ಪಿರಿಯಾಪಟ್ಟಣ:22 ಆಗಸ್ಟ್ 2022
ನಂದಿನಿ ಮೈಸೂರು
ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಶಾಸಕ ಕೆ.ಮಹದೇವ್ ತಿಳಿಸಿದರು.
ತಾಲ್ಲೂಕಿನ ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2021-22 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ದೇಶದ ಅಭಿವೃದ್ಧಿಯಲ್ಲಿ ಯುವಶಕ್ತಿ ಪಾತ್ರ ಅಪಾರವಾಗಿದ್ದು ಶಿಕ್ಷಣ ಪಡೆಯುವ ಸಂದರ್ಭ ಗುರುಗಳ ಮಾರ್ಗದರ್ಶನದಲ್ಲಿ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು, ನಾನು ಸಹ ಗುರುಗಳಾದ ಟಿ.ಸಿ ವಸಂತರಾಜೇ ಅರಸ್ ಅವರ ಮಾರ್ಗದರ್ಶನದಲ್ಲಿ ರಾಜಕೀಯಕ್ಕೆ ಬಂದು ಶಿಕ್ಷಣ ಕ್ಷೇತ್ರಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಈ ಕಾಲೇಜಿಗೆ ಸುಮಾರು 5 ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಿ ಸಾಕಷ್ಟು ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಎಸ್.ಬಿ ಅಪ್ಪಾಜಿಗೌಡ ಅವರು ಮಾತನಾಡಿ ಪಟ್ಟಣಗಳಂತೆ ಗ್ರಾಮೀಣ ಭಾಗದಲ್ಲಿ ಸಹ ವಿದ್ಯಾಭ್ಯಾಸಕ್ಕೆ ಸರ್ಕಾರ ಒತ್ತು ನೀಡಿ ಹಂತಹಂತವಾಗಿ ಶಿಕ್ಷಣಕ್ಕೆ ಬೇಕಾಗುವ ಸೌಲಭ್ಯಗಳನ್ನು ಒದಗಿಸುತ್ತಿದೆ ಅದರಲ್ಲಿಯೂ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದರಿಂದ ಅವರು ಪ್ರಬುದ್ಧರಾಗಿ ಕುಟುಂಬದ ನಿರ್ವಹಣೆ ಜತೆಗೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಸಹ ಸರಿದೂಗಿಸಿಕೊಳ್ಳಲು ಅನುಕೂಲಕರವಾಗಲಿದೆ ಎಂಬ ದೂರದೃಷ್ಟಿ ಇಟ್ಟುಕೊಂಡು ಕೆಲಸ ನಿರ್ವಹಿಸುತ್ತಿದೆ ಎಂದರು.
ನಿವೃತ್ತ ಜಂಟಿ ನಿರ್ದೇಶಕ ಟಿ.ಸಿ ವಸಂತರಾಜೇ ಅರಸ್ ಅವರು ಮಾತನಾಡಿ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಶಿಕ್ಷಣ ಬಹಳ ಮುಖ್ಯವಾದುದು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ತಮ್ಮ ಜೀವನ ರೂಪಿಸಿಕೊಳ್ಳುವುದರಲ್ಲಿ ಯುವಕ ಯುವತಿಯರು ಶ್ರಮವಹಿಸಬೇಕೆಂದು ಸಲಹೆ ನೀಡಿದರು.
ಅಂತಾರಾಷ್ಟ್ರೀಯ ಜನಪದ ಗಾಯಕ ಅಮ್ಮ ರಾಮಚಂದ್ರ ರವರು ನಾಡಗೀತೆ, ಒಳಿತು ಮಾಡುವ ಮನಸ್ಸು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಾಡನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿ ಅವರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
ಪ್ರಾಂಶುಪಾಲೆ ಡಾ.ಎಸ್.ಜಿ ಚೈತ್ರ ಅವರು ಮಾತನಾಡಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಜತೆಗೆ ಪಠ್ಯೇತರ ಚಟುವಟಿಕೆಗಳ ಮಾಹಿತಿ ನೀಡಿ ಜ್ಞಾನಾರ್ಜನೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಇದೇ ವೇಳೆ ಪ್ರಥಮ ದರ್ಜೆ ಕಾಲೇಜಿಗೆ ವಿಜ್ಞಾನ ವಿಭಾಗ ಪ್ರಾರಂಭ ಮಾಡಬೇಕು ಹಾಗೂ ದ್ವಿಚಕ್ರ ವಾಹನ ನಿಲ್ದಾಣದ ವ್ಯವಸ್ಥೆ ಮತ್ತು ಕಾಲೇಜಿಗೆ ಹೋಗಲು ಇರುವ ರಸ್ತೆಯನ್ನು ದ್ವಿಪಥ ರಸ್ತೆ ಮಾಡಿಸಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಯುವ ಮುಖಂಡ ಗಗನ್, ಬೆಟ್ಟದತುಂಗ ಗ್ರಾ.ಪಂ ಅಧ್ಯಕ್ಷ ದೇವರಾಜು, ಸದಸ್ಯೆ ಪ್ರೀತಿ ಅರಸ್, ರಾಜಶೇಖರ್, ತಾ.ಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ, ರಾಜೇಅರಸ್, ಹರೀಶ್ ರಾಜೇ ಅರಸ್, ಪ್ರಾಧ್ಯಾಪಕರಾದ ಉದಯ್ ಕುಮಾರ್, ಶಿಲ್ಪಶ್ರೀ, ರೂಪಕುಮಾರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.