ್ತು ವರ್ಷಗಳ ಭಾಜಪದ ಆಡಳಿತದಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಮತ್ತು ಎಡಪಂಥೀಯ ಉಗ್ರವಾದ ಸಂಬಂಧಿತ ಘಟನೆಗಳು ನಿರಂತರವಾಗಿ ಕ್ಷೀಣಿಸುತ್ತಿವೆ ಎಂದು ಹೇಳಿದರು. ಒಂದೆರಡು ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಅವರು ಚಿಕ್ಕ ಅಸ್ತಿತ್ವ ಹೊಂದಿದ್ದರೂ, ಈ ಪಿಡುಗಿನ ವಿರುದ್ಧದ ಹೋರಾಟವು ವಿಜಯದ ಹಾದಿಯಲ್ಲಿದೆ. ಹಾಗೇ ಎಡಪಂಥೀಯ ಉಗ್ರವಾದ ಸಂಬಂಧಿತ ಹಿಂಸಾತ್ಮಕ ಘಟನೆಗಳ ಸಂಖ್ಯೆಯು 76% ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *