ಪ್ರತಿಪಕ್ಷಗಳ ಸಭೆಯ ಕುರಿತು ವ್ಯಂಗ್ಯವಾಡುತ್ತಾ, ಮೋದಿಯವರು 300ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದ ಅಮಿತ್ ಶಾ

*ಪ್ರತಿಪಕ್ಷಗಳ ಸಭೆಯ ಕುರಿತು ವ್ಯಂಗ್ಯವಾಡುತ್ತಾ, ಮೋದಿಯವರು 300ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದ ಅಮಿತ್ ಶಾ*

ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯು ಕೇವಲ ಒಂದು “ಫೋಟೋ ಸೆಷನ್” ಎಂದ ಶಾ, ಅವರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ನರೇಂದ್ರ ಮೋದಿಯವರ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗುವುದು ಪೂರ್ವನಿರ್ಧರಿತವಾಗಿದೆ ಎಂದು ಹೇಳಿದರು.

“ಇಂದು, ಪಾಟ್ನಾದಲ್ಲಿ ಒಂದು ಫೋಟೋ ಸೆಷನ್ ನಡೆಯುತ್ತಿದೆ. ವಿರೋಧ ಪಕ್ಷಗಳ ನಾಯಕರೆಲ್ಲಾ ಸೇರಿದ್ದಾರೆ. ಅವರು ಬಿಜೆಪಿ, ಎನ್‌ಡಿಎ ಮತ್ತು ಮೋದಿಯವರಿಗೆ ಸವಾಲಿನ ಸಂದೇಶವನ್ನು ರವಾನಿಸಲು ಬಯಸುತ್ತಾರೆ. ಅವರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವರಲ್ಲಿ ಒಗ್ಗಟ್ಟು ಎಂದಿಗೂ ಸಾಧ್ಯವಿಲ್ಲ. ಮತ್ತು, ಅವರು ಒಗ್ಗಟ್ಟಾಗಿ ಜನರ ಬಳಿಗೆ ಹೋದರೂ, ಮೋದಿಯವರು ಮತ್ತೊಮ್ಮೆ 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಪ್ರಧಾನಿಯಾಗಲಿದ್ದಾರೆ ”ಎಂದು ಶಾ ಜಮ್ಮುವಿನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು.

ಸರ್ಕಾರದ ಪ್ರತಿಯೊಂದು ಕ್ರಮವನ್ನು ವಿರೋಧಿಸುವ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಗೃಹ ಸಚಿವ ಅಮಿತ್ ಶಾರವರು, ಎನೇ ಮಾಡಿದರೂ ನಿರಂತರವಾಗಿ ವಿರೋಧಿಸುವ ಮೂಲಕ ಮಾಜಿ ಕಾಂಗ್ರೆಸ್ ಸಂಸದರಲ್ಲಿ ವಿರೋಧಿಸುವ ಅಭ್ಯಾಸವು ಆಳವಾಗಿ ಬೇರೂರಿಬಿಟ್ಟಿದೆ ಎಂದು ಹೇಳಿದರು.

“ಅವರು (ರಾಹುಲ್ ಗಾಂಧಿ) 370 ನೇ ವಿಧಿಯೇ ಇರಲಿ, ರಾಮ ಮಂದಿರವೇ ಇರಲಿ ಅಥವಾ ತ್ರಿವಳಿ ತಲಾಖ್ ಆಗಿರಲಿ, ಎಲ್ಲವನ್ನೂ ವಿರೋಧಿಸುತ್ತಾರೆ. ಹಾಗೆ ಮಾಡುವ ಮೂಲಕ, ಅವರು ಯಾವುದೇ ವಿಷಯವಿರಲಿ ಎಲ್ಲವನ್ನೂ ವಿರೋಧಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ ಎಂದರು.

1947 ಮತ್ತು 2014 ರ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸುಮಾರು 42,000 ಜನರ ಹತ್ಯೆಗಳಿಗೆ, ಪಾಟ್ನಾದ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ಗಾಂಧಿ, ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬಗಳು ನೇರ ಹೊಣೆ ಎಂದು ಶಾ ವಾಗ್ದಾಳಿ ನಡೆಸಿದರು.

ಹಾಗೇ ಮುಂದುವರೆದ ಶಾ “ಮೇಡಂ ಮುಫ್ತಿ ಮತ್ತು ಅಬ್ದುಲ್ಲಾ ಸಾಹೇಬ್‌ರವರೇ, ಯುಪಿಎ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ 7,327 ಭಯೋತ್ಪಾದನಾ ಘಟನೆಗಳು ನಡೆದಿವೆ. ನಮ್ಮ ಒಂಬತ್ತು ವರ್ಷಗಳ ಅವಧಿಯಲ್ಲಿ, ಈ ಸಂಖ್ಯೆ 2,350 ಕ್ಕೆ ಇಳಿದಿದೆ. ಇದರರ್ಥ 70% ಇಳಿಕೆಯಾಗಿದೆ ಎಂಬುದನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ ಎಂದು” ಹೇಳಿದರು.

ಕೇಂದ್ರದಲ್ಲಿ ಮೋದಿ ಸರ್ಕಾರದ ಒಂಬತ್ತು ವರ್ಷಗಳ ಆಡಳಿತದ ಸಾಧನೆಗಳನ್ನು ಕುರಿತು ಮಾತನಾಡಿದ ಶಾ, “ ಯುಪಿಎ ಆಡಳಿತದಲ್ಲಿ 12 ಲಕ್ಷ ಕೋಟಿ ಹಗರಣ ಮಾಡಿದ್ದರು, ಆದರೆ ಮೋದಿಜಿಯವರ ಆಡಳಿತ ತೆರೆದ ಪುಸ್ತಕದಂತಿದೆ. ಒಂಬತ್ತು ವರ್ಷಗಳ ಆಡಳಿತದಲ್ಲಿ ಮೋದಿಯವರ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪವೂ ಇಲ್ಲ.

ಬಿಜೆಪಿ ಸರ್ಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಪೂರ್ಣ ಕಡಿವಾಣ ಹಾಕಿದ್ದು, ಇಂದು “ಭಯೋತ್ಪಾದನೆ ಮರಣ ಶಯ್ಯೆಯಲ್ಲಿದೆ” ಎಂದರು.

“ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತದಲ್ಲಿ 60,327 ಭಯೋತ್ಪಾದನಾ ಘಟನೆಗಳು ನಡೆದಿದ್ದವು. ಆದರೆ ಮೋದಿಯವರ ಒಂಬತ್ತು ವರ್ಷಗಳ ಆಡಳಿತದಲ್ಲಿ ಭಯೋತ್ಪಾದನೆ ಸಂಪೂರ್ಣವಾಗಿ ಇಳಿಮುಖವಾಗಿದೆ. ವಿಧಿ 370 ರದ್ದಾದ ನಂತರ ಕಳೆದ 47 ತಿಂಗಳುಗಳಲ್ಲಿ ಕೇವಲ 32 ಮುಷ್ಕರಗಳು ನಡೆದಿದ್ದು, ಕಲ್ಲು ತೂರಾಟವು 90% ರಷ್ಟು ಕಡಿಮೆಯಾಗಿದೆ. ಜಮ್ಮು ಕಾಶ್ಮೀರದ ಯುವಕರು ಕಲ್ಲುಗಳನ್ನು ತೊರೆದು ಲ್ಯಾಪ್‌ಟಾಪ್ ಮತ್ತು ಪುಸ್ತಕಗಳನ್ನು ಎತ್ತಿ ಕೊಳ್ಳುತ್ತಿದ್ದಾರೆ, ”ಎಂದು ಹೇಳಿದ ಶಾ, 2022 ರಲ್ಲಿಯೇ ಸುಮಾರು 1.88 ಕೋಟಿ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಮೇ 22 ಮತ್ತು ಮೇ 25 ರ ನಡುವೆ ಜಮ್ಮುಕಾಶ್ಮೀರದಲ್ಲಿ ಆಯೋಜಿಸಲಾದ G20 ಶೃಂಗಸಭೆಯ ಯಶಸ್ಸು ಈ ಪ್ರದೇಶದಲ್ಲಿ ಶಾಂತಿಯ ಆಳ್ವಿಕೆಯ ಆರಂಭವಾಗಿದೆ ಎಂಬುದಕ್ಕೆ ಸಾಕ್ಷಿ ಎಂದರು.

Leave a Reply

Your email address will not be published. Required fields are marked *